‘ಸಿದ್ದ’ ನ ಸ್ಥಿತಿ ಚಿಂತಾಜನಕ, ಬದುಕುಳಿಯೋದೇ ಡೌಟ್

ಈ ಸುದ್ದಿಯನ್ನು ಶೇರ್ ಮಾಡಿ

Sidda-elephant

ಬೆಂಗಳೂರು, ಅ.25- ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡಿರುವ ಕಾಡಾನೆ ಸಿದ್ದನ ಪರಿಸ್ಥಿತಿ ಚಿಂತಾಜನಕವಾಗಿದೆ. ಆನೆ ಬದುಕುಳಿಯುವ ಸಾಧ್ಯತೆ ತುಂಬ ಕಡಿಮೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ 53 ದಿನಗಳಿಂದ ಜೀವ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿರುವ ಕಾಡಾನೆ ಸಿದ್ದನ ಆರೋಗ್ಯ ಪರಿಸ್ಥಿತಿ ದಿನೇ ದಿನೇ ಕ್ಷೀಣಿಸುತ್ತಿದೆ. ತಿನ್ನುವ ಆಹಾರ, ಕುಡಿಯುವ ನೀರು ಎಲ್ಲವೂ ಇಳಿಮುಖವಾಗಿದೆ. ದಿನಕ್ಕೆ ಕೇವಲ 50 ಲೀಟರ್ ನೀರನ್ನು ಮಾತ್ರ ಈ ಆನೆ ಸೇವಿಸುತ್ತಿದೆ. ಬಲಗಾಲು ಮತ್ತೆ ಊದಿಕೊಂಡಿದ್ದು, ನಡೆಯಲಾಗದ ಅಸಾಧ್ಯ ಪರಿಸ್ಥಿತಿ ಉಂಟಾಗಿದೆ.

ಸಣ್ಣ ಸಣ್ಣ ಬಾಲ್ಸ್‍ಗಳು ದೇಹದಲ್ಲಿರುವುದು, ದೇಹದಲ್ಲಿನ ಗಾಯದಿಂದ ರಕ್ತದಲ್ಲಿ ಅಲ್ಪ ಪ್ರಮಾಣದ ವಿಷಕಾರಿ ಅಂಶ ಸೇರಿರುವುದು ಕಂಡುಬಂದಿದೆ. ಕಾಲಿಗೆ ನೋವು ನಿವಾರಕ ಬೆಲ್ಟ್ ಹಾಕಲಾಗಿದೆ. ಮಂಚನಬೆಲೆ ಹಿನ್ನೀರಿನಲ್ಲಿರುವ ಕಾಡಾನೆ ಸಿದ್ದನ ರಕ್ಷಣೆಗೆ ವೈದ್ಯರು ಎಲ್ಲ ಪ್ರಯತ್ನ ಮಾಡುತ್ತಿದ್ದರಾದರೂ ಉಳಿಯುವ ಸಾಧ್ಯತೆ ಕ್ಷೀಣವಾಗುತ್ತಿದೆ.  ಚಿಕಿತ್ಸೆ ನೀಡಿರುವ ವೈದ್ಯ ಡಾ.ಕುಶಾಲ್‍ಕುಮಾರ್ ಶರ್ಮ ಅವರ ಪ್ರಕಾರ, ಆನೆಯ ದೇಹಕ್ಕೆ ಗುಂಡುಗಳು ಹೊಕ್ಕಿರುವುದು ಡಿಜಿಟಲ್ ಎಕ್ಸ್‍ರೇಯಲ್ಲಿ ಪತ್ತೆಯಾಗಿದೆ. ಆನೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಂಡಿದ್ದೇವೆ. ಉಳಿಯುವ ಸಾಧ್ಯತೆಗಳು ಶೇ.30ರಷ್ಟು ಮಾತ್ರ ಇದೆ. ಆದರೆ, ನಿರೀಕ್ಷೆ ಮೀರಿ ಸಿದ್ದ ಚೇತರಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ಹೇಳಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin