ಸಿದ್ದರಾಮಯ್ಯನವರು ಕಾಂಗ್ರೆಸ್ ನಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ : ಹೆಚ್ಡಿಕೆ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-vs-Kumaraswamy

ಬೆಂಗಳೂರು, ಜ.15- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್‍ನಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಸವಾಲು ಹಾಕಿದರು. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಎಂದೂ ಕೂಡ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸುವ ಮೂಲಕ ತಮ್ಮ ಸಾಮಥ್ರ್ಯ ಸಾಬೀತುಪಡಿಸಿಲ್ಲ. 2006ರಲ್ಲಿ ಜೆಡಿಎಸ್ ತೊರೆದು ಹೋದಾಗಲೂ ಕಾಂಗ್ರೆಸ್ ಶಕ್ತಿಯ ಮೇಲೆ ತಿಣುಕಾಡಿ ಉಪಚುನಾವಣೆಯಲ್ಲಿ ಕೇವಲ 200 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ ಎಂದು ಲೇವಡಿ ಮಾಡಿದರು.

ಯಾವುದೇ ಪಕ್ಷದ ಹಂಗಿಲ್ಲದೆ ಸ್ವತಂತ್ರವಾಗಿ ಜೆಡಿಎಸ್‍ಅನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿದ್ದೇವೆಯೇ ಹೊರತು ಪರಿಸ್ಥಿತಿ ಲಾಭ ಪಡೆಯಲು ಹವಣಿಸಿಲ್ಲ. ಜೆಡಿಎಸ್ ಅಧಿಕಾರಕ್ಕಾಗಿ ಎಂದೂ ಕೂಡ ರಾಷ್ಟ್ರೀಯ ಪಕ್ಷಗಳ ಮನೆ ಬಾಗಿಲಿಗೆ ಹೋಗಿಲ್ಲ ಎಂದರು. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಅವಕಾಶವಾದಿ, ಸಮಯ ಸಾಧಕ ಪಕ್ಷಗಳಾಗಿದ್ದು, ಪರಿಸ್ಥಿತಿಯ ಲಾಭ ಪಡೆದು ಪ್ರಾದೇಶಿಕ ಪಕ್ಷಗಳನ್ನು ಬಲಿ ಪಡೆಯುವ ಕೆಲಸ ಮಾಡುತ್ತಿವೆ ಎಂದು ದೂರಿದರು. ಮಾಜಿ ಪ್ರಧಾನಿ ದೇವೇಗೌಡರು ಸ್ವತಂತ್ರವಾಗಿ ಚುನಾವಣೆಯಲ್ಲಿ ಗೆದ್ದು ತೋರಿಸಿದ್ದಾರೆ. ಅಷ್ಟೇ ಏಕೆ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದು, ಜೆಡಿಎಸ್ ಕಟ್ಟಿ ಬೆಳೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕರ್ನಾಟಕದ ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಳ್ಳುವ ನಿಲುವಿಗೆ ಬಂದಿದ್ದಾರೆ. ತಮ್ಮ ಪುತ್ರನಿಗೆ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಲು ಒದ್ದಾಡುತ್ತಿದ್ದಾರೆ. ಅವರ ಪರಿಸ್ಥಿತಿಯೇ ಹೀಗಿರುವಾಗ ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದರು.

ರಾಷ್ಟ್ರೀಯ ಪಕ್ಷಗಳಿಗಿಂತ ಮುಂದಿದೆ:

ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಜೆಡಿಎಸ್ ರಾಜ್ಯದಲ್ಲಿ ಮುಂದಿದೆ ಎಂಬುದು ವಾಸ್ತವದ ಸಂಗತಿ. ಚುನಾವಣಾ ಪೂರ್ವ ಸಮೀಕ್ಷೆಗಳು ಏನೇ ಬಂದಿರಲಿ, ಅದರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಜನರ ಮನಸ್ಸನ್ನು ಅರಿತಿದ್ದು ವಾಸ್ತವದ ಸಂಗತಿ. ಎರಡೂ ಪಕ್ಷಗಳಿಗಿಂತ ಜೆಡಿಎಸ್ ಮುಂದಿದೆ ಎಂದು ಹೇಳಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೇಕಿರುವ ಸರಳ ಬಹುಮತ 113ರ ಗುರಿ ಸಾಧಿಸುತ್ತೇವೆ. ಅದರಲ್ಲಿ ಸಂದೇಹ ಬೇಡ. ನಮ್ಮ ಪಕ್ಷ ಕೂಡ ಆಂತರಿಕವಾಗಿ ಸಮೀಕ್ಷೆ ನಡೆಸಿದ್ದು, ಅದರಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತಲೂ ಮುಂದಿದೆ. ಅದರ ಆಧಾರದ ಮೇಲೆ ಆತ್ಮವಿಶ್ವಾಸದಿಂದ ನಮ್ಮ ಪಕ್ಷ ಮುಂದೆ ಅಧಿಕಾರಕ್ಕೆ ಬರಲಿದೆ ಎಂದು ಹೇಳುತ್ತಿದ್ದೇವೆ ಎಂದರು.

ಕಳೆದ 10 ವರ್ಷಗಳ ಬಿಜೆಪಿ-ಕಾಂಗ್ರೆಸ್ ಆಡಳಿತದಿಂದ ಜನರು ಬೇಸತ್ತಿದ್ದಾರೆ. ನಿರುದ್ಯೋಗಿಗಳು ಉದ್ಯೋಗವಿಲ್ಲದೆ ಕಂಗೆಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಅಭಿವೃದ್ಧಿ ಆಧಾರದ ಮೇಲೆ ಚುನಾವಣೆಗೆ ಹೋಗುತ್ತೇವೆಯೇ ಹೊರತು ರಾಷ್ಟ್ರೀಯ ಪಕ್ಷಗಳಂತೆ ಹಿಂದುತ್ವದ ಮೇಲಲ್ಲ ಎಂದರು. ಪವಿತ್ರ ಸಂಕ್ರಾಂತಿ ಹಬ್ಬದಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವು ರೀತಿಯ ನೋವು ಅನುಭವಿಸಿದ್ದರು. ಪಕ್ಷೇತರರಾಗಿ ಗೆದ್ದು ಬಹುಮತ ಕೊರತೆ ಎದುರಿಸುತ್ತಿದ್ದ ಬಿಜೆಪಿಗೆ ಬೆಂಬಲ ನೀಡಿದ್ದರು. ಇದೀಗ ಜೆಡಿಎಸ್‍ಗೆ ಸೇರುವ ಮೂಲಕ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ತೀರ್ಮಾನಿಸಿದ್ದಾರೆ ಎಂದು ಅವರು ಹೇಳಿದರು. ಸುಭದ್ರ ಮತ್ತು ಉತ್ತಮ ಆಡಳಿತ ಬಯಸುವವರು ಜೆಡಿಎಸ್‍ಗೆ ಇನ್ನೂ ಹಲವು ಮಂದಿ ಬರುವ ನಿರೀಕ್ಷೆ ಇದೆ. ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

Facebook Comments

Sri Raghav

Admin