ಸಿದ್ದರಾಮಯ್ಯನವರ ಕೌಂಟ್‍ಡೌನ್ ಶುರುವಾಗಿದೆ : ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah-vs-Kumaraswamy

ಮೈಸೂರು, ಮೇ 10- ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೌಂಟ್‍ಡೌನ್ ಆರಂಭವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ , ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಸೀತಾ ವಿಲಾಸ ರಸ್ತೆಯಲ್ಲಿ ಕೆಆರ್ ನಗರ ಶಾಸಕ ಸಾ.ರಾ.ಮಹೇಶ್ ಅವರ ಶಾಸಕರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಲ್ಲಿ ಮೂರು ದಿನಗಳಿಂದ ಆ ಪಕ್ಷದ ಶಾಸಕರು, ಮುಖಂಡರು ಸಿಎಂ ವಿರುದ್ಧ ದೂರು ನೀಡಿದ್ದಾರೆ. ತಮ್ಮ ನೋವುಗಳನ್ನು ತೋಡಿಕೊಂಡಿದ್ದಾರೆ. ಅವರ ಆಕ್ರೋಶದ ಕಟ್ಟೆ ಸ್ಫೋಟಗೊಳ್ಳಲು ಈಗ ಕಾಲ ಕೂಡಿಬಂದಿದೆ. ಹಾಗಾಗಿ ಸಿದ್ದರಾಮಯ್ಯನವರ ಕೌಂಟ್‍ಡೌನ್ ಪ್ರಾರಂಭವಾಗಿಬಿಟ್ಟಿದೆ ಎಂದು ತಿಳಿಸಿದರು.ಮೇ 13ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತವೆ. ಅಭಿವೃದ್ಧಿ ಕಾರ್ಯಗಳಿಗೆ ಸಂಖ್ಯೆ ನೀಡಲು ಅವರು ಅರ್ಹರೇ ಅಲ್ಲ ಎಂದು ಲೇವಡಿ ಮಾಡಿದರು.   ಸಾರ್ವಜನಿಕರು, ರೈತರು, ಬಡ ಜನರಿಗೆ ಸಿದ್ದರಾಮಯ್ಯ ಸರ್ಕಾರ ಏನೂ ಅನುಕೂಲ ಮಾಡಿಕೊಟ್ಟಿಲ್ಲ. ಹಾಗಾಗಿ ಅವರು ಯಾವುದೇ ಸಂಖ್ಯೆ ಪಡೆಯಲು ಅನರ್ಹರು ಎಂದು ಟೀಕಿಸಿದರು.

ವಿಶ್ವನಾಥ್ ನೋವು ತೋಡಿಕೊಂಡಿದ್ದಾರೆ:

ಎಚ್.ವಿಶ್ವನಾಥ್ ಅವರು ನನ್ನ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯನವರನ್ನು ಕಾಂಗ್ರೆಸ್‍ಗೆ ಕರೆತಂದವನೇ ನಾನು. ಅವರು ಸಂಕಷ್ಟದಲ್ಲಿದ್ದಾಗ ನಾನು ನೆರವಾಗಿದ್ದೆ. ಆದರೆ, ಅವರು ಈಗ ನಡೆಸಿಕೊಂಡ ರೀತಿ ಸರಿಯಲ್ಲ. ನನ್ನನ್ನು ಕಡೆಗಣಿಸಿದ್ದಾರೆ, ಅಗೌರವ ತೋರಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷ ಬಿಡಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.  ವಿಶ್ವನಾಥ್ ಜೆಡಿಎಸ್‍ಗೆ ಬರುವುದನ್ನು ಅವರೇ ನಿರ್ಧರಿಸಲಿದ್ದಾರೆ. ಒಂದೆರಡು ಮೂರು ದಿನಗಳಲ್ಲಿ ಅವರ ರಾಜಕೀಯ ನಡೆ ಏನೆಂಬುದು ಗೊತ್ತಾಗುತ್ತದೆ ಎಂದು ಹೇಳಿದರು.

ಹೊಂದಾಣಿಕೆ ಇಲ್ಲ:

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ನಿಲ್ಲಿಸಿ ಮ್ಯಾಜಿಕ್ ಸಂಖ್ಯೆ 113 ಪಡೆಯಲು ನಾವು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದೇವೆ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಹೇಳಿದರು.

ದೇವರಲ್ಲಿ ಮೊರೆ:

ಇಂದು ಬುದ್ಧ ಪೂರ್ಣಿಮೆ, ಒಳ್ಳೆಯ ದಿನ. ಹಾಗಾಗಿ ನಂಜನಗೂಡಿನ ನಂಜುಂಡೇಶ್ವರನಿಗೆ ಹಾಗೂ ಮಹಾಗಣಪತಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಹೇಳಿದರು. ರಾಜ್ಯದಲ್ಲಿ ಉತ್ತಮ ಮಳೆ-ಬೆಳೆಯಾಗಬೇಕು, ಎಲ್ಲ ಜಲಾಶಯಗಳೂ ಭರ್ತಿಯಾಗಬೇಕು, ರೈತರು ಸಂಕಷ್ಟದಿಂದ ಪಾರಾಗಬೇಕು ಎಂದು ನಂಜುಂಡೇಶ್ವರನಲ್ಲಿ ಮೊರೆ ಇಟ್ಟಿದ್ದೇನೆ. ಹಾಗೆಯೇ ಪಕ್ಷದ ಮುಂದಿನ ಯಶಸ್ಸಿಗೂ ಪೂಜೆ ಸಲ್ಲಿಸಿದ್ದೇನೆ. ಎಲ್ಲ ಕೆಲಸಗಳೂ ನಿರ್ವಿಘ್ನವಾಗಿ ನೆರವೇರಲಿ ಎಂದು ಕೋರಿದ್ದೇನೆಂದು ಕುಮಾರಸ್ವಾಮಿ ತಿಳಿಸಿದರು. ಇಂದು ಮೈಸೂರಿನಲ್ಲಿ ಪ್ರಥಮ ಜೆಡಿಎಸ್ ರಾಜ್ಯಮಟ್ಟದ ಬೂತ್ ಸಮಿತಿ ಸಭೆಯನ್ನು ಯಶಸ್ವಿಗೊಳಿಸುತ್ತೇವೆ ಎಂದು ಅವರು ಹೇಳಿದರು. ಮೇಯರ್ ರವಿಕುಮಾರ್, ಶಾಸಕರಾದ ಸುರೇಶ್‍ಬಾಬು, ಸಾ.ರಾ.ಮಹೇಶ್, ಅಪ್ಪಾಜಿಗೌಡ, ಚೌಡರೆಡ್ಡಿ, ರಮೇಶ್‍ಬಾಬು, ಬಿ.ಎಂ.ಎಲ್.ಕಾಂತರಾಜು ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.

ಭೂಮಿಪುತ್ರ ಚಿತ್ರಕ್ಕೂ ನನಗೂ ಸಂಬಂಧವಿಲ್ಲ:

ಇದಕ್ಕೂ ಮೊದಲು ನಂಜನಗೂಡಿನಲ್ಲಿ ನಂಜುಂಡೇಶ್ವರನಿಗೆ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ರಾಜ್ಯದಲ್ಲಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದೇನೆ ಹಾಗೂ ಜೆಡಿಎಸ್ ಸಂಭಾವ್ಯ ಅಭ್ಯರ್ಥಿಗಳು, ಪದಾಧಿಕಾರಿಗಳ ಪಟ್ಟಿಯನ್ನು ದೇವರಲ್ಲಿ ಇಟ್ಟು ಪೂಜೆ ಮಾಡಿಸಿದ್ದೇನೆ ಎಂದು ಹೇಳಿದರು. ಭೂಮಿಪುತ್ರ ಚಿತ್ರಕ್ಕೂ ನನಗೂ ನೇರವಾದ ಪಾತ್ರ ಇಲ್ಲ, ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನನ್ನ ಕಥೆ ಆಧರಿಸಿ ಪ್ರಭುಕುಮಾರ್ ಎಂಬುವರು ಎಸ್.ನಾರಾಯಣ್ ಅವರ ನಿರ್ದೇಶನದಲ್ಲಿ ಈ ಚಿತ್ರ ಸಿದ್ಧಪಡಿಸುತ್ತಿದ್ದಾರೆ ಎಂದು ಹೇಳಿದರು.

ನನ್ನ 20 ತಿಂಗಳ ಅಧಿಕಾರಾವಧಿಯನ್ನು ಆಧರಿಸಿ ಈ ಚಿತ್ರ ಮಾಡುತ್ತಿದ್ದಾರೆ. ಅವರು ಚಿತ್ರದ ಬಗ್ಗೆ ಚರ್ಚೆ ಮಾಡಿದರೆ ವಾಸ್ತವತೆ ಹೇಳುತ್ತೇನೆ. ಆದರೆ, ಇದುವರೆಗೂ ಅವರು ನನ್ನನ್ನು ಏನೂ ಕೇಳಿಲ್ಲ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪ್ರಭುಕುಮಾರ್ ಅವರನ್ನೇ ಕೇಳಿ ಎಂದು ಸುದ್ದಿಗಾರರಿಗೆ ಕುಮಾರಸ್ವಾಮಿ ಉತ್ತರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin