ಸಿಲಿಕಾನ್ ಸಿಟಿಯಲ್ಲಿ ಗಣೇಶ ವಿಸರ್ಜನೆಗೆ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

Ganesh

ಬೆಂಗಳೂರು, ಸೆ.4- ಸಿಲಿಕಾನ್ ಸಿಟಿಯಲ್ಲಿ ಪರಿಸರಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ಬಿಬಿಎಂಪಿ ಸಕಲ ಸಿದ್ಧತೆಗಳನ್ನು ಕೈಗೊಂಡಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ಹಾಗೂ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಪ್ಲಾಸ್ಟಿಕ್ ಉತ್ಪನ್ನಗಳನ್ನು ಬಳಸಬಾರದು ಎಂದು ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್ ಬಂಟಿಂಗ್ಸ್, ಬ್ಯಾನರ್ಸ್ ಮತ್ತು ಪರಿಸರಕ್ಕೆ ಹಾನಿ ಮಾಡುವಂತಹ ಉತ್ಪನ್ನಗಳ ಬಳಕೆಗೆ ನಿಷೇಧ ಹೇರಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಗೆ ಹಲಸೂರು, ಸ್ಯಾಂಕಿ ಮತ್ತು ಯಡಿಯೂರು ಕೆರೆ ಸೇರಿದಂತೆ 35 ಕೆರೆಗಳಲ್ಲಿ ವಿಶೇಷ ಪುಷ್ಕರಣಿಗಳನ್ನು ನಿರ್ಮಿಸಲಾಗಿದೆ. ಇದರ ಜೊತೆಗೆ 185ಕ್ಕೂ ಹೆಚ್ಚು ಸಂಚಾರಿ ಘಟಕಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಸರತಿ ಸಾಲಿನಲ್ಲಿ ಬಂದು ತಮ್ಮ ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕರು ತಮ್ಮ ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸಿ ಕಾಲ್ನಡಿಗೆಯಲ್ಲೇ ಗಣೇಶ ಮೂರ್ತಿಗಳನ್ನು ತಂದು ಬಿಬಿಎಂಪಿ ನಿಯೋಜಿಸಿರುವ ಸಿಬ್ಬಂದಿಗಳಿಂದಲೇ ತಮ್ಮ ಮೂರ್ತಿಗಳನ್ನು ವಿಸರ್ಜಿಸಬೇಕೆಂದು ಅವರು ಕೋರಿದ್ದಾರೆ. ಕೆರೆ ನೀರು ಮಲಿನವಾಗುವಂತಹ ವಿಷಯುಕ್ತ ಬಣ್ಣಗಳ ಲೇಪನದ ಮೂರ್ತಿಗಳನ್ನು ಯಾರೂ ಖರೀದಿಸಬಾರದು. ಒಂದು ವೇಳೆ ಅಂತಹ ಮೂರ್ತಿಗಳನ್ನು ಖರೀದಿಸಿದ್ದರೆ ಕೆರೆಗಳಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ ಕೊಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಗಣೇಶ ಮೂರ್ತಿಗಳ ಮೇಲಿನ ಹಸಿ ತ್ಯಾಜ್ಯಗಳನ್ನು ಬಿಬಿಎಂಪಿ ನಿಗದಿ ಪಡಿಸಿದ ಸ್ಥಳಗಳಲ್ಲೇ ವಿಲೇವಾರಿ ಮಾಡಬೇಕು. ಕೆರೆ ಬಳಿ ಪಟಾಕಿ ಸಿಡಿಸುವುದು, ಧ್ವನಿವರ್ಧಕ ಬಳಸಲು ಅವಕಾಶವಿರುವುದಿಲ್ಲ. ಗಣೇಶ ಮೂರ್ತಿ ವಿಸರ್ಜಿಸಲು ಅವಕಾಶ ಕಲ್ಪಿಸಿರುವ ಕೆರೆಗಳ ಸಮೀಪ ನುರಿತ ಈಜುಗಾರರು ಗ್ಯಾಂಗ್‍ಮೆನ್‍ಗಳು ಸ್ವಯಂ ಸೇವಕರು, ಅಗ್ನಿಶಾಮಕದಳದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಈ ಬಾರಿ ಪರಿಸರ ಮಾಲಿನ್ಯವಾಗದಂತೆ ಅರ್ಥಪೂರ್ಣವಾಗಿ ಗೌರಿ-ಗಣೇಶ ಹಬ್ಬವನ್ನು ಆಚರಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ. ಗಣೇಶ ಮೂರ್ತಿ ವಿಸರ್ಜನೆ ಸಂಬಂಧದ ಯಾವುದೇ ಮಾಹಿತಿಗಾಗಿ ಪಾಲಿಕೆ ನಿಯಂತ್ರಣಾ ಕೊಠಡಿ ಸಂಖ್ಯೆ 22660000 ಅಥವಾ 22221188 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಪರಿಸರಕ್ಕೆ ಆದ್ಯತೆ:

ಗಣೇಶಮೂರ್ತಿಗಳನ್ನು ವಿಸರ್ಜಿಸುವ ಕೆರೆ ಮತ್ತು ಪುಷ್ಕರಣಿಗಳಲ್ಲಿ ಸಂಗ್ರಹವಾಗುವ ಹಸಿ ತ್ಯಾಜ್ಯವನ್ನು ಆಟೋ, ಟಿಪ್ಪರ್‍ಹಾಗೂ ಕಾಂಪ್ಯಾಕ್ಟರ್‍ಗಳ ಮೂಲಕ ನೇರವಾಗಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ. ಗಣೇಶ ವಿಸರ್ಜನೆಗೂ ಮುನ್ನ ಮೂರ್ತಿ ಮೇಲಿನ ಪ್ಲ್ಯಾಸ್ಟಿಕ್ ಮತ್ತಿತರ ಪೂಜಾ ಸಾಮಗ್ರಿಗಳನ್ನು ಬಿಬಿಎಂಪಿ ಸಿಬ್ಬಂದಿಗಳೇ ಪರಿಶೀಲಿಸಿ ಬೇರ್ಪಡಿಸಲಿದ್ದಾರೆ. ರಾತ್ರಿ 10.30ರ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಅವಕಾಶ ಇಲ್ಲ. ಕೆರೆಗಳ ಸುತ್ತಮುತ್ತ ಪೊಲೀಸರನ್ನು ನಿಯೋಜಿಸಲಾಗಿದ್ದು, ಅತಿರೇಕ ತೋರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು.

ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂಪೂರ್ಣ ಹೊಣೆಯನ್ನು ಸ್ವಯಂ ಸೇವಕರು ಹಾಗೂ ಸ್ಥಳೀಯ ವಿಸರ್ಜನಾ ಸಮಿತಿಗಳಿಗೆ ವಹಿಸಲಾಗುವುದು. ಮೂರ್ತಿ ವಿಸರ್ಜನೆಗೆ ಬರುವ ಸಾರ್ವಜನಿಕರು ಗಣೇಶ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ವಿಗ್ರಹಗಳನ್ನು ಸ್ವಯಂಸೇವಕರಿಗೆ ನೀಡಬೇಕು. ಯಾರೂ ಕೆರೆ ಅಥವಾ ಪುಷ್ಕರಣಿಗಳಿಗೆ ಇಳಿಯಲು ಅವಕಾಶ ಕಲ್ಪಿಸಿಲ್ಲ. ಗಣೇಶ ವಿಸರ್ಜನೆಗೆ ಆಗಮಿಸುವ ಭಕ್ತಾದಿಗಳು ಕೆರೆ ಸುತ್ತಮುತ್ತಲ ಪ್ರದೇಶಗಳನ್ನು ಶುಚಿಯಾಗಿಡಬೇಕು. ಕೆರೆಗಳ ಸುತ್ತಮುತ್ತ ನಿರ್ಮಿಸಲಾಗಿರುವ ತಾತ್ಕಾಲಿಕ ಶೌಚಾಲಯಗಳನ್ನೇ ಬಳಕೆ ಮಾಡಬೇಕು ಹಾಗೂ ಯಾವುದೇ ವಿಪತ್ತು ಸಂಭವಿಸಲು ಅವಕಾಶ ನೀಡಬಾರದು.

Facebook Comments

Sri Raghav

Admin