‘ಸಿದ್ದ’ನಿಗೆ ಅಸ್ಸೋಂ ವೈದ್ಯರಿಂದ ಚಿಕಿತ್ಸೆ
ಬೆಂಗಳೂರು, ನ.4- ಮಂಚನಬೆಲೆ ಜಲಾಶಯದ ಬಳಿ ಗಾಯಗೊಂಡು ಅಸ್ವಸ್ಥಗೊಂಡಿರುವ ಆನೆ ಸಿದ್ದನಿಗೆ ಚಿಕಿತ್ಸೆ ನೀಡಲು ಅಸ್ಸೋಂನಿಂದ ಪಶು ವೈದ್ಯರನ್ನು ಕರೆಸಲಾಗಿದೆ ಎಂದು ಅರಣ್ಯ ಸಚಿವ ರಮಾನಾಥ ರೈ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸ್ಸೋಂನಿಂದ ಬಂದಿರುವ ವೈದ್ಯರು ಆನೆ ಸಿದ್ದನಿಗೆ ಚಿಕಿತ್ಸೆ ನೀಡಲಿದ್ದಾರೆ. ಆಹಾರ ನೀಡುವುದರ ಜತೆಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ವಿದೇಶದಲ್ಲಾದರೆ ಹೆಲಿಕಾಪ್ಟರ್ನಲ್ಲಿ ಕೊಂಡೊಯ್ದು ಚಿಕಿತ್ಸೆ ನೀಡುತ್ತಾರೆ. ಆದರೆ, ನಮ್ಮಲ್ಲಿ ಅದು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಾಧ್ಯವಿರುವ ಎಲ್ಲ ರೀತಿಯ ಚಿಕಿತ್ಸೆಗಳನ್ನೂ ಕೊಡಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಆನೆಯ ಮುಂಗಾಲಿಗೆ ಪೆಟ್ಟು ಬಿದ್ದಿರುವುದರಿಂದ ತೊಂದರೆ ಉಂಟಾಗಿದೆ. ತಜ್ಞ ವೈದ್ಯರುಗಳಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸಿದ್ದನ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದೆ ಎಂದರು.
ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ನಿಯಂತ್ರಿಸಿ ಕ್ರಮ ಕೈಗೊಳ್ಳಲಾಗಿದ್ದು, ಈ ಸಂಘರ್ಷಕ್ಕೆ ಅರಣ್ಯ ಭೂಮಿಯ ಒತ್ತುವರಿಯೂ ಒಂದು ಪ್ರಮುಖ ಕಾರಣ ಎಂದರು.
ಅರಣ್ಯ ಭೂಮಿಯಿಂದ ಒತ್ತುವರಿದಾರರನ್ನು ತೆರವುಗೊಳಿಸಿದರೆ ಸರ್ಕಾರ ಒಕ್ಕಲೆಬ್ಬಿಸುತ್ತಿದೆ ಎಂಬ ಆರೋಪ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
► Follow us on – Facebook / Twitter / Google+