ಸಿರಿಯಾದಂತೆ ಐಎಸ್ ಉಗ್ರರ ಕಾರಾಸ್ಥಾನವಾಗುತ್ತಿದೆ ಪಾಕಿಸ್ತಾನ..!

ಈ ಸುದ್ದಿಯನ್ನು ಶೇರ್ ಮಾಡಿ

ISIS01

ನವದೆಹಲಿ/ಲಾಹೋರ್, ಡಿ.22-ಪಾಕಿಸ್ತಾನವು ಅತ್ಯಂತ ಅಪಾಯಕಾರಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಕಾರಾಸ್ಥಾನವೇ ? ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಇದು ನಿಜ ಎನಿಸುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಪ್ರಮುಖ ಐಎಸ್ ಉಗ್ರನೊಬ್ಬನನ್ನು ಪಾಕ್‍ನ ಭಯೋತ್ಪಾದನೆ ನಿಗ್ರಹ ಇಲಾಖೆ (ಸಿಟಿಡಿ) ಅಧಿಕಾರಿಗಳು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಕೆಲವು ಸ್ಫೋಟಕ ಮಾಹಿತಿಗಳು ಬಹಿರಂಗಗೊಂಡಿವೆ.

ಲಾಹೋರ್‍ನಿಂದ ಸುಮಾರು 200 ಕಿ.ಮೀ.ದೂರದಲ್ಲಿರುವ ಸರ್‍ಗೋಢಾ ಜಿಲ್ಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಸಿಟಿಡಿ ಮತ್ತು ಪೊಲೀಸ್ ಅಧಿಕಾರಿಗಳು ಐಎಸ್‍ನ ಕುಖ್ಯಾತ ಸದಸ್ಯನೊಬ್ಬನನ್ನು(ಹೆಸರನ್ನು ಬಹಿರಂಗಗೊಳಿಸಿಲ್ಲ) ಬಂಧಿಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಐಎಸ್ ಸಂಘಟನೆಯ ಧ್ವಜವನ್ನು ವಶಪಡಿಸಿಕೊಂಡಿದ್ದರು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಕೆಲವೊಂದು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿತು. ನಂತರ ಆತನನ್ನು ರಹಸ್ಯ ತಾಣವೊಂದಕ್ಕೆ ಕರೆದೊಯ್ಡು ತೀವ್ರ ವಿಚಾರಣೆ ಒಳಪಡಿಸಲಾಗಿದೆ.  ಈತ ಸೆರೆ ಸಿಕ್ಕುವುದಕ್ಕೆ ಮುನ್ನ ಕಳೆದ ಭಾನುವಾರ ಇದೇ ಪಂಜಾಬ್ ಪ್ರಾಂತ್ಯದ ಡೆರಾ ಘಾಜಿ ಖಾನ್ ಜಿಲ್ಲೆಯಲ್ಲಿ ಸಿಟಿಡಿ ಅಧಿಕಾರಿಗಳು ಐವರು ಶಂಕಿತ ಐಎಸ್ ಉಗ್ರರನ್ನು ಶೂಟೌಟ್‍ನಲ್ಲಿ ಹತ್ಯೆ ಮಾಡಿದ್ದರು. ಇತರ ನಾಲ್ವರು ಪರಾರಿಯಾಗಿದ್ದರು.

ಪಾಕಿಸ್ತಾನದ ಪಂಬಾಜ್ ಸೇರಿದಂತೆ ಇತರ ಭಾಗಗಳಲ್ಲಿ ಐಎಸ್ ಉಗ್ರರ ಚಟುವಟಿಕೆಗಳು ತೀವ್ರವಾಗಿ ಹೆಚ್ಚಾಗುತ್ತಿರುವುದಕ್ಕೆ ಇದು ಪುಷ್ಟಿ ನೀಡಿದೆ. ಪಾಕಿಸ್ತಾನವನ್ನು ಸಿರಿಯಾದಂತೆ ತಮ್ಮ ಇನ್ನೊಂದು ಕಾರಾಸ್ಥಾನ ಮಾಡಿಕೊಳ್ಳಲು ಐಎಸ್ ಉಗ್ರರು ಹವಣಿಸುತ್ತಿದ್ದಾರೆಂಬ ಮಾಹಿತಿಯೂ ಲಭಿಸಿದೆ. ಬಂಧಿತ ಉಗ್ರ ಬಾಯ್ಬಿಟ್ಟಿರುವ ಇನ್ನೂ ಕೆಲವು ಮಹತ್ವದ ಸುಳಿವುಗಳನ್ನು ಪಾಕಿಸ್ತಾನ ದೇಶದ ಸುರಕ್ಷತೆ ದೃಷ್ಟಿಯಿಂದ ಬಹಿರಂಗಗೊಳಿಸುತ್ತಿಲ್ಲ.

ನಿಜವಾಗುತ್ತಿದೆ ಭಾರತದ ಶಂಕೆ :

ಭಯೋತ್ಪಾದಕರನ್ನು ತಯಾರಿಸುವ ಕಾರ್ಖಾನೆಯಾಗಿರುವ ಪಾಕಿಸ್ತಾನದಲ್ಲಿ ಐಎಸ್ ಉಗ್ರರು ಪ್ರಾಬಲ್ಯ ಸಾಧಿಸುವ ಕಾಲ ದೂರವಿಲ್ಲ ಎಂದು ಭಾರತದ ಬೇಹುಗಾರಿಕೆ ಸಂಸ್ಥೆಗಳು ಇತ್ತೀಚೆಗೆ ಗುಮಾನಿ ವ್ಯಕ್ತಪಡಿಸಿದ್ದವು. ಆ ಸಂಶಯಕ್ಕೆ ಪುಷ್ಟಿ ನೀಡುವ ಬೆಳವಣಿಗೆಗಳು ಪಾಕ್‍ನಲ್ಲಿ ನಡೆಯುತ್ತಿವೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin