ಸಿದ್ದರಾಮಯ್ಯನವರು ಯಾವ ಲೆಕ್ಕದಲ್ಲಿ ದಲಿತರಿಗೆ ಶೇ.72ಕ್ಕೆ ಮೀಸಲಾತಿ ಕೊಡ್ತಾರೆ..?

ಈ ಸುದ್ದಿಯನ್ನು ಶೇರ್ ಮಾಡಿ

cm-siddu--eshwarappa

ಮೈಸೂರು, ಮಾ.30- ದಲಿತರ ಮೀಸಲಾತಿಯನ್ನು ಶೇ.72ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವ ಲೆಕ್ಕದಲ್ಲಿ ಈ ಮೀಸಲಾತಿ ಕೊಡುತ್ತಾರೆ, ಇದಕ್ಕೆ ಸಂವಿದಾನದಲ್ಲಿ ಅವಕಾಶವಿಲ್ಲ. ಹಾಗಿದ್ದೂ ದಲಿತರು ಹಾಗೂ ಹಿಂದುಳಿದವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗುತ್ತಿದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಜೆಟ್‍ನಲ್ಲಿ ಎಸ್ಸಿ, ಎಸ್ಟಿಗೆ ಮೀಸಲಿರಿಸಿದ್ದ ಅನುದಾನದಲ್ಲಿ ಅರ್ಧದಷ್ಟು ಖರ್ಚು ಮಾಡಿಲ್ಲ. ಉಳಿದ ಹಣವನ್ನು ಮುಂದಿನ ವರ್ಷ ಖರ್ಚು ಮಾಡುವುದಾಗಿ ಹೇಳುತ್ತಿದ್ದಾರೆ. ಕಳೆದ ವರ್ಷದ ಉಳಿದಿರುವ ಅನುದಾನವೂ ಸೇರಿ ಒಟ್ಟಾರೆ ಹಣವನ್ನು ಮುಂದಿನ ವರ್ಷ ಖರ್ಚು ಮಾಡಲು ಇವರ ಸರ್ಕಾರ ಇರುತ್ತದೆಯೇ ಎಂದು ಪ್ರಶ್ನಿಸಿದರು.

70 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ದಲಿತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಲೇ ಬಂದಿದೆ. ಯಾವ ಲೆಕ್ಕದಲ್ಲಿ ಶೇ.72ರಷ್ಟು ಮೀಸಲಾತಿ ಕೊಡುತ್ತಾರೆ. ಈ ವಿಚಾರಗಳ ಬಗ್ಗೆ ಸರ್ಕಾರ ತನ್ನ ನಿಲುವನ್ನು ತಿಳಿಸಬೇಕೆಂದು ಆಗ್ರಹಿಸಿದರು.  ವಕ್ಫ್ ಆಸ್ತಿಯಲ್ಲಿ 54 ಸಾವಿರ ಕೋಟಿ ಅಕ್ರಮ ನಡೆದಿದೆ. ಅನ್ವರ್ ಮಾನಪ್ಪಾಡಿ ಅವರದಿ ಜಾರಿಗೂ ಸರ್ಕಾರ ಮುಂದಾಗುತ್ತಿಲ್ಲ. ಹಲವು ಸಚಿವರು ಹಾಗೂ ಅಲ್ಪಸಂಖ್ಯಾತ ಮುಖಂಡರು ಇದರಲ್ಲಿ ಭಾಗಿಯಾಗಿದ್ದಾರೆ.   ಜಿಲ್ಲೆಯಲ್ಲಿ ಅವ್ಯಹತವಾಗಿ ಮರಳು ದಂಧೆ ನಡೆಯುತ್ತಿದೆ. ಈ ಭಾಗದ ಸಾವಿರಾರು ಲೋಡ್ ಮರಳು ಲೂಟಿಯಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಚಿ.ಮಹದೇವಪ್ಪ, ಸಚಿವ ತನ್ವೀರ್‍ಸೇಠ್ ಕಾರಣ.

ಈ ಕೂಡಲೇ ಮುಖ್ಯಮಂತ್ರಿಗಳು ಈ ಎಲ್ಲಾ ಅವ್ಯವಹಾರಗಳ ಬಗ್ಗೆ ವರದಿ ಬಿಡುಗಡೆ ಮಾಡಬೇಕು. ಇದುವರೆಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಏನು ಮಾಡಿದ್ದಾರೆ ಎಂದ ಅವರು, ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಪೇಟ ತೊಡಿಸಿ, ಖಡ್ಗ ನೀಡಿ ಸನ್ಮಾನಿಸಲಾಗಿತ್ತು. ರಾಜ್ಯದ ಜನತೆಗೆ ತಾವು ನೀಡಿದ ಭರವಸೆಯಲ್ಲಿ ಅರ್ಧದಷ್ಟು ಕೆಲಸ ಮಾಡಿದ ಮುಖ್ಯಮಂತ್ರಿಗಳು ಪೇಟ ಹಾಗೂ ಖಡ್ಗ ಕೆಳಕ್ಕಿಳಿಸಿ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದರು.  ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಗಾಗಿ ಮೀಸಲಾತಿಯನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದೆನಿಸುತ್ತಿಲ್ಲ. ಏಕೆಂದರೆ ಈ ಉಪ ಚುನಾವಣೆಯಲ್ಲಿ ಅವರು ಸೋಲುವುದು ಅವರಿಗೆ ಗೊತ್ತಾಗಿದೆ ಎಂದು ವ್ಯಂಗ್ಯವಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin