ಸಿರಿಯಾ ಮೇಲೆ ದಾಳಿ : ವಿಶ್ವಸಂಸ್ಥೆಯಲ್ಲಿ ಅಮೆರಿಕ, ರಷ್ಯಾ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

Un-America--01

ವಿಶ್ವಸಂಸ್ಥೆ, ಏ.8-ಸಿರಿಯಾದ ವಾಯುನೆಲೆ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿ ಕುರಿತು ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಆತಂಕ ಸೃಷ್ಟಿಯಾಗಿರುವಾಗಲೇ, ಈ ವಿಷಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲೂ ಇಂದು ಪ್ರತಿಧ್ವನಿಸಿದೆ. ಈ ವಿಷಯ ಕುರಿತು ಅಮೆರಿಕ ಮತ್ತು ರಷ್ಯಾ ನಡುವೆ ಜಟಾಪಟಿಗೆ ಸಹ ಕಾರಣವಾಯಿತು.   ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಸಿರಿಯಾ ಮೇಲೆ ಮತ್ತಷ್ಟು ದಾಳಿ ನಡೆಸಲು ತಾನು ಸಜ್ಜಾಗಿರುವುದಾಗಿ ಅಮೆರಿಕ ಎಚ್ಚರಿಕೆ ನೀಡಿದರೆ, ಇದನ್ನು ಖಂಡಿಸಿರುವ ರಷ್ಯಾ, ಇದೊಂದು ಅಕ್ರಮಣಕಾರಿ ಕೃತ್ಯವಾಗಿದ್ದು, ವಾಷಿಂಗ್ಟನ್ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.

ವಾಯು ನೆಲೆಯಿಂದ ರಾಸಾಯನಿಕ ಅಸ್ತ್ರಗಳನ್ನು ಬಳಸಿದ ಸಿರಿಯಾ ಸರ್ಕಾರದ ಮೇಲೆ ಪ್ರತೀಕಾರದ ದಾಳಿಯಾಗಿ ಸಿರಿಯಾದ ಶಯರತ್ ಏರ್‍ಫೀಲ್ಡ್ ಮೇಲೆ ಅಮೆರಿಕ 56 ಟೋಮಹಾಕ್ ಕ್ಷಿಪಣಿಗಳನ್ನು ಉಡಾಯಿಸಿ ಧ್ವಂಸಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸಿರಿಯಾದಲ್ಲಿ ತಲೆದೋರಿರುವ ಪರಿಸ್ಥಿತಿ ಕುರಿತು ಇಂದು ವಿಶ್ವಸಂಸ್ಥೆ 15 ದೇಶಗಳ ಭದ್ರತಾ ಮಂಡಳಿ ತುರ್ತು ಸಭೆ ಕರೆದಿತ್ತು.  ವಿಶ್ವಸಂಸ್ಥೆಗೆ ಅಮೆರಿಕ ರಾಯಭಾರಿ ಆಗಿರುವ ನಿಕ್ಕಿ ಹ್ಯಾಲೆ, ಈ ದಾಳಿ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡರು. ಅಲ್ಲದೇ ಮತ್ತಷ್ಟು ಅಕ್ರಮಣ ನಡೆಸಲುಸಜ್ಜಾಗಿರುವುದಾಗಿಯೂ ತಿಳಿಸಿದರು.

ಅಮರಿಕದ ಈ ಹೇಳಿಕೆಯಿಂದ ಕುಪಿತರಾದ ವಿಶ್ವಸಂಸ್ಥೆ ರಷ್ಯಾದ ಉಪ ರಾಯಭಾರಿ ವ್ಲಾದಿಮಿರ್ ಸಾಪ್ರೋನ್‍ಕೋವ್ ಆಕ್ಷೇಪ ವ್ಯಕ್ತಪಡಿಸಿ, ಒಂದು ಸಾರ್ವಭೌಮತ್ವದ ದೇಶದ ಮೇಲೆ ಅಮೆರಿಕ ಆಕ್ರಮಣಕಾರಿ ಕೃತ್ಯ ನಡೆಸಿದೆ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಅಮೆರಿಕದ ಈ ಕ್ರಮವು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಸ್ಥಿರತೆಗೆ ಧಕ್ಕೆ ತಂದಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹ್ಯಾಲೆ ಮತ್ತು ವ್ಲಾದಿಮಿರ್ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin