ಸುಪ್ರೀಂಕೋರ್ಟ್ ಆದೇಶ ಪಾಲನೆ ಸಾಧ್ಯವಿಲ್ಲ : ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--CM-Mysuru-01
ದಾವಣಗೆರೆ, ಮೇ 3- ಸುಪ್ರೀಂಕೋರ್ಟ್ ತೀರ್ಪು ಪಾಲಿಸಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನಾಲ್ಕು ಟಿಎಂಸಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಸದ್ಯಕ್ಕೆ ನನಗೆ ಮಾಹಿತಿ ಇಲ್ಲ. ಆದರೆ, ನಮ್ಮಲ್ಲೇ ನೀರಿಲ್ಲ ನಾವೆಲ್ಲಿಂದ ನೀರು ಕೊಡಲು ಸಾಧ್ಯ ಎಂದು ಹೇಳಿದರು.

ನೀರು ಬಿಡುವ ವಿಚಾರವಾಗಿ ಮತ್ತು ಸುಪ್ರೀಂಕೋರ್ಟ್‍ನ ಆದೇಶದ ಕುರಿತು ವಕೀಲರ ಜತೆ ಚರ್ಚೆ ಮಾಡಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು. ಇನ್ನೊಂದೆಡೆ ಚುನಾವಣಾ ಪ್ರಚಾರದ ನಡುವೆಯೂ ವಿಡಿಯೋ ಮೆಸೇಜ್ ಮೂಲಕ ಹೇಳಿಕೆ ನೀಡಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿರುವ ನೀರಿನ ಕೊರತೆಯ ಬಗ್ಗೆ ನಾಳೆ ಸುಪ್ರೀಂಕೋರ್ಟ್‍ಗೆ ಪ್ರಮಾಣಪತ್ರದ ಮೂಲಕ ಮನವರಿಕೆ ಮಾಡಿಕೊಡುವುದಾಗಿ ಹೇಳಿದ್ದಾರೆ.

ಕಾವೇರಿ ಕಣಿವೆಯ ನಾಲ್ಕು ಜಲಾಶಯಗಳಲ್ಲಿ 9 ಟಿಎಂಸಿ ಮಾತ್ರ ನೀರಿದೆ. ಇದು ನಮ್ಮ ಕುಡಿಯುವ ನೀರು ಮತ್ತು ಬೆಳೆಗಳಿಗೆ ಸಾಕಾಗುವುದಿಲ್ಲ. ಹಾಗಾಗಿ ಸುಪ್ರೀಂಕೋರ್ಟ್‍ನ ಆದೇಶ ಪಾಲಿಸಲು ಸಾಧ್ಯವಿಲ್ಲ. ಒಂದು ವೇಳೆ ಪಾಲಿಸಬೇಕೆಂದರೂ ನೀರಿನ ಕೊರತೆ ಎದುರಾಗಲಿದೆ ಎಂದು ಅವರು ತಿಳಿಸಿದ್ದಾರೆ. ಡಿಸೆಂಬರ್ ವೇಳೆಗೆ ನೀರು ಬಿಡುವ ಅವಧಿ ಮುಗಿದು ಹೋಗಿದ್ದು, ಇನ್ನು ಮಳೆಗಾಲ ಆರಂಭವಾಗುವವರೆಗೂ ನೀರು ಹರಿಸುವ ಸಾಧ್ಯತೆಗಳಿಲ್ಲ. ಹೀಗಾಗಿ ರಾಜ್ಯದಲ್ಲಿರುವ ನೀರಿನ ಕೊರತೆಯ ಬಗ್ಗೆ ನಾಳೆ ಸುಪ್ರೀಂಕೋರ್ಟ್ ಮನವರಿಕೆ ಮಾಡಿಕೊಡಲಾಗುವುದು. ಈಗಾಗಲೇ ಕಾನೂನು ತಜ್ಞರ ಜತೆ ಚರ್ಚೆ ನಡೆಸಿದ್ದೇನೆ. ಸುಪ್ರೀಂಕೋರ್ಟ್ ಕರ್ನಾಟಕದಲ್ಲಿ ನೀರಿನ ಕೊರತೆ ಇದ್ದಾಗಲೂ ತಮಿಳುನಾಡಿಗೆ ನೀರು ಬಿಡಿ ಎಂದು ಆದೇಶ ಯಾವ ಹಿನ್ನೆಲೆಯಲ್ಲಿ ನೀಡಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಕಾನೂನು ತಜ್ಞರ ಜತೆ ಚರ್ಚೆ ನಡೆಸುತ್ತೇನೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Facebook Comments

Sri Raghav

Admin