ಸಿಲಿಕಾನ್ ಸಿಟಿಗೆ ಮತ್ತೊಂದು ಕಪ್ಪುಚುಕ್ಕೆ, ನಕಲಿ ಫ್ಯಾಷನ್ ಉತ್ಪನ್ನಗಳ ತಾಣವಾದ ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Cosmetics

ಬೆಂಗಳೂರು, ಮಾ.8- ಅಪರಾಧಗಳ ರಾಜಧಾನಿ, ಆತ್ಮಹತ್ಯೆಗಳ ನಗರಿ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಉದ್ಯಾನನಗರಿ ಬೆಂಗಳೂರಿಗೆ ಈಗ ಮತ್ತೊಂದು ಕಪ್ಪು ಚುಕ್ಕಿ ಮೆತ್ತಿಕೊಂಡಿದೆ. ಬೆಂಗಳೂರು ನಕಲಿ ಫ್ಯಾಷನ್ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕಗಳ ತಾಣವಾಗಿ ಪರಿವರ್ತಿತವಾಗುತ್ತಿದೆ. ಅತ್ಯಂತ ದುಬಾರಿ ಬೆಲೆಯ ಫ್ಯಾಷನ್ ಉತ್ಪನ್ನಗಳಿಂದ ಹಿಡಿದು ಬೇಬಿ ಪ್ರಾಡಕ್ಟ್‍ಗಳ ತನಕ ಇಲ್ಲಿ ಎಲ್ಲವೂ ನಕಲಿಯಾಗಿ ಸೃಷ್ಟಿಯಾಗುತ್ತಿವೆ. ಕಳೆದ ಎರಡು ತಿಂಗಳಿನಿಂದ ಈ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿದ್ದು, ನಕಲಿ ಜಾಲದ ವ್ಯವಸ್ಥಿತ ದಂಧೆಯನ್ನು ಮಟ್ಟ ಹಾಕಲು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ನಕಲಿ ಸಂಸ್ಥೆಗಳ ವಿರುದ್ಧ ಚಾಟಿ ಬೀಸಿರುವ ಕೇಂದ್ರೀಯ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಇತ್ತೀಚೆಗೆ ಬೋಗಸ್ ಗ್ಯಾಸ್ ಸ್ಟೇಷನ್ ಲ್ಯೂಯಿ ವಿಯೂಟ್ಟೋನ್ ಮತ್ತು ಒಂದು ನಕಲಿ ಸಾಬೂನು ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ್ದಾರೆ.

ಈ ವರ್ಷದ ಆರಂಭದಲ್ಲೇ ಸಿಸಿಬಿ (ವಂಚನೆ ಮತ್ತು ದುರ್ಬಳಕೆ) ಪೊಲೀಸರು ಕಾಪಿರೈಟ್ ಕಾಯ್ದೆ ಅಡಿ 23 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ. 2016ರಲ್ಲಿ 53 ಪ್ರಕರಣಗಳು ಪತ್ತೆಯಾಗಿದ್ದವು.   ಸೌಂದರ್ಯ ವರ್ಧಕಗಳು, ಪ್ರಸಾದನಗಳು, ಫ್ಯಾಷನ್ ಉತ್ಪನ್ನಗಳು ಮತ್ತು ಬೇಬಿ ಕೇರ್ ಪ್ರಾಡಕ್ಟ್‍ಗಳನ್ನು ತಯಾರು ಮಾಡುವ ಪ್ರತಿಷ್ಠಿತ ಸಂಸ್ಥೆಗಳು ನೀಡಿರುವ ದೂರು ಮತ್ತು ಮಾಹಿತಿದಾರರ ಸುಳಿವಿನ ಮೇರೆಗೆ ನಕಲಿ ಜಾಲದ ವಿರುದ್ಧ ಬಿರುಸಿನ ಕಾರ್ಯಾಚರಣೆ ಮುಂದುವರಿದಿದೆ.   ಇದಲ್ಲದೆ, ದುಬಾರಿ ಬೆಲೆಯ ಬ್ರಾಂಡೆಡ್ ಪಾದರಕ್ಷೆಗಳು, ಬಟ್ಟೆಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತದ್ರೂಪು ನಕಲಿಯಾಗಿ ಸೃಷ್ಟಿಸುವ ಜಾಲಗಳೂ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಿ ಕಾನೂನಿಗೆ ಒಳಪಡಿಸಲಾಗುವುದು ಎಂದು ಸಿಸಿಬಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin