ಸಿಸಿಬಿ ಪೊಲೀಸರಿಂದ ರವಿ ಬೆಳಗೆರೆಗೆ ಫುಲ್ ಡ್ರಿಲ್

ಈ ಸುದ್ದಿಯನ್ನು ಶೇರ್ ಮಾಡಿ

Ravi-Belegere--01

ಬೆಂಗಳೂರು, ಡಿ.9- ಪತ್ರಕರ್ತನ ಹತ್ಯೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ಬಂಧಿತರಾಗಿರುವ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿ ಪ್ರಕರಣದ ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ. ಸಿಸಿಬಿ ಡಿಸಿಪಿ ಜಿನೇಂದ್ರ ಕಣಗಾವಿ ನೇತೃತ್ವದಲ್ಲಿ ಎಸಿಪಿ ಸುಬ್ರಮಣಿ ಹಾಗೂ ಇನ್ಸ್‍ಪೆಕ್ಟರ್ ರಾಜು ನೇತೃತ್ವದ ತಂಡ ಪ್ರಶ್ನೆಗಳ ಪಟ್ಟಿ ಸಿದ್ಧಪಡಿಸಿಕೊಂಡು ಬೆಳಗೆರೆ ಅವರಿಂದ ಉತ್ತರ ಪಡೆಯುತ್ತಿದ್ದಾರೆ. ರವಿ ಬೆಳಗೆರೆ ನೀಡುವ ಮಾಹಿತಿ ಹಾಗೂ ತಾವು ಕೇಳಿದ ಪ್ರಶ್ನೆಗಳನ್ನು ತಾಳೆ ಹಾಕಿ ನೋಡುತ್ತಿರುವ ಪೊಲೀಸರು ವಿಚಾರಣೆ ನಂತರ ಬೆಳಗೆರೆ ಆರೋಗ್ಯ ಸ್ಥಿತಿ ಪರಿಶೀಲಿಸಿ ಹಾಯ್ ಬೆಂಗಳೂರು ಪತ್ರಿಕಾ ಕಚೇರಿ ಮತ್ತು ಬೆಳಗೆರೆ ನಿವಾಸಗಳ ಮಹಜರ್ ನಡೆಸಲು ತೀರ್ಮಾನಿಸಿದ್ದಾರೆ.

ರವಿ ಬೆಳಗೆರೆ ಅವರ ನಿವಾಸದಲ್ಲಿ ದೊರೆತಿರುವ ರಿವಾಲ್ವಾರ್‍ಗೆ ಪರವಾನಗಿ ಪಡೆಯಲಾಗಿದೆಯೇ, ಡಬ್ಬಲ್ ಬ್ಯಾರೆಲ್ ಗನ್‍ಗೆ ಪರವಾನಗಿ ಇದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪತ್ರಕರ್ತನ ಹತ್ಯೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದು ಏಕೆ..? ಶಾರ್ಪ್ ಶೂಟರ್ ಶಶಿಧರ್ ಮುಂಡೇವಾಡಗಿಗೂ ಬೆಳಗೆರೆಗೂ ಇರುವ ಸಂಪರ್ಕದ ಬಗ್ಗೆಯೂ ಪೊಲೀಸರು ಅಗತ್ಯ ಮಾಹಿತಿ ಕಲೆ ಹಾಕುತ್ತಿದ್ದಾರೆ.

ರವಿ ಬೆಳಗೆರೆ ಅವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಜಿಂಕೆ ಚರ್ಮ ಹಾಗೂ ಆಮೆ ಚಿಪ್ಪು ದೊರೆತಿರುವ ಬಗ್ಗೆ ಸಿಸಿಬಿ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಜಿಂಕೆ ಚರ್ಮವನ್ನು ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಒಂದು ವೇಳೆ ಅವರು ಅಕ್ರಮವಾಗಿ ಜಿಂಕೆ ಚರ್ಮ ಮತ್ತು ಆಮೆ ಚಿಪ್ಪು ತಂದಿರುವುದು ಸಾಬೀತಾದರೆ ಬೆಳಗೆರೆ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸುವ ಸಾಧ್ಯತೆಗಳಿವೆ.

ಫಾರ್ಮ್‍ಹೌಸ್‍ಗಳ ಮೇಲೂ ದಾಳಿಗೆ ಚಿಂತನೆ:
ರವಿ ಬೆಳಗೆರೆ ವಿಚಾರಣೆ ಪೂರ್ಣಗೊಂಡ ನಂತರ ಚಿಕ್ಕಮಗಳೂರು, ದಾಂಡೇಲಿ ಮತ್ತು ಉತ್ತರ ಕರ್ನಾಟಕದಲ್ಲಿ ಅವರ ಒಡೆತನದಲ್ಲಿರುವ ಫಾರ್ಮ್‍ಹೌಸ್‍ಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲು ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ.

ಇನ್ನಿತರ ಪ್ರಕರಣಗಳ ಬಗ್ಗೆಯೂ ತನಿಖೆ:
ಬೆಳಗೆರೆ ಅವರ ಬಳಿ ಅಕ್ರಮವಾಗಿ ಇಟ್ಟುಕೊಂಡಿದ್ದ ಡಬ್ಬಲ್ ಬ್ಯಾರೆಲ್ ಗನ್ ಹಾಗೂ ಇನ್ನಿತರ ಪ್ರಕರಣಗಳಲ್ಲಿ ಅವರು ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸುವ ನಿಟ್ಟಿನಲ್ಲಿ ಪೊಲೀಸರು ಚಿಂತನೆ ನಡೆಸಿದ್ದಾರೆ.

ಸೋಮವಾರ ನ್ಯಾಯಾಲಯಕ್ಕೆ:
ನ್ಯಾಯಾಲಯದ ಆದೇಶದ ಮೇರೆಗೆ ರವಿ ಬೆಳಗೆರೆ ಅವರನ್ನು ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದು, ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಪಡೆಯಲಾಗುತ್ತಿದೆ. ಅವರು ನೀಡುವ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಗುತ್ತಿದ್ದು, ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುನಿಲ್‍ಕುಮಾರ್ ಈ ಸಂಜೆಗೆ ತಿಳಿಸಿದ್ದಾರೆ.

ನನಗೇನೂ ಗೊತ್ತಿಲ್ಲ:
ರವಿ ಬೆಳಗೆರೆ ಬಂಧನ ಕುರಿತಂತೆ ನನಗೇನೂ ಗೊತ್ತಿಲ್ಲ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ರವಿ ಬೆಳಗೆರೆ ಪತ್ನಿ ಲಲಿತಾ ಅನಾರೋಗ್ಯ

ಬೆಂಗಳೂರು, ಡಿ.9- ಪತ್ರಕರ್ತ ರವಿ ಬೆಳಗೆರೆ ಅವರ ಬಂಧನದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಪತ್ನಿ ಲಲಿತಾ ಬೆಳಗೆರೆ ಅವರು ನಿರಾಕರಿಸಿದ್ದಾರೆ. ಮೊದಲೇ ಜ್ವರದಿಂದ ಬಳಲುತ್ತಿರುವ ಲಲಿತಾ ಅವರು, ರವಿ ಬೆಳಗೆರೆ ಬಂಧನದ ನಂತರ ಇನ್ನಷ್ಟು ಅಸ್ವಸ್ಥರಾದರು ಎಂದು ಹೇಳಲಾಗಿದೆ. ಅತ್ಯಂತ ಸೂಕ್ಷ್ಮ ಸ್ವರೂಪ ಪಡೆದುಕೊಳ್ಳುತ್ತಿರುವ ಈ ಪ್ರಕರಣದ ಬಗ್ಗೆ ಲಲಿತಾ ಅವರ ಹೇಳಿಕೆ ಮಹತ್ವದ್ದಾಗಿದೆ. ಆದರೆ ಅನಾರೋಗ್ಯದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮತ್ತು ಮಾಧ್ಯಮಗಳಿಗೆ ಹೇಳಿಕೆ ನೀಡದೆ ಹಿಂದೆ ಸರಿದಿದ್ದಾರೆ. ಆರೋಗ್ಯ ಸುಧಾರಿಸಿದ ನಂತರ ಮಾತನಾಡುವುದಾಗಿ ಪ್ರತಿಕ್ರಿಯಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin