ಸುಪ್ರೀಂ ಆದೇಶವಿದ್ದರೂ ನಿಲ್ಲದ ಜಲ್ಲಿಕಟ್ಟು : ಲಾಠಿ ಪ್ರಹಾರ, ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Jellikattu-01

ಚೆನ್ನೈ, ಜ.14-ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿ ಪೊಂಗಲ್ ಹಬ್ಬದ ಪ್ರಯುಕ್ತ ಜಲ್ಲಿಕಟ್ಟು (ಹೋರಿ ಪಳಗಿಸುವ ಸ್ಪರ್ಧೆ) ಜನಪ್ರಿಯ ಸಾಹಸ ಕ್ರೀಡೆ ಆಚರಿಸಿದ ಪ್ರಕರಣಗಳು ತಮಿಳುನಾಡಿನ ವಿವಿಧೆಡೆ ವರದಿಯಾಗಿದೆ. ಇದೇ ವೇಳೆ ಉದ್ರಿಕ್ತ ಗುಂಪುಗಳನ್ನು ಚದುರಿಸಲು ಪೊಲೀಸರು ನಡೆಸಿದ ಲಾಠಿ ಪ್ರಹಾರದಲ್ಲಿ ಕೆಲವರು ಗಾಯಗೊಂಡಿದ್ದು, ಅನೇಕರನ್ನು ಬಂಧಿಸಲಾಗಿದೆ.
ಮಧುರೈ ಜಿಲ್ಲೆಯೊಂದರಲ್ಲೇ 30ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕ್ರೀಡೆಗೆ ಅನುಮತಿ ನೀಡದೇ ಇರುವುದರಿಂದ ಕೆಲವೆಡೆ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದೆ.

ಮಧುರೈ ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ನಿನ್ನೆ ಜಲ್ಲಿಕಟ್ಟು ಕ್ರೀಡೆಗಳು ನಡೆದ ವರದಿಗಳ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಲ್ಲಿಕಟ್ಟು ಸಿದ್ಧತೆಯಲ್ಲಿ ತೊಡಗಿದ್ದ ಹಲವು ಆಸಕ್ತರು ಸುಪ್ರೀಂಕೋರ್ಟ್ ಆದೇಶ ಮತ್ತು ಪೊಲೀಸ್ ಹಸ್ತಕ್ಷೇಪದ ಬಗ್ಗೆ ಪ್ರತಿಭಟನೆ ನಡೆಸಿದರು. ಈ ಪ್ರಾಚೀನ ಕ್ರೀಡೆ ನಮ್ಮ ಸಾಂಪ್ರದಾಯಿಕ ಹಕ್ಕು. ಜಲ್ಲಿಕಟ್ಟು ಆಚರಣೆಗೆ ಅವಕಾಶ ನೀಡಬೇಕೆಂದು ಬಿಗಿಪಟ್ಟು ಹಿಡಿದ ಉದ್ರಿಕ್ತ ಗುಂಪು ಪೊಲೀಸರ ಜೊತೆ ವಾಗ್ವಾದಕ್ಕೆ ಇಳಿದರು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಪೊಲೀಸ್ ಬಲಪ್ರಯೋಗದಲ್ಲಿ ಕೆಲವರಿಗೆ ಗಾಯಗಳಾಗಿದ್ದು, ಹಲವು ಯುವಕರು ಮತ್ತು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲೂ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ಜಲ್ಲಿಕಟ್ಟು ಆಚರಿಸಿದ ಬಗ್ಗೆ ವರದಿಗಳಿವೆ. ಚೆನ್ನೈನ ಮರೀನಾ ಬೀಚ್ ಬಳಿ ಗುರವಾರ ನೂರಾರು ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ ಜಲ್ಲಿಕಟ್ಟು ಕ್ರೀಡೆಗೆ ಅವಕಾಶ ನೀಡಬೇಕು. ಈ ಸಂಬಂಧ ಕೂಡಲೇ ಸುಗ್ರೀವಾಜ್ಞೆ ಹೊರಡಿಸಬೇಕೆಂದು ಒತ್ತಾಯಿಸಿದರು. ಮದುರೈನಲ್ಲಿ ಜಲ್ಲಿಕಟ್ಟು ಪರ ನಡೆದ ಪ್ರತಿಭಟನೆ ಸಂದರ್ಭದಲ್ಲೂ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.  ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಚೆನ್ನೈನಲ್ಲಿ ನಿನ್ನೆ ಕೇಂದ್ರ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲಾಯಿತು.  ನಿಷೇಧಿತ ಜಲ್ಲಿಕಟ್ಟು ಕ್ರೀಡೆ ಕುರಿತು ಸಂಕ್ರಾಂತಿ ಹಬ್ಬದ ಒಳಗೆ ತಾನು ಮಧ್ಯಂತರ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಹೇಳುವ ಮೂಲಕ ಪೊಂಗಲ್ ದಿನದಂದು ಈ ಸ್ಪರ್ಧೆ ನಡೆಸುವುದು ಅಕ್ರಮ ಮತ್ತು ಕಾನೂನು ಬಾಹಿರ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin