‘ಸಿದ್ದ ಸಾವು ಗೆದ್ದು ನೀ ಎದ್ದು ಬಾ’

ಈ ಸುದ್ದಿಯನ್ನು ಶೇರ್ ಮಾಡಿ

Sidda-Elephant

ಮಂಚನಬೆಲೆ, ಅ.29– ಕಾಲುವೆಗೆ ಬಿದ್ದು ನಾನು ಕಾಲು ಮುರಿದುಕೊಂಡು 62 ದಿನಗಳಿಂದ ನರಳುತ್ತಿದ್ದೇನೆ. ನೀವು ಮಾಡುತ್ತಿರುವ ಎಲ್ಲ ಚಿಕಿತ್ಸೆಗಳೂ ಫಲ ನೀಡುವಂತೆ ಕಾಣುತ್ತಿಲ್ಲ. ಆ ದೇವರೇ ನನ್ನನ್ನು ಕಾಪಾಡಬೇಕು. ಈ ನೋವು, ಸಂಕಟ ಅನುಭವಿಸಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಬಾರದ ಲೋಕಕ್ಕೆ ಕಳುಹಿಸಿಕೊಡಿ. ನನಗೆ ದಯಾಮರಣ ಕಲ್ಪಿಸಿ. ನನ್ನ ಮೂಕ ವೇದನೆಯನ್ನು ಅರ್ಥ ಮಾಡಿಕೊಳ್ಳಿ. ಇದು ಸಿದ್ದನ ಆಕ್ರಂದನ… ಮಂಚನಬೆಲೆ ಸಮೀಪ ಕಾಲುವೆಗೆ ಬಿದ್ದು ಕಾಲು ಮುರಿದುಕೊಂಡು ದಯನೀಯ ಸ್ಥಿತಿಯಲ್ಲಿರುವ ಕಾಡಾನೆಗೆ ಎಲ್ಲ ರೀತಿಯ ಚಿಕಿತ್ಸೆ ನೀಡಿದರೂ ಫಲಿಸುತ್ತಿಲ್ಲ. ಊಟ, ನೀರು, ಗ್ಲೂಕೋಸ್ ಕೊಟ್ಟರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಸಿದ್ದ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಕನಿಷ್ಟ ದಿನವೊಂದಕ್ಕೆ 250 ಲೀಟರ್ ನೀರು ಕುಡಿಯಬೇಕು. 25 ಲೀಟರ್ ನೀರನ್ನು ಕೂಡ ಕುಡಿಯಲು ಸಾಧ್ಯವಾಗುತ್ತಿಲ್ಲ. ಎದ್ದು ನಿಲ್ಲಲಾರದ ಪರಿಸ್ಥಿತಿಯಲ್ಲಿದ್ದಾನೆ. ದಿನದಿಂದ ದಿನಕ್ಕೆ ಅವನ ಆರೋಗ್ಯ ಕ್ಷೀಣಿಸುತ್ತಿದೆ. ವೈದ್ಯರು ಎಷ್ಟೇ ಚಿಕಿತ್ಸೆ ಕೊಟ್ಟರೂ ಸರಿಹೋಗುತ್ತಿಲ್ಲ. ಏನೂ ಮಾಡಲಾಗದೆ ಅವರು ಕೂಡ ಕೈ ಚೆಲ್ಲಿದ್ದಾರೆ.

ಈಗ ಇರುವ ದಾರಿ ಒಂದೇ. ದಯಾಮರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸಿದ್ದನ ಸಂಕಟ ನೋಡಲಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕಳುಹಿಸಿಬಿಡಿ. ನರಳಾಟ, ಒದ್ದಾಟಗಳನ್ನು 60 ದಿನಗಳಿಂದ ಅನುಭವಿಸುತ್ತ ಬಂದಿದ್ದಾನೆ.  ಅರಣ್ಯ ಸಿಬ್ಬಂದಿ, ಪಶು ವೈದ್ಯರು ಮಾಡಿದ ಎಲ್ಲ ಪ್ರಯತ್ನವೂ ವಿಫಲವಾಗುತ್ತಲೇ ಬಂದಿದೆ. ಕನಿಷ್ಠ ಚಿಕಿತ್ಸೆಗೂ ಸಿದ್ದ ಸ್ಪಂದಿಸುತ್ತಿಲ್ಲ. ಈಗಾಗಲೇ ಸುತ್ತಮುತ್ತಲ ಗ್ರಾಮಸ್ಥರು ಬಂದು ಸಿದ್ದನನ್ನು ನೋಡಿ ಕೈ ಮುಗಿದು ಹೋಗುತ್ತಿದ್ದಾರೆ. ಇನ್ನೂ ಕೆಲ ಸೆಲಬ್ರಿಟಿಗಳು ಸಿದ್ದನ ನೆರವಿಗೆ ಧಾವಿಸಿದ್ದು, ಇನ್ನೂ ಯಾವುದಾದರೂ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಮಾಡಲಿ. ಅದಕ್ಕೆ ಎಷ್ಟು ಖರ್ಚಾದರೂ ನಾವು ಭರಿಸಲು ಸಿದ್ಧ. ಸಿದ್ದ ಎದ್ದು ನಿಲ್ಲುವಂತಾಗಲಿ ಎಂಬ ಭರವಸೆಯ ಮಾತುಗಳನ್ನಾಡಿದ್ದಾರೆ.

ಚಿತ್ರನಟ ದುನಿಯಾ ವಿಜಿ ಅವರು ಕೂಡ ಅಲ್ಲಿಗೆ ತೆರಳಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೇಸತ್ತ ಜನ ಆನೆಗಳು ಊರಿಗೆ ಬಂದಾಗ ಅವುಗಳನ್ನು ಹೊಡೆದು ಓಡಿಸಲು ಪ್ರಯತ್ನಿಸುತ್ತಾರೆ. ತಮ್ಮ ಗದ್ದೆಗಳಿಗೆ ವಿದ್ಯುತ್ ತಂತಿಯ ಬೇಲಿಗಳನ್ನು ಅಳವಡಿಸಿಕೊಂಡು ಭದ್ರತೆ ಮಾಡಿಕೊಳ್ಳುತ್ತಾರೆ. ಆದರೆ, ಅದೇ ಕಾಡಾನೆ ಈ ರೀತಿ ನೆಲಕ್ಕೆ ಬಿದ್ದಾಗ ಎಷ್ಟು ಮರುಗುತ್ತಾರೆ. ಅದರ ಬಗ್ಗೆ ಎಷ್ಟು ಅನುಕಂಪ ಪಡುತ್ತಾರೆ ಎಂಬುದಕ್ಕೆ ಸಿದ್ದನ ಪ್ರಕರಣ ಸ್ಪಷ್ಟ ಉದಾಹರಣೆ.  ಕಾಡಾನೆ ಸಿದ್ದ ಕಾಲು ಮುರಿದುಕೊಂಡು ಕಾಲುವೆಗೆ ಬಿದ್ದಾಗಿನಿಂದ ಸುತ್ತಮುತ್ತಲಿನ ಜನ ಅವನಿಗೆ ಬೇಕಾದ ಆಹಾರ ಪದಾರ್ಥಗಳನ್ನು ಕೊಡುತ್ತ ಬಂದಿದ್ದಾರೆ. ರಾಶಿ ರಾಶಿ ಹಣ್ಣು, ತರಕಾರಿಗಳನ್ನು ತಂದು ಸುರಿದಿದ್ದಾರೆ. ಅವನು ನೆಲಕ್ಕೆ ಬಿದ್ದಾಗ ಮಮ್ಮಲ ಮರುಗಿದ್ದಾರೆ. ಅವನಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೆಲ್ಲ ಅವನ ಸುತ್ತಮುತ್ತ ನಿಂತು ಕಂಬನಿ ಮಿಡಿದಿದ್ದಾರೆ. ಮಾನವೀಯತೆ ಮೆರೆದಿದ್ದಾರೆ. ಈಗಲೂ ಅವನ ಸಂಕಟ ನೋಡಲಾರದೆ ಕೊರಗುತ್ತಿದ್ದಾರೆ.

ಆನೆ ಇದ್ದರೂ ಸಾವಿರ ಸತ್ತರೂ ಸಾವಿರ ಎಂಬ ಗಾದೆಯಿದೆ. ಅದು ನಿಜವೂ ಹೌದು. ಆದರೆ, ಈ ರೀತಿ ಕೊರಗಿ ಕೊರಗಿ ಸಾಯುವುದನ್ನು ನೋಡಲು ಆಗುತ್ತಿಲ್ಲ. ಬದುಕಿಸುವ ಪ್ರಯತ್ನ ಮುಂದುವರಿಸಲಾಗಿದೆ. ಜನ ಬಂದು ಆತನಿಗೆ ಹಣ್ಣು, ಹುಲ್ಲು, ಅನ್ನ, ಆಹಾರಗಳನ್ನು ನೀಡುತ್ತಿದ್ದರೂ ಅದನ್ನು ದಕ್ಕಿಸಿಕೊಳ್ಳಲಾರದ ಪರಿಸ್ಥಿತಿಯಲ್ಲಿ ಸಿದ್ದನಿದ್ದಾನೆ. ವಿಧಿ ಲಿಖಿತ ಏನಿದೆಯೋ ಏನೋ ಕಾದು ನೋಡಬೇಕು. ಗಜೇಂದ್ರನನ್ನು ಮೊಸಳೆಯಿಂದ ಮಹಾವಿಷ್ಣು ಕಾಪಾಡಿದಂತೆ ಸಿದ್ದನನ್ನೂ ಪವಾಡ ಸದೃಶದಲ್ಲಿ ಕಾಪಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಎಲ್ಲ ಅವನಿಚ್ಚೆ ಎಂದು ಅಲ್ಲಿದ್ದ ಜನ ಮಾತನಾಡಿಕೊಳ್ಳುತ್ತಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin