ಸಿನಿಮಾ ತೆಗೆಯಲು ಉದ್ಯಮಿ ಪುತ್ರನ ಅಪಹರಿಸಿ ಜೈಲು ಸೇರಿದ ಹೀರೋ ಅಂಡ್ ಗ್ಯಾಂಗ್

ಈ ಸುದ್ದಿಯನ್ನು ಶೇರ್ ಮಾಡಿ

 

Hero-0ಬೆಂಗಳೂರು,ಆ.29-ಸಿನಿಮಾ ಚಿತ್ರೀಕರಣಕ್ಕೆ ಹಣಕಾಸು ತೊಂದರೆ ಎದುರಾದಾಗ ಉದ್ಯಮವೊಂದರ ಎಂಡಿ ಪುತ್ರನನ್ನು ಅಪಹರಿಸಿದ್ದ ನಾಯಕ ನಟ ಸೇರಿದಂತೆ ಐದು ಮಂದಿ ಅಪಹರಣಕಾರರನ್ನು ಈಶಾನ್ಯ ವಿಭಾಗದ ಯಲಹಂಕ ನ್ಯೂಟೌನ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಕೃಷ್ಣರಾಜ ಪುರಂನ ವಿಜಯಾ ಬ್ಯಾಂಕ್ ಕಾಲೋನಿ ನಿವಾಸಿ ಮುನಿಯಪ್ಪ(29),   ಕೊಡಿಗೆಹಳ್ಳಿಯ ಹಸನ್ ಡೋಂಗ್ರಿ(26), ಯಲಹಂಕದ ಜಗದೀಶ್(32), ಯಲಹಂಕ ಉಪನಗರದ   ಜಗನ್ನಾಥ್(28) ಮತ್ತು ಮನೋಜ್(19) ಬಂಧಿತ ಅಪಹರಣಕಾರರು.   ಹಿನ್ನಲೆ: ಬಂಧಿತರ ಪೈಕಿ, ಪ್ರಮುಖ ಆರೋಪಿ ಮುನಿಯಪ್ಪ ಮೂಲತಃ ಎಂ.ಎಸ್.ಪಾಳ್ಯ ಸಮೀಪವಿರುವ ಸಿಂಗಾಪುರ ಲೇಔಟ್ನ ನಿವಾಸಿಯಾಗಿದ್ದು , ಈತ 2008-09ನೇ ಸಾಲಿನಲ್ಲಿ ಮಾಜಿ ಶಾಸಕರೊಬ್ಬರ ಮಗಳನ್ನು ಅಪಹರಿಸಿ ಮದುವೆಯಾಗಿದ್ದನು. ಈತನ ವಿರುದ್ಧ ಚಿಕ್ಕಬಳ್ಳಾಪುರ ಟೌನ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು.

Film-01
Film-03

ತದನಂತರ ರಾಜೀ ಸಂಧಾನ ನಡೆದರೂ ಈತ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದುದರಿಂದ ಯುವತಿ ಮನೆಯವರು ವಿಚ್ಛೇಧನದಲ್ಲಿ ಅಂತ್ಯಗೊಳಿಸಿದ್ದರು.   ಈತ ಸರ ಅಪಹರಣ ಮಾಡುವ ಗ್ಯಾಂಗ್ನೊಂದಿಗೆ ಸೇರಿ ಹಲವಾರು ಸರ ಅಪಹರಣಗಳನ್ನು ಕೂಡ ಮಾಡಿದ್ದು , ಈ ಬಗ್ಗೆ ಗಂಗಮ್ಮನಗುಡಿ, ಜಾಲಹಳ್ಳಿ, ಸೋಲದೇವನಹಳ್ಳಿ, ಯಶವಂತಪುರ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿದೆ.   ಅಲ್ಲದೆ ತನ್ನ ಸಹಚರರೊಂದಿಗೆ ಹಾಸನ ಜಿಲ್ಲೆಯಲ್ಲಿ ಮಾಡಿದ್ದ ಡಕಾಯಿತಿ,ಸರ ಅಪಹರಣ ಪ್ರಕರಣಗಳು ಗಂಡಸಿ ಠಾಣೆ, ಅರಸೀಕೆರೆ ಟೌನ್ ಠಾಣೆ ಹಾಗೂ ಬಾಣಾವಾರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ.

Film-02

ಇಷ್ಟಲ್ಲದೆ 2ನೇ ವಿವಾಹವಾದ ಆರೋಪಿ ಮುನಿಯಪ್ಪ ಮತ್ತಿಕೆರೆಯಲ್ಲಿ ಅವರ್ ಎಜುಕೇಷನ್ ಸೆಂಟರ್ ಹೆಸರಿನಲ್ಲಿ ಕಚೇರಿ ಆರಂಭಿಸಿ ಕೆಲಸ ಕೊಡಿಸುವುದಾಗಿ ಹೇಳಿ ನಂಬಿಸಿ ಹಲವಾರು ವಿದ್ಯಾರ್ಥಿಗಳಿಂದ ಹಣ ಪಡೆದು ಮೋಸ ಮಾಡಿದ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಲ್ಲದೆ ಪತ್ರಕರ್ತನೆಂದು ಹೇಳಿಕೊಂಡು ಟಿವಿ ವಾಹಿನಿಯೊಂದರಲ್ಲಿ ಧಾರಾವಾಹಿ ತಯಾರಿಸಲು ಮುಂದಾಗಿದ್ದನು.  ಸಿನಿಮಾ ಹುಚ್ಚು ಹತ್ತಿಸಿಕೊಂಡಿದ್ದ ಈತ ನಾಯಕ ನಟನಾಗಿ ಚಿತ್ರ ನಿರ್ಮಿಸಲು ಹೊರಟು ಚಾಲೆಂಜರ್ ಎಂಬ ಸಿನಿಮಾವನ್ನು ನಿರ್ದೇಶಕರೊಬ್ಬರೊಂದಿಗೆ ಚಿತ್ರೀಕರಣ ಆರಂಭಿಸುತ್ತಾನೆ. ಈ ವೇಳೆ ಅದಾಗಲೇ ಬೀರ ಚಿತ್ರತಂಡದಲ್ಲಿದ್ದ 2ನೇ ಆರೋಪಿಯಾದ ಹಸನ್ ಡೋಂಗ್ರಿ ಎಂಬುವನು ಜೊತೆಯಾಗುತ್ತಾನೆ.

ಹಸನ್ ಡೋಂಗ್ರಿ ನಾಯಕ ನಟಿಯೊಬ್ಬರ ಆಪ್ತ ಸಹಾಯಕನಾಗಿ ಕಾರ್ಯ ನಿರ್ವಹಿಸಿದ್ದನು. ಚಿತ್ರೀಕರಣಕ್ಕೆ ಹಣಕಾಸಿನ ತೊಡಕು ಕಾಣಿಸಿಕೊಂಡಾಗ ಸರ ಅಪಹರಣ ಮಾಡುವ ಬಗ್ಗೆ ಯೋಜನೆ ರೂಪಿಸಿ ಅದು ಯಶಸ್ವಿಯಾಗದ ಕಾರಣ ಸೋಲೂರಿನ ಹತ್ತಿರ ಸರ ಮಹಿಳೆಯ ಸರ ಅಪಹರಣ ಮಾಡಿ ಅದರಿಂದ ಬಂದ ಹಣವನ್ನು ಸಹ ಚಿತ್ರೀಕರಣಕ್ಕೆ ಬಳಸಿಕೊಳ್ಳುತ್ತಾರೆ.  ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇನ್ನು ಹೆಚ್ಚಿನ ಹಣ ಬೇಕಾದ ಕಾರಣ ಇವರಿಬ್ಬರು ದೊಡ್ಡ ಯೋಜನೆ ರೂಪಿಸುತ್ತಾರೆ. ಅದರಂತೆ ಮತ್ತಿಕೆರೆಯಲ್ಲಿ ತನ್ನ ಹಳೆ ಕಚೇರಿಯಿದ್ದ ಅಂಗಡಿ ಮಾಲೀಕನನ್ನು ಹೇಗಾದರೂ ಮಾಡಿ ಅಪಹರಿಸಿ ಅದರಿಂದ ಬಂದ ಹಣವನ್ನು ಚಿತ್ರೀಕರಣಕ್ಕೆ ಬಳಸಿಕೊಳ್ಳಲು ಚಿಂತನೆ ನಡೆಸಿ ಹಳೇ ಮಾರ್ಟೀಜ್ ಕಾರನ್ನು ಕ್ವಿಕ್ಕರ್ನಲ್ಲಿ ಖರೀದಿಸುತ್ತಾರೆ.

ತನ್ನ ಕೃತ್ಯಕ್ಕೆ ಸಹಾಯ ಮಾಡಲು ಎರಡು ಲಕ್ಷ ರೂ. ಸುಪಾರಿ ನೀಡಿ ಹಳೆಯ ಸ್ನೇಹಿತರಾದ ಜಗದೀಶ, ಜಗನ್ನಾಥ ಹಾಗೂ ಕೆಂಚ ಅವರನ್ನು ಕರೆಸಿಕೊಂಡು ಖರೀದಿಸಿದ ಕಾರಿನಲ್ಲಿ ಅಂಗಡಿ ಮಾಲೀಕನ ಚಲನವಲನವನ್ನು ಪ್ರತಿ ದಿವಸ ನಿಗಾ ಇಟ್ಟು,ಇವರನ್ನು ಅಪಹರಿಸುವುದು ಕಷ್ಟಸಾಧ್ಯವೆಂದು ನಿರ್ಧರಿಸಿ ಹೆದರಿಸಿ ಸುಮ್ಮನಾಗುತ್ತಾರೆ.  ಈ ವೇಳೆ ಗುಂಪಿನಲ್ಲಿದ್ದ ಜಗದೀಶ ಎಂಬುವನು ನಮ್ಮ ಹಳ್ಳಿಯ ಹತ್ತಿರವಿರುವ ಶ್ರೀಮಂತರ ಮಕ್ಕಳು ವ್ಯಾಸಂಗ ಮಾಡುವ ನಿಟ್ಟೆ ಕಾಲೇಜಿನಲ್ಲಿ ಯುವಕನನ್ನು ಅಪಹರಿಸಿದರೆ ಅಪಾರ ಹಣ ಸಿಗಬಹುದೆಂದು ಸಹಚರರಿಗೆ ಸಲಹೆ ನೀಡುತ್ತಾನೆ.

PSI
PSI

ಅದರಂತೆ ಆ ಕಾಲೇಜಿನಲ್ಲಿ 2ನೇ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ನಿಶ್ಚಲ್ ಬಾಬುನನ್ನು ಹಿಂಬಾಲಿಸಿದ್ದು, ಆತ ಮನೆ ಬಳಿ ಬರುತ್ತಿದ್ದಂತೆ ಭವ್ಯವಾದ ಬಂಗಲೆ ಮತ್ತು ವಿದೇಶ ಕಾರುಗಳನ್ನು ಕಂಡು ಈತ ಭಾರೀ ಶ್ರೀಮಂತನೆಂದು ಭಾವಿಸಿ ಆ.23ರಂದು ನಿಟ್ಟೆ ಕಾಲೇಜಿನಿಂದ ಮರಳುತ್ತಿದ್ದಾಗ ಯಲಹಂಕ ಕೋಗಿಲು ಕ್ರಾಸ್ವರೆಗೆ ಹಿಂಬಾಲಿಸಿ ಅಲ್ಲಿಂದ ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದರು.  ಇತ್ತ ಮಗ ಸಂಜೆಯಾದರೂ ಮನೆಗೆ ಬಾರದಿರುವುದರಿಂದ ಗಾಬರಿಗೊಂಡಿದ್ದ ಪೋಷಕರು ಆತಂಕದಿಂದ ಹುಡುಕಲಾರಂಭಿಸುತ್ತಿದ್ದಂತೆ ಅಪಹರಣಕಾರರಿಂದ ದೂರವಾಣಿ ಕರೆ ಬಂದಿದ್ದು , ನಿಮ್ಮ ಮಗನನ್ನು ಕಿಡ್ನಾಪ್ ಮಾಡಿದ್ದು , ನಮ್ಮ ಬೇಡಿಕೆಗಳನ್ನು ಮರುದಿನ ತಿಳಿಸುವುದಾಗಿ ಬೆದರಿಸಿ ಫೋನ್ ಸ್ಥಗಿತಗೊಳಿಸಿದ್ದಾರೆ.  ಇದರಿಂದ ಮತ್ತಷ್ಟು ಗಾಬರಿಯಾದ ಪೋಷಕರು ತಕ್ಷಣ ಯಲಹಂಕ ನ್ಯೂಟೌನ್ ಪೊಲೀಸರಿಗೆ ದೂರು ನೀಡಿದ್ದರು.

ಹಣಕ್ಕಾಗಿ ಅಪಹರಣ ಮಾಡಿದ್ದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾಗದ ಡಿಸಿಪಿ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಲು 10 ತಂಡಗಳನ್ನು ರಚಿಸಿದ್ದರು.
ಈ ತಂಡದಲ್ಲಿ ಮೂವರು ಎಸಿಪಿ, 10 ಪಿಐ, 25 ಪಿಎಸ್ಐ -ಎಎಸ್ಐ, ಹಾಗೂ 100 ಸಿಬ್ಬಂದಿಗಳನ್ನೊಳಗೊಂಡ ತಂಡಗಳನ್ನು ರಚಿಸಿ ಇಡೀ ನಗರದಲ್ಲಿ ಕಾರ್ಯಾಚರಣೆಗಾಗಿ ಎಲ್ಲಾ ಕಡೆ ನಾಕಾಬಂಧಿ ಹಾಕಿ ತನಿಖೆ ಮುಂದುವರೆಸಿದ್ದರು.  ಅಪಹರಿಸಿರುವ ವಿಷಯ ಪೊಲೀಸರಿಗೆ ಗೊತ್ತಾಗಿದೆ ಎಂಬ ಮಾಹಿತಿ ಅಪಹರಣಕಾರರಿಗೆ ತಿಳಿದು ನಿರ್ಜನ ಪ್ರದೇಶಕ್ಕೆ ಹೋಗುವಾಗ, ಪೊಲೀಸರನ್ನು ಕಂಡು ಬೆಂಗಳೂರು ಹೊರ ವಲಯಕ್ಕೆ ಹೋಗಿ ಕುಣಿಗಲ್ ರಸ್ತೆಯಲ್ಲಿ ರಾತ್ರಿ ವಿಶ್ರಮಿಸುತ್ತಾರೆ.

ಆ.24ರಂದು ಬೆಳಗ್ಗೆ 9 ಗಂಟೆಗೆ ಅಪಹರಿಸಿದ್ದ ಯುವಕನನ್ನು ಕರೆದುಕೊಂಡು ವಾಪಸ್ ನಗರಕ್ಕೆ ಬರುತ್ತಿದ್ದಾಗ ಹೆಬ್ಬಾಳ ರಸ್ತೆಯಲ್ಲಿ ಇವರ ವಾಹನದ ಹಿಂದೆ ಹಿಂಬಾಲಿಸುತ್ತಿದ್ದ ಒಂದು ಖಾಸಗಿ ಕಾರನ್ನು ಗಮನಿಸಿದ ಆರೋಪಿ ಹಸನ್ ಡೋಂಗ್ರಿಇದು ಮಫ್ತಿಯಲ್ಲಿ ಬರುತ್ತಿರುವ ಪೊಲೀಸರ ವಾಹನವಾಗಿದೆ ಎಂದು ಹೇಳಿದಾಗ ಅಪಹರಣಕಾರರು ಭಯಪಟ್ಟು ಟ್ರಾಫಿಕ್ನಲ್ಲೇ ಆ ವಾಹನವನ್ನು ತಪ್ಪಿಸಿ ಮುಂದೆ ಬಂದು ಅಪಹರಿಸಿದ್ದ ಈತನನ್ನು ಕೆಳಗಿಳಿಸಿ ತಲೆಮರೆಸಿಕೊಂಡಿದ್ದರು.  ಈ ಪ್ರಕರಣದ ಜಾಡು ಹಿಡಿದು ಜಗದೀಶ್ ಎಂಬಾತನ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇವರಿಂದ ಕೃತ್ಯಕ್ಕೆ ಬಳಸಿದ್ದ ಕಾರು, ಬೈಕ್ ವಶಪಡಿಸಿಕೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin