ಸಿದ್ದರಾಮಯ್ಯನವರ 2ನೇ ಪುತ್ರ ಡಾ.ಯತೀಂದ್ರ ರಾಜಕೀಯಕ್ಕೆ ಎಂಟ್ರಿ

ಈ ಸುದ್ದಿಯನ್ನು ಶೇರ್ ಮಾಡಿ

CM-Siddu-Son

ಬೆಂಗಳೂರು, ಆ.22-ಎಲೆ ಮರೆ ಕಾಯಿಯಂತೆ ವೈದ್ಯಕೀಯ ವೃತ್ತಿಯಲ್ಲಿ ತನ್ನ ಪಾಡಿಗೆ ತಾನಿದ್ದ, ಎಲ್ಲೂ ಬಹಿರಂಗವಾಗಿ ಗುರುತಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎರಡನೆ ಪುತ್ರ ಡಾ.ಯತೀಂದ್ರ ಅವರನ್ನು ಅನಿವಾರ್ಯವಾಗಿ ರಾಜಕೀಯದ ಮುಖ್ಯವಾಹಿನಿಗೆ ಕರೆತರುವ ತೀರ್ಮಾನ ಕೈಗೊಂಡಿರುವುದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಲಗೈನಂತಿದ್ದ, ಅವರ ಎಲ್ಲಾ ಜವಾಬ್ದಾರಿಗಳನ್ನು, ಕ್ಷೇತ್ರದ ಕೆಲಸಗಳನ್ನು ಪರೋಕ್ಷವಾಗಿ, ಸಮರ್ಥವಾಗಿ ನಿಭಾಯಿಸುತ್ತಿದ್ದ ರಾಕೇಶ್ ಅವರ ಅಕಾಲಿಕ ನಿಧನದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಾರಸುದಾರನಿಲ್ಲದೆ ಕಂಗಾಲಾಗಿದ್ದರು.

ಈ ಹಿನ್ನೆಲೆಯಲ್ಲಿ ಸಿಎಂ ಆಪ್ತರು ಮತ್ತು ಕುಟುಂಬದವರು ಚರ್ಚೆ ನಡೆಸಿ ಡಾ.ಯತೀಂದ್ರ ಅವರನ್ನೇ ರಾಜಕೀಯಕ್ಕೆ ಕರೆತರುವ ಮತ್ತು ತಮ್ಮ ಎಲ್ಲಾ ಜವಾಬ್ದಾರಿಗಳನ್ನು ಅವರಿಗೆ ವಹಿಸುವ ಬಗ್ಗೆ ಚರ್ಚೆ ನಡೆಸಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ಕುಟುಂಬದ ಸಂದಿಗ್ಧ ಪರಿಸ್ಥಿತಿಯಲ್ಲಿ ಡಾ.ಯತೀಂದ್ರ ಕೂಡ ಈ ಜವಾಬ್ದಾರಿಯನ್ನು ನಿಭಾಯಿಸಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ರಾಕೇಶ್ ಅವರು ಸಿದ್ದರಾಮಯ್ಯನವರ ನೆರಳಿನಂತೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದರು. ವರುಣ ಕ್ಷೇತ್ರದ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು.

ಮುಂದೆ ವರುಣ ಕ್ಷೇತ್ರದಿಂದ ಅಭ್ಯರ್ಥಿಯಾಗುವ ಕನಸನ್ನು ಕೂಡ ಕಟ್ಟಿಕೊಂಡಿದ್ದರು. ಈ ನಿಟ್ಟಿನಲ್ಲಿ ತುಂಬಾ ಚಟುವಟಿಕೆಯಿಂದ ಕ್ಷೇತ್ರದಲ್ಲಿ ಕೆಲಸಗಳನ್ನು ಮಾಡುತ್ತಿದ್ದರು. ಆದರೆ ಅಕಾಲಿಕ ಮರಣಕ್ಕೆ ತುತ್ತಾಗಿದ್ದರಿಂದ ಸಿದ್ದರಾಮಯ್ಯನವರಿಗೆ ದಿಕ್ಕು ತೋಚದಂತಾಗಿತ್ತು. ತಾನು ಏಕಾಂಗಿ ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಕಾರಣ ಡಾ.ಯತೀಂದ್ರ ಅವರು ರಾಜಕೀಯದ ಸೊಗಡನ್ನು ಹಚ್ಚಿಕೊಂಡಿರಲಿಲ್ಲ. ತಂದೆ ಮುಖ್ಯಮಂತ್ರಿಯಾದರೂ ಅವರು ಎಲ್ಲೂ ಪ್ರಭಾವವನ್ನು ಅಷ್ಟಾಗಿ ಬಳಸಿಕೊಂಡಿರಲಿಲ್ಲ. ಈಗ ಮುಖ್ಯಮಂತ್ರಿಗಳ ಪರಮಾಪ್ತರ ಒತ್ತಾಯ, ಕುಟುಂಬದ ಅನಿವಾರ್ಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಒಲ್ಲದ ಮನಸ್ಸಿನಿಂದ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುಟುಂಬದವರನ್ನು ರಾಜಕೀಯದಿಂದ ದೂರವಿಟ್ಟಿದ್ದರು. ಅವರ ಪತ್ನಿ ಪಾರ್ವತಿಯವರು ಇಂದಿಗೂ ಎಲ್ಲೂ ಗುರುತಿಸಿಕೊಂಡಿಲ್ಲ. ಮಾಧ್ಯಮದಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.

ಸಿದ್ದರಾಮಯ್ಯನವರು ಕುಟುಂಬದವರ್ಯಾ ರನ್ನೂ ರಾಜಕೀಯಕ್ಕೆ ಸೇರಿಸಿಕೊಳ್ಳುವುದಿಲ್ಲ ಎನ್ನಲಾಗುತ್ತಿತ್ತು. ಆದರೆ ರಾಕೇಶ್ ಅವರು ಇತ್ತೀಚೆಗೆ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು. ಅವರ ನಿಧನದ ನಂತರದ ಚಿಂತೆ ಸಿದ್ದು ಅವರಿಗೆ ಕಾಡುತ್ತಿತ್ತು. ಈಗ ಯತೀಂದ್ರ ಅವರು ರಾಜಕೀಯಕ್ಕೆ ಬರಲು ಒಪ್ಪಿರುವುದು ಅವರ ಜವಾಬ್ದಾರಿಗಳನ್ನು ನಿಭಾಯಿಸಲು ಮುಂದಾಗಿರುವುದು ಹಿರಿಯ ಮಗನನ್ನು ಕಳೆದುಕೊಂಡ ದುಃಖ ಕೊಂಚ ಕಡಿಮೆಯಾಗಬಹುದು ಎಂದು ಆಪ್ತರೊಬ್ಬರು ತಿಳಿಸಿದ್ದಾರೆ. ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮಗ ಸಂಜಯ್ಗಾಂಧಿ ವಿಮಾನ ಅಪಘಾತದಲ್ಲಿ ಮಡಿದಾಗ ರಾಜಕೀಯದಿಂದ ದೂರವಿದ್ದ ರಾಜೀವ್ಗಾಂಧಿಯವರನ್ನು ರಾಜಕೀಯಕ್ಕೆ ಕರೆತರಲಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

► Follow us on –  Facebook / Twitter  / Google+

Facebook Comments

Sri Raghav

Admin