‘ಸಿಡಿ’ ಸುಳಿಗೆ ಸಿಲುಕಿದ ಯಡಿಯೂರಪ್ಪ-ಅನಂತ್ ಕುಮಾರ್ (Video)

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa-and-Anat-Kumar as

ಬೆಂಗಳೂರು.ಫೆ.13 : ರಾಜ್ಯ ರಾಜಕೀಯದಲ್ಲಿ ಇದೀಗ ಡೈರಿ ಹಾಗೂ ಸಿಡಿಗಳ ಅಬ್ಬರ ಜೋರಾಗಿದೆ. ಕಳೆದ 2 ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇಂದ್ರಕ್ಕೆ 1 ಸಾವಿರ ಕೋಟಿ ಕಪ್ಪ ಕೊಟ್ಟಿದ್ದಾರೆ ಎಂದು ಆರೋಪ ಮಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈಗ ತಾವೇ ಖೆಡ್ಡಾದಲ್ಲಿ ಸಿಕ್ಕಿಹಾಕಿ ಕೊಂಡಿದ್ದಾರೆ.  ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಗೆ ಸಾವಿರ ಕೋಟಿ ಕೊಟ್ಟಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ನಡುವೆ ನಡೆದ ಸಂಭಾಷಣೆಯ ಸಿಡಿಯನ್ನ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿಯಲ್ಲಿ ರವಿವಾರ ನಡೆದಂತಹ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭಾಷಣ ಮಾಡುತ್ತಿರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ಕುಮಾರ್ ನಡುವೆ ನಡೆದಿರುವ ಸಂಭಾಷಣೆ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ಗೆ ಕಪ್ಪ ನೀಡಿರುವ ವಿಚಾರವನ್ನು ಉಭಯ ನಾಯಕರು ಒಪ್ಪಿಕೊಂಡಿದ್ದಾರೆ ಎನ್ನಲಾದ ಸಿಡಿಯನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆಗೊಳಿಸಿದರು.  ಸೋಮವಾರ ವಿಧಾನಸೌಧದಲ್ಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಹೈಕಮಾಂಡ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ 1 ಸಾವಿರ ಕೋಟಿ ರೂ. ಕಪ್ಪ ನೀಡಿದ್ದಾರೆ ಎಂದು ಆರೋಪ ಮಾಡಿರುವ ಯಡಿಯೂರಪ್ಪ 24 ಗಂಟೆಯೊಳಗೆ ರಾಜ್ಯದ ಜನತೆಯ ಮುಂದೆ ದಾಖಲೆಗಳನ್ನಿಡಬೇಕು ಎಂದು ಆಗ್ರಹಿಸಿದರು.

ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಸಿಎಂ ಸಿದ್ದರಾಮಯ್ಯ ವಿರುದ್ದದ ಆರೋಪ ಕುರಿತು ಮಾತುಕತೆ ನಡೆಸಿದ ಸಿಡಿಯನ್ನ ಕಾಂಗ್ರೆಸ್ ನಾಯಕರಾದ ವಿ.ಎಸ್ ಉಗ್ರಪ್ಪ ಸಚಿವ ಎಂ.ಬಿಪಾಟೀಲ್, ಸಚಿವ ಬಸವರಾಜ ರಾಯರೆಡ್ಡಿ ಬಿಡುಗಡೆ ಮಾಡಿದ್ದಾರೆ.  ಆದಾಯ ತೆರಿಗೆ ಹಾಗೂ ಜಾರಿನಿರ್ದೇಶನಾಲಯದ ಮಾಹಿತಿಗಳು ಹೇಗೆ ಸೋರಿಕೆಯಾಗುತ್ತಿವೆ. ಯಡಿಯೂರಪ್ಪ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೋ ಅಥವಾ ಈ ಇಲಾಖೆಯು ಬಿಜೆಪಿ ಪಕ್ಷದ ಒಂದು ಅಂಗವೋ ಎಂಬುದು ಗೊತ್ತಾಗುತ್ತಿಲ್ಲ. ಭ್ರಷ್ಟಾಚಾರ, ನೋಟುಗಳ ಅಮಾನ್ಯೀಕರಣ, ಕಪ್ಪುಹಣದ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರಮೋದಿ, ಸಮಯ ವ್ಯರ್ಥಮಾಡದೆ, ಈ ಪ್ರಕರಣವನ್ನು ಸುಪ್ರೀಂಕೋಟ್ರ್ನ ಹಾಲಿ ನ್ಯಾಯಾಧೀಶರಿಂದ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ಬಿಜೆಪಿ ಸರಕಾರದ ಅಧಿಕಾರವಧಿಯಲ್ಲಿ ಅಕ್ರಮ ಗಣಿಗಾರಿಕೆ, ಬಿಡಿಎ, ಕೆಐಎಡಿಬಿಯಿಂದ ಸುಮಾರು 1 ಲಕ್ಷ ಕೋಟಿ ರೂ.ಗಳನ್ನು ಲೂಟಿ ಹೊಡೆದಿದ್ದು, ಅದರಲ್ಲಿ ಬಿಜೆಪಿ ಹೈಕಮಾಂಡ್ಗೆ ಕಪ್ಪ ಹೋಗಿದೆಯೆ ಎಂಬುದು ಗೊತ್ತಾಗಬೇಕು. ರಾಜ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಒಂದೇ ಒಂದು ರೂಪಾಯಿ ಕಪ್ಪವನ್ನು ಹೈಕಮಾಂಡ್ಗೆ ಸಲ್ಲಿಕೆಯಾಗಿಲ್ಲ ಎಂದು ಎಂದು ಉಗ್ರಪ್ಪ ಹೇಳಿದರು.
ಇಬ್ಬರ ನಡುವಿನ ಸಂಭಾಷಣೆಯ ಪ್ರಮುಖಾಂಶಗಳನ್ನು ಓದಿ ಹೇಳಿದ ಸಚಿವ ಎಂ.ಬಿ.ಪಾಟೀಲ್, ಈ ಸಂಭಾಷಣೆಯಲ್ಲಿ ತಾವೂ ಸಹ ಹೈ ಕಮಾಂಡ್ ಗೆ ಹಣ ಕೊಟ್ಟಿರುವುದಾಗಿ ಅನಂತಕುಮಾರ್ ಮತ್ತು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ.ಆದರೆ ಯಾರಾದ್ರೂ ಇದನ್ನು ಡೈರಿಯಲ್ಲಿ ಬರೆದಿಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.ಅಲ್ಲದೆ ಮುಂಬರುವ ಚುನಾವಣೆವರೆಗೆ ಈ ಪ್ರಕರಣ ಜೀವಂತ ಇಡುವಂತೆ ಅನಂತಕುಮಾರ್ ಸಲಹೆ ಮಾಡುತ್ತಾರೆ ಎಂದು ವಿವರ ನೀಡಿದರು.

ಇನ್ನು ಈ ಕುರಿತು ಸಿಡಿ ಬಿಡುಗಡೆ ಮಾಡಿದ ಬಳಿಕ ಪ್ರತಿಕ್ರಿಯಿಸಿರುವ ವಿಎಸ್ ಉಗ್ರಪ್ಪ ಯಡಿಯೂರಫ್ಪ, ಅನಂತಕುಮಾರ್ ಮಾತುಕತೆಯ ವಿವರದ ಬಗ್ಗೆ ಸುಪ್ರಿಂ ಕೋರ್ಟ್ ನ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ನಮ್ಮ.ಸಿಎಂ ಕೊಟ್ಟಿರುವ ಬಗ್ಗೆ ದಾಖಲೆ.ಇಲ್ಲಾ. ನಾವು ಹಣ ಕೊಟ್ಟಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ.ಪ್ರಧಾನಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.  ಈ ಸಿಡಿಯಲ್ಲಿನ ಸಂಭಾಷಣೆ ಬಗ್ಗೆ ವಿವರ ನೀಡಿರು ವಿ.ಎಸ್ ಉಗ್ರಪ್ಪ, ಸಿಎಂ ಸಿದ್ದರಾಮಯ್ಯ ಹೈ ಕಮಾಂಡ್.ಗೆ ಹಣ ಕೊಟ್ಟಿಲ್ಲ. ಬಿಎಸ್ ವೈ ದಾಖಲೆ.ಇಲ್ಲದೆ ಈ ರೀತಿಯ ಹೇಳಿಕೆ ಸರಿಯಲ್ಲ. ಸರ್ಕಾರವನ್ನ ಉರುಳಿಸಲು ಬಿಎಸ್ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿದರು.

ಇನ್ನು ಈ ಸಿಡಿ ಕುರಿತಂತೆ ಇದೀಗ ಕಾಂಗ್ರೆಸ್ ವಲಯದಿಂದ ವ್ಯಾಪಕ ಟೀಕಾ ಪ್ರಹಾರವೇ ಹರಿದುಬರುತ್ತಿದ್ದು, ಚುನಾವಣೆ ಗೆಲುವಿಗೆ ಬಿಜೆಪಿ ನಾಯಕರು ನೀಚ ರಾಜಕಾರಣಕ್ಕೆ ಇಳಿದಿದ್ದಾರೆ. ಸಾವಿರ ಕೋಟಿ ಕಪ್ಪ ಕೇವಲ ಬಿಜೆಪಿ ಷಡ್ಯಂತ್ರ ಎಂದು ಅವರು ಆರೋಪಿಸಿದ್ದಾರೆ.  ಇದಕ್ಕೂ ಮುನ್ನ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರಡ್ಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ಗೆ 1 ಸಾವಿರ ಕೋಟಿ ರೂ.ಕಪ್ಪ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಅಧಿಕಾರವಿಲ್ಲದೆ ಹತಾಶರಾಗಿರುವ ಅವರು, ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಗಾರಿದರು.

ಯಡಿಯೂರಪ್ಪ ಇತಿಹಾಸ ಏನು ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರ ಅಧಿಕಾರವಧಿಯಲ್ಲಿ ರಾಜ್ಯದಲ್ಲಿ ನಡೆದಂತಹ ಭ್ರಷ್ಟಾಚಾರ, ಸಂಪುಟ ಸಹೋದ್ಯೋಗಿಗಳಿಂದ ನಡೆದಂತಹ ಅನಾಚಾರ, ಅತ್ಯಾಚಾರಗಳನ್ನು ಯಾರೂ ಮರೆತಿಲ್ಲ. ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋದಂತಹ ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಅವರು ಟೀಕಿಸಿದರು.  ಸಿದ್ದರಾಮಯ್ಯ ನೇತೃತ್ವದ ಸರಕಾರವು ಕಳೆದ ಮೂರುವರೆ ವರ್ಷಗಳಿಂದ ಜನಪರವಾದ ಆಡಳಿತ ನೀಡುತ್ತಿದ್ದಾರೆ. ಸರಕಾರದ ಜನಪ್ರಿಯತೆಯನ್ನು ಸಹಿಸಿಕೊಳ್ಳದೆ ಯಡಿಯೂರಪ್ಪ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸ್ವತಃ ಭ್ರಷ್ಟಾಚಾರದ ಆರೋಪವನ್ನು ಹೊತ್ತಿರುವವರು ಮತ್ತೊಬ್ಬರ ವಿರುದ್ಧ ದಾಖಲೆಗಳಿಲ್ಲದೆ ಆರೋಪ ಮಾಡಲು ಯಾವ ನೈತಿಕತೆಯಿದೆ ಎಂದು ಬಸವರಾಜರಾಯರಡ್ಡಿ ಪ್ರಶ್ನಿಸಿದರು.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ವಿಧಾನಪರಿಷತ್ ಸದಸ್ಯ ಗೋವಿಂದರಾಜು ಮನೆ ಮೇಲೆ ದಾಳಿ ನಡೆಸಿ ಡೈರಿ ವಶಕ್ಕೆ ಪಡೆದಿರುವುದು, ಉಕ್ಕಿನ ಸೇತುವೆ ನಿರ್ಮಾಣದಲ್ಲಿ ಕಮಿಷನ್ ಪಡೆಯಲಾಗಿದೆ ಎಂದು ಯಡಿಯೂರಪ್ಪ ಆರೋಪಿಸುವ ಬದಲು, ಈ ಸಂಬಂಧ ದಾಖಲೆಗಳು ಇದ್ದರೆ ಬಿಡುಗಡೆ ಮಾಡಲಿ. ದಾಳಿಯ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗುವ ದಾಖಲೆಗಳ ಕುರಿತು ಸಂಬಂಧಪಟ್ಟ ವ್ಯಕ್ತಿಯನ್ನು ಹೊರತುಪಡಿಸಿ ಮೂರನೆಯವರಿಗೆ ಅದರ ಮಾಹಿತಿ ನೀಡುವುದು ಕಾನೂನು ಬಾಹಿರ. ಯಡಿಯೂರಪ್ಪ ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದು ನಾಚಿಕೆಗೇಡು ಎಂದು ಅವರು ಹೇಳಿದರು.

ಪ್ರತಿಕ್ರಿಯೆಗೆ ಬಿಎಸ್ ವೈ-ಅನಂತ್ ಕುಮಾರ್ ನಕಾರ :

ಇದೇ ವೇಳೆ ಕಾಂಗ್ರೆಸ್ ಸಿಡಿ ಕುರಿತಂತೆ ಮಾಧ್ಯಮ ಪ್ರತಿನಿಧಿಗಳು ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಪ್ರಶ್ನಿಸಿದಾಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅವರು ಹೊರಟು ಹೋಗಿದ್ದಾರೆ.

ಯಡಿಯೂರಪ್ಪ ಹಾಗೂ ಅನಂತಕುಮಾರ್ ಸಂಭಾಷಣೆ ಹೀಗಿದೆ?.

ಅನಂತಕುಮಾರ್: ನಿಮ್ ಕಾಲದಲ್ಲಿ ಕೊಟ್ಟಿದ್ದೀರಿ.
ಯಡಿಯೂರಪ್ಪ: ಹಾಂ..
ಅನಂತಕುಮಾರ್: ನಿಮ್ ಕಾಲದಲ್ಲಿ ಕೊಟ್ಟಿದ್ದೀರಿ, ನಾನೂ ಕೊಟ್ಟಿದ್ದೀನಿ. ನಾನು ಕೊಟ್ಟಿಲ್ಲ ಅಂತ ಹೇಳ್ತಿಲ್ಲ. ಆದ್ರೆ, ಸಾವಿರ ಕೋಟಿ ಕೊಟ್ಟಿಲ್ಲ ಅಂತ ಹೇಳಿದ್ದಾನೆ. ಎಷ್ಟು ಕೋಟಿ ಕೊಟ್ಟಿದ್ದೀವಿ ಅಂತ ಅವರೇ ಹೇಳಿಬಿಟ್ಟಿದ್ದಾರೆ .
ಯಡಿಯೂರಪ್ಪ: ಕೊಟ್ಟಿರ್ತಾರೆ. ಆದ್ರೆ, ಅದನ್ನ ಬರೆದುಕೊಂಡು ಇಟ್ಟಿರ್ತಾರಾ?
ಅನಂತಕುಮಾರ್ : ನೀವು ಕಲ್ಲು ಬೀಸಿದ್ರೆ ಹೊತ್ತಿಕೊಳ್ಳುತ್ತೆ
ಅನಂತಕುಮಾರ್ : ಅವ್ರು ಸಾವಿರ ಕೋಟಿ ಕೊಟ್ಟಿಲ್ಲ ಅಂತ ಯಾವನೂ ಒಪ್ಪಿಕೊಳ್ಳಲ್ಲ. ಕೊಟ್ಟಿದ್ದಾನೆ ಅಂತಾನೇ ಹೇಳೋದು
ಯಡಿಯೂರಪ್ಪ: ಆದರೆ, ಆ ಡೈರಿ ಈಚೆಗೆ ಬರಲಿಲ್ಲ..
ಅನಂತಕುಮಾರ್ : ಈಗ ಎಲೆಕ್ಷನ್ ತನಕ ಉತ್ತರ ಕೊಡುತ್ತಾ (ಕಾಂಗ್ರೆಸ್‍ನವರು) ತಿರುಗಬೇಕಾಗುತ್ತೆ, ತಿರುಗಲಿ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin