ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ..! ದಲಿತರಿಗೆ ಸಿಎಂ ಸ್ಥಾನ ಬಿಟ್ಟುಕೊಡಲು ರೆಡಿ ..!

ಈ ಸುದ್ದಿಯನ್ನು ಶೇರ್ ಮಾಡಿ

Siddaramaih--01

ಮೈಸೂರು, ಮೇ 13-ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧವಾಗಿದ್ದು, ದಲಿತ ಮುಖ್ಯಮಂತ್ರಿ ಮಾಡಲು ನಿರ್ಧರಿಸಿದರೆ ತಮ್ಮ ಹುದ್ದೆ ತ್ಯಜಿಸಲು ನಮ್ಮ ಅಭ್ಯಂತರವೇನಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಹೇಳಿದ್ದಾರೆ. ರಾಮಕೃಷ್ಣ ನಗರದ ತಮ್ಮ ನಿವಾಸದ ಬಳಿ ರಾಜ್ಯದಲ್ಲಿ ಕೇಳಿ ಬರುತ್ತಿರುವ ದಲಿತ ಸಿಎಂ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ನಿರ್ಧಾರಕ್ಕೆ ನಮ್ಮದು ಯಾವುದೇ ತಕರಾರಿಲ್ಲ. ಆದರೆ ದಲಿತರನ್ನು ಏಕಾಏಕಿ ಮುಖ್ಯಮಂತ್ರಿ ಮಾಡಲು ಸಾಧ್ಯವಿಲ್ಲ. ಶಾಸಕರ ಸಮ್ಮತಿಯೂ ಅಗತ್ಯವಿದೆ ಎಂದು ತಿಳಿಸಿದರು.

ರಾಜ್ಯ ಚುನಾವಣಾ ಫಲಿತಾಂಶ ಲೋಕಸಭೆ ಚುನಾವಣೆಗಷ್ಟೇ ಅಲ್ಲ, ದೇಶದ ಇತರೆ ಚುನಾವಣೆಗೂ ಅಡಿಗಲ್ಲಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಲೋಕಸಭಾ ಚುನಾವಣೆಗೂ ಮುನ್ನ ರಾಜಸ್ಥಾನ, ಮಧ್ಯಪ್ರದೇಶಗಳ ಚುನಾವಣೆ ಬರಲಿದೆ. ಈ ಚುನಾವಣೆಗಳಲ್ಲಿ ನಾವು ಗೆದ್ದು ದೇಶವನ್ನು ಹಿಡಿತಕ್ಕೆ ತೆಗೆದುಕೊಳ್ಳಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇನೆ. ಬಾದಾಮಿಯಲ್ಲಿ ಹೆಚ್ಚಿನ ಬಹುಮತ ಬರಲಿದೆ. ಚಾಮುಂಡೇಶ್ವರಿಯಲ್ಲಿ ಗೆಲ್ಲುತ್ತೇನೆ. ಆದರೆ ನಿರೀಕ್ಷಿತ ಮಟ್ಟದಷ್ಟು ಬಹುಮತ ಬಾರದಿರಬಹುದು ಎಂದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಹ್ಮ ಬಂದರೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಈ ಬಾರಿಯೇ ಚುನಾವಣೆಯಲ್ಲಿ ನಿಲ್ಲಬಾರದೆಂದು ಎಂದುಕೊಂಡಿದ್ದೆ. ಆದರೆ ಮುಖ್ಯಮಂತ್ರಿಗಳೇ ಪಲಾಯನವಾದ ಮಾಡಿದರು ಎಂಬ ಅಪವಾದ ಹೊರಬಾರದೆಂದು ಸ್ಪರ್ಧಿಸಿದ್ದೇನೆ.

ಮುಂದೆ ರಾಜಕೀಯ ಸಕ್ರಿಯ ರಾಜಕಾರಣದಲ್ಲಿರುತ್ತೇನೆ. ಆದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಸಮೀಕ್ಷೆಗಳು ಸಮ್ಮಿಶ್ರ ಸರ್ಕಾರದ ಬಗ್ಗೆ ಹೇಳಿವೆ. ಇದು ಸತ್ಯವಿರಬಹುದು. ಆದರೆ ಸಂಪೂರ್ಣ ಇದನ್ನೇ ನಂಬಲು ಸಾಧ್ಯವಿಲ್ಲ ಎಂದು ಹೇಳಿದರು.  ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜಿ.ಟಿ.ದೇವೇಗೌಡರು ಹೆಚ್ಚು ಹಣ ಖರ್ಚು ಮಾಡಿದ್ದಾರೆ. ಈ ಹಣ ಎಲ್ಲಿಂದ ಬಂತು ಗೊತ್ತಿಲ್ಲ. ಆದರೆ ಜನ ಹಣಕ್ಕೆ ಹೆಚ್ಚು ಮನ್ನಣೆ ಕೊಡುತ್ತಾರೆ ಎಂದು ಅನ್ನಿಸುವುದಿಲ್ಲ ಎಂದು ನುಡಿದರು. ಕಾಂಗ್ರೆಸ್ 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Facebook Comments

Sri Raghav

Admin