ಸಿದ್ದರಾಮಯ್ಯನವರ ಸರ್ಕಾರದಲ್ಲಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲ : ಶೋಭಾ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Shobha-Karandlaje

ಬೆಂಗಳೂರು, ಮಾ.13-ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಯಾವುದೇ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಸಂಸದೆ ಶೋಭಾಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದರು. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಿಲ್ಲ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಅನುಪಮಾ ಶಣೈ, ಅನೂಪ್‍ಶೆಟ್ಟಿ ದೌರ್ಜನ್ಯಕ್ಕೊಳಗಾದರು. ಡಿ.ಕೆ.ರವಿ, ಅನುರಾಗ್ ತಿವಾರಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರನ್ನು ಅವಮಾನಿಸಲಾಯಿತು. ಪ್ರಾಮಾಣಿಕ ಅಧಿಕಾರಿ ರಶ್ಮಿ ಮೇಲೆ ಹಲ್ಲೆ ನಡೆದಿತ್ತು. ಹಲ್ಲೆ ಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಈಗ ರಶ್ಮಿ ಎಲ್ಲಿದ್ದಾರೆ ಎಂಬುದೇ ತಿಳಿಯದಂತಾಗಿದೆ. ಅವರನ್ನು ಹುಡುಕಿಕೊಡಿ ಎಂದು ಸಿಎಂರನ್ನು ಒತ್ತಾಯಿಸಿದರು.

ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕೆಂಬ ಸಾಮಾನ್ಯ ಜ್ಞಾನ ಕೂಡ ಈ ಸರ್ಕಾರಕ್ಕೆ ಇಲ್ಲ. ಕಬೀರ್ ಎಂಬಾತ ದನಗಳನ್ನು ಕದ್ದು ಕೊಂಡೊಯ್ಯುವಾಗ ಎಎನ್‍ಎಫ್ ಅಧಿಕಾರಿ ನವೀನ್ ನಾಯಕ್ ಗುಂಡು ಏಕೆ ಹಾರಿಸಿದರು ಎಂಬುದನ್ನು ವಿಚಾರಸದೆಯೇ ಸರ್ಕಾರ ಅವರನ್ನು ಅಮಾನತು ಮಾಡಿತು ಎಂದು ದೂರಿದರು.ಟಿ.ನರಸೀಪುರ ತಹಸೀಲ್ದಾರ್ ಶಂಕರಯ್ಯ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಈ ಸರ್ಕಾರದ ದೌರ್ಜನ್ಯದಿಂದಾಗಿಯೇ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ ಎಂದು ಗಂಭೀರ ಆರೋಪ ಮಾಡಿದರು.

ಮಲ್ಲಿಕಾರ್ಜುನ ಬಂಡೆ ಯಾರ ಗುಂಡೇಟಿನಿಂದ ಸತ್ತರು ಎಂಬ ಸತ್ಯ ಹೊರ ಬರಲೇ ಇಲ್ಲ. ಅದರ ಹಿಂದೆಯೇ ಅವರ ಪತ್ನಿ ಕೂಡ ಮೃತಪಟ್ಟರು. ಜಗದೀಶ್, ಕಲ್ಲಪ್ಪ ಹಂಡಿಭಾಗ್ ಸಾವಿನ ಸತ್ಯವೂ ಹೊರ ಬರಲಿಲ್ಲ ಎಂದು ದೂರಿದರು. ಉಡುಪಿಯಲ್ಲಿ ಜಿಲ್ಲಾಧಿಕಾರಿ, ಕುಂದಾಪುರದಲ್ಲಿ ಉಪವಿಭಾಗಾಧಿಕಾರಿ ಅಕ್ರಮ ಮರಳು ದಂಧೆ ತಡೆಯಲು ಹೋದಾಗ ಮರಳು ಮಾಫಿಯಾದವರು ಕಾರು ಹತ್ತಿಸಿ ಕೊಲ್ಲುವ ಯತ್ನ ಮಾಡಿದ್ದಾರೆ. ಇಷ್ಟೆಲ್ಲಾ ಕಣ್ಣುಮುಂದೆ ನಡೆಯುತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯ್‍ಕುಮಾರ್ ಪ್ರಾಮಾಣಿಕ ಐಎಎಸ್ ಅಧಿಕಾರಿ. ಅವರಿಂದ ಒತ್ತಾಯಪೂರ್ವಕವಾಗಿ ರಾಜೀನಾಮೆ ಕೊಡಿಸಿದ್ದಾರೆ. ಮಥಾಯ್ ಅವರು ಬಿಬಿಎಂಪಿಯಲ್ಲಿ 2.50 ಕೋಟಿ ಹಗರಣ ಪತ್ತೆ ಮಾಡಿದ್ದರು. ಅವರಿಗೆ ವರ್ಗಾವಣೆ ಶಿಕ್ಷೆ ನೀಡಲಾಯಿತು. ಶಶಿಕಲಾಗೆ ಜೈಲಿನಲ್ಲಿ ಸಕಲ ಸೌಲಭ್ಯ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿ ಸತ್ಯನಾರಾಯಣರಾವ್ ವಿರುದ್ಧ ತನಿಖೆ ನಡೆಸಲು ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ ಸವಲತ್ತು ಕಲ್ಪಿಸಲು ಮುಖ್ಯಮಂತ್ರಿಯೇ ಸೂಚನೆ ನೀಡಿದ್ದರು ಎಂದು ಅ ಅಧಿಕಾರಿ ಹೇಳಿದ್ದಾರೆ. ಇದಕ್ಕೆಲ್ಲ ಮುಖ್ಯಮಂತ್ರಿಗಳು ಏನು ಹೇಳುತ್ತಾರೆ ಎಂದು ಖಾರವಾಗಿ ಪ್ರಶ್ನಿಸಿದರು.

ಉದ್ಯಮಿ ಪುತ್ರ ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ್ದು ನಿಜವಾದರೂ ಪೊಲೀಸರು ಆತನನ್ನು ಬಂಧಿಸಲಿಲ್ಲ. ಆತ ತಾನಾಗಿಯೇ ಬಂದು ಶರಣಾದ. ಆದರೂ ಅಧಿಕಾರಿಯನ್ನು ಅಮಾನತು ಮಾಡಲಾಯಿತು. ಅಧಿಕಾರಿ ಮೇಲೆ ಒತ್ತಡ ತಂದ ಶಾಸಕ ಹ್ಯಾರಿಸ್ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು. ಈ ಸರ್ಕಾರದಲ್ಲಿ ನಿಜಕ್ಕೂ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲ. ಒಂದೋ ಅವರು ಭ್ರಷ್ಟಾಚಾರಿಯಾಗಬೇಕು. ಇಲ್ಲ ಅಂದ್ರೆ ಸಾಯಬೇಕು. ಅಂತಹ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಶೋಭಾ ಗುಡುಗಿದರು.

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಮೇಲೆ ಹಲ್ಲೆ ಯತ್ನ ನಡೆದಾಗ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು. ಆದರೆ, ಸರ್ಕಾರ ಇದ್ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದರು. ಬಿಜೆಪಿ ಒಂದು ವಿರೋಧ ಪಕ್ಷ. ನಮ್ಮ ವಿಫಲತೆಯನ್ನು ಬಿಡಿ. ನಿಮ್ಮ ಐದು ವರ್ಷದ ಸಫಲತೆಯ ಪಟ್ಟಿಯನ್ನು ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಹಳದಿ ರೋಗ ಬಂದವರಿಗೆ ಜಗತ್ತೆಲ್ಲಾ ಹಳದಿಯಂತೆ ಕಾಣುತ್ತದೆ. ಜಗತ್ತು ಹಳದಿ ಇರುವುದಿಲ್ಲ. ಅವರ ಕಣ್ಣಷ್ಟೇ ಹಳದಿ. ಈ ಸರ್ಕಾರಕ್ಕೆ ಎಲ್ಲವೂ ಹಳದಿಯಂತೆ ಕಾಣುತ್ತದೆ. ಐಪಿಎಸ್ ಅಸೋಸಿಯೇಷನ್ ಅಧ್ಯಕ್ಷ ಆರ್.ಪಿ.ಶರ್ಮಾ ಅವರು ಬಿಜೆಪಿಗೆ ಪತ್ರ ಬರೆದಿಲ್ಲ. ಅವರು ಬರೆದಿರುವುದು ಮುಖ್ಯಕಾರ್ಯದರ್ಶಿ ಮತ್ತು ರಾಮಲಿಂಗಾರೆಡ್ಡಿ ಅವರಿಗೆ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದರು.

ಬಿಎಸ್‍ವೈಗೆ ಹಿನ್ನಡೆಯಾಗಿಲ್ಲ:
ರಾಜ್ಯಸಭೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಹಿನ್ನಡೆಯಾಗಿಲ್ಲ ಎಂದು ಇದೇ ಸಂದರ್ಭದಲ್ಲಿ ವರದಿಗಾರರ ಪ್ರಶ್ನೆಗೆ ಶೋಭಾ ಸಮರ್ಥಿಸಿಕೊಂಡರು. ಹಿನ್ನಡೆ ಅನ್ನೋದೆಲ್ಲ ಸುಳ್ಳು. ಇದೆಲ್ಲ ಊಹಾಪೋಹ. ರಾಜೀವ್‍ಚಂದ್ರಶೇಖರ್ ಅವರು ಮೊದಲಿನಿಂದಲೂ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದರು. ಅವರ ಆಯ್ಕೆ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ತಿಳಿಸಿದರು.

Facebook Comments

Sri Raghav

Admin