ಸಿದ್ದರಾಮಯ್ಯ-ಪರಮೇಶ್ವರ್-ಖರ್ಗೆ ಒಂದೇ ವೇದಿಕೆಯಲ್ಲಿ ಕುಳಿತು ಪ್ರಚಾರ ಮಾಡಲಿ : ಬಿಎಸ್ವೈ ಚಾಲೆಂಜ್

ಈ ಸುದ್ದಿಯನ್ನು ಶೇರ್ ಮಾಡಿ

Yadiyurappa--02

ಬೆಂಗಳೂರು, ಮೇ 6-ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಂದೇ ವೇದಿಕೆಯಲ್ಲಿ ಕುಳಿತು ಪಕ್ಷದ ಪರ ಪ್ರಚಾರ ನಡೆಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಹಿರಂಗ ಸವಾಲು ಹಾಕಿದ್ದಾರೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಟಿಕೆಟ್ ಹಂಚಿಕೆಯ ನಂತರ ಸಿದ್ದರಾಮಯ್ಯ, ಪರಮೇಶ್ವರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಒಂದೇ ವೇದಿಕೆಯಲ್ಲಿ ಕುಳಿತು ಪ್ರಚಾರ ನಡೆಸಿ ತಿಂಗಳೇ ಕಳೆದಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಬರುವುದಿರಲಿ, ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಮೊದಲು ಗೆದ್ದು ಬರಲಿ ಎಂದು ತಿರುಗೇಟು ನೀಡಿದರು.

ಬೆಂಗಳೂರು ಪ್ರೆಸ್‍ಕ್ಲಬ್ ಹಾಗೂ ವರದಿಗಾರರ ಕೂಟ ಏರ್ಪಡಿಸಿದ್ದ ಚಿಂತನಮಂಥನದಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರಿಗೆ ಸೋಲು ಖಚಿತ. ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆದ್ದೇ ಗೆಲ್ಲುತ್ತಾರೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಗೆಲ್ಲುವುದಿಲ್ಲ. ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು. ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂಬುದು ಖಚಿತವಾಗಿರುವುದರಿಂದ ನಮ್ಮ ಪಕ್ಷದ ಮುಖಂಡರ ವಿರುದ್ಧ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಕಾಂಗ್ರೆಸ್‍ನ ಕೊನೆಯ ಮುಖ್ಯಮಂತ್ರಿ ಆಗಲಿದ್ದಾರೆ. ಇದೇ 15ರಂದು ಅವರು ಗಂಟುಮೂಟೆ ಕಟ್ಟಲು ಸಿದ್ದತೆ ಮಾಡಿಕೊಳ್ಳಲಿ ಎಂದು ಕುಹಕವಾಡಿದರು.

ನನ್ನನ್ನು ಹೋದ ಕಡೆಯಲ್ಲೆಲ್ಲಾ ಯಡಿಯೂರಪ್ಪ ಭ್ರಷ್ಟ. ಜೈಲಿಗೆ ಹೋಗಿ ಬಂದವರು ಎಂದು ಹೇಳುತ್ತಿದ್ದಾರೆ. ಹೈಕೋರ್ಟ್‍ನಿಂದ ಸುಪ್ರೀಂಕೋರ್ಟ್‍ವರೆಗೆ ನನ್ನ ಮೇಲೆ ಯಾವುದಾದರು ಪ್ರಕರಣಗಳು ರುಜುವಾತಾಗಿದ್ದರೆ ಸಾಬೀತುಪಡಿಸಲಿ. ಆರೋಪ ಮಾಡಿಕೊಂಡು ತಿರುಗುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಮನೆಗೆ ಹೋಗುವುವರರ ಬಗ್ಗೆ ನಾನೇಕೆ ಚಿಂತಿಸಲಿ ಎಂದರು. ಭ್ರಷ್ಟಾಚಾರ ಮಾಡಿ ಲೂಟಿ ಹೊಡೆದ ಸಿದ್ದರಾಮಯ್ಯ ನನ್ನ ಬಗ್ಗೆ ಮಾತನಾಡುವ ನೈತಿಕತೆ ಇಟ್ಟುಕೊಂಡಿಲ್ಲ. 70 ಲಕ್ಷ ಹೂಬ್ಲೆಟ್ ವಾಚ್ ಯಾರು ಕೊಟ್ಟಿದ್ದರು ಎಂಬುದನ್ನು ರಾಜ್ಯದ ಜನತೆ ಮುಂದೆ ಬಹಿರಂಗಪಡಿಸಲಿ. ನಿಮ್ಮ ಸುಳ್ಳು ಆರೋಪಗಳಿಗೆ ಜನತೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿರುಗೇಟು ನೀಡಿದರು.

ತಿರುಗು ಬಾಣವಾಗಲಿದೆ:
ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದ್ದ ಸಿದ್ದರಾಮಯ್ಯ ಅವರಿಗೆ ತಿರುಗು ಬಾಣವಾಗಲಿದೆ. ಅದು ಗೊತ್ತಿದ್ದರಿಂದ ಕಳೆದ ಮೂರು ತಿಂಗಳಿನಿಂದ ಬಾಯಿ ಮುಚ್ಚಿಕೊಂಡು ಕುಳಿತುಕೊಂಡಿದ್ದಾರೆ. ಫಲಿತಾಂಶ ಬಂದಾಗ ಗೊತ್ತಾಗುತ್ತದೆ ಎಂದು ಯಡಿಯೂರಪ್ಪ ಎಚ್ಚರಿಸಿದರು. ಪ್ರತ್ಯೇಕ ಲಿಂಗಾಯಿತ ಧರ್ಮ ಮಾಡುವಂತೆ ಇವರಿಗೆ ಯಾರು ಕೇಳಿದ್ದರು. ನಾನು ಮುಖ್ಯಮಂತ್ರಿ ಆಗಬಾರದು ಎಂಬ ಒಂದೇ ಕಾರಣಕ್ಕಾಗಿ ಅದನ್ನು ಒಡೆಯುವ ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆ. ಅದರ ಪಾಪದ ಫಲವನ್ನು ಈಗ ಸಿದ್ದರಾಮಯ್ಯ ಅನುಭವಿಸುತ್ತಾರೆ ಎಂದರು.

ಬಿಜೆಪಿ ಈ ಬಾರಿ 150 ಸ್ಥಾನ ಗೆಲ್ಲುವುದರಲ್ಲಿ ಯಾವ ಸಂಶಯವೂ ಇಲ್ಲ. 17ರಂದು ನಾನು ಪ್ರಮಾಣ ವಚನ ಸ್ವೀಕರಿಸುವುದು ನೂರಕ್ಕೆ ನೂರರಷ್ಟು ಖಚಿತ. ಅಧಿಕಾರ ಸ್ವೀಕರಿಸಿದ 24 ಗಂಟೆಯೊಳಗೆ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಿಂದ ಪಡೆದಿರುವ ಒಂದು ಲಕ್ಷ ಸಾಲ ಮನ್ನಾ ಮಾಡದಿದ್ದರೆ ಒಂದೇ ಒಂದು ದಿನವೂ ಅಧಿಕಾರದಲ್ಲಿ ಮುಂದುವರೆಯುವುದಿಲ್ಲ ಎಂದು ಶಪತ ಮಾಡಿದರು.

ರಾಷ್ಟ್ರೀಕೃತ ಬ್ಯಾಂಕಿನ ಸಾಲವನ್ನು ಮನ್ನಾ ಮಾಡಿ ಎಂದು ಸಿದ್ದರಾಮಯ್ಯ ಬೊಬ್ಬೆ ಹೊಡೆಯುತ್ತಿದ್ದಾರೆ. ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ, ಹರಿಯಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸಾಲಮನ್ನಾ ಮಾಡಿದ್ದರೂ ಕೇಂದ್ರ ಸರ್ಕಾರ ಮನ್ನಾ ಮಾಡಲಿ ಎಂದು ಯಾರೂ ಹೇಳುತ್ತಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ ಇಂತಹ ವಿತಂಡ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ ಎಂದು ಅಸಮಾದಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವುದರಿಂದ ಜೆಡಿಎಸ್ ಜತೆ ಹೊಂದಾಣಿಕಯ ಪ್ರಶ್ನೆಯೇ ಉದ್ಬವಿಸುವುದಿಲ್ಲ. ಹಿಂದೆ 20-20ಸರ್ಕಾರ ರಚನೆ ಮಾಡಿದ್ದರಿಂದ ಕೆಟ್ಟ ಅನುಭವವಾಗಿದೆ. ಹಿಂದೆ ನಡೆದ ಘಟನೆಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಮುಂದೆ ಆ ರೀತಿ ಆಗದಂತೆ ಎಚ್ಚರ ವಹಿಸುತ್ತೇನೆ ಎಂದು ಹೇಳಿದರು.

ಬಳ್ಳಾರಿಯ ರೆಡ್ಡಿ ಸಹೋದರರಿಗೆ ಸಮೀಕ್ಷೆ ಆಧಾರದ ಮೇಲೆ ಟಿಕೆಟ್ ನೀಡಲಾಗಿದೆ. ಜನಾರ್ಧನರೆಡ್ಡಿ ಇಂತಹವರಿಗೆ ಟಿಕೆಟ್ ನೀಡಬೇಕೆಂದು ಯಾರನ್ನೂ ಕೇಳಲಿಲ್ಲ. ಅವರ ಸಹೋದರರು ಮತ್ತು ಬೆಂಬಲಿಗರ ಮೇಲೆ ಯಾವ ರೀತಿ ಆರೋಪಗಳಿಲ್ಲ. ಆನಂದ್‍ಸಿಂಗ್ ಮತ್ತು ನಾಗೇಂದ್ರ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯ ಅವರಿಗೆ ಇದೆಯೇ ಎಂದು ಪ್ರಶ್ನಿಸಿದರು. ನಮ್ಮ ಸರ್ಕಾರ ಬಂದ ಮೇಲೆ ಕ್ಯಾಬಿನೆಟ್‍ನಲ್ಲಿ ಮುಸ್ಲಿಂರಿಗೆ ಅವಕಾಶ ಮಾಡಿಕೊಡುತ್ತೇನೆ. ಇಂದಿರಾಕ್ಯಾಂಟೀನನ್ನು ಅನ್ನಪೂರ್ಣ ಯೋಜನೆ ಎಂದು ಹೆಸರು ಬದಲಾವಣೆ ಮಾಡಿ ಮುಂದುವರೆಸುತ್ತೇನೆ ಎಂದು ಯಡಿಯೂರಪ್ಪ ತಿಳಿಸಿದರು. ಸಂವಾದದಲ್ಲಿ ಶಾಸಕ ಅರವಿಂದ ಲಿಂಬಾವಳಿ, ಪ್ರಸ್‍ಕ್ಲಬ್ ಅಧ್ಯಕ್ಷ ಸದಾಶಿವ ಶಣೈ, ಪ್ರಧಾನಕಾರ್ಯದರ್ಶಿ ಕಿರಣ್ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin