ಸುಪ್ರೀಂ ಆದೇಶ ಖಂಡಿಸಿ ಮುಸ್ಲಿಂ ಬಾಂಧವರಿಂದ ಮೆರವಣಿಗೆ
ಅರಕಲಗೂಡು, ಸೆ.12- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಅವೈಜ್ಞಾನಿಕ ಕ್ರಮವನ್ನು ಖಂಡಿಸಿ ಮುಸ್ಲಿಂ ಸಮುದಾಯದ ಯುವಕರು ಪಟ್ಟಣದಲ್ಲಿ ಖಾಲಿ ಕೊಡ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಮೈಸೂರು ವಲಯ ಸಂಯೋಜಕ ಜಬೀವುಲ್ಲಾ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಯುವಕರು ಪಟ್ಟಣದ ಜಾಮೀಯ ಮಸೀದಿ ಬಳಿ ಸೇರಿ, ಕಾವೇರಿ ನೀರು ಹರಿಸುತ್ತಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸಿದರು.ನಂತರ ಮುಖ್ಯ ರಸ್ತೆ ಮುಖೇನಾ ಕೈಯಲ್ಲಿ ಖಾಲಿ ಕೊಡಗಳನ್ನು ಹಿಡಿದು ಘೋಷಣೆ ಹಾಗೂ ಖಾಲಿ ಕೊಡಗಳನ್ನು ರಸ್ತೆಯಲ್ಲಿ ಉರುಳಿಸುತ್ತಾ ಸಾಗಿದರು.ಅಂತಿಮವಾಗಿ ಅನಕೃ ವೃತ್ತದಲ್ಲಿ ಸೇರಿ ಮಾನವ ಸರಪಳಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿದರು.
ಮುಖಂಡ ಜಬೀವುಲ್ಲಾ ಮಾತನಾಡಿ, ಕಾವೇರಿ ನ್ಯಾಯಾಧೀಕರಣ ಸ್ಥಾಪನೆಗೊಂಡಾಗಿನಿಂದಲೂ ಕೂಡ ಕರ್ನಾಟಕ ರಾಜ್ಯಕ್ಕೆ ನೀರು ಬಳಸಿಕೊಳ್ಳುವಲ್ಲಿ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ನ್ಯಾಯಾಧೀಕರಣದ ಅಂತಿಮ ತೀರ್ಪು ಕೂಡ ರಾಜ್ಯಕ್ಕೆ ವಿರುದ್ಧ ಹಾಗೂ ತಮಿಳುನಾಡಿಗೆ ಪೂರಕವಾಗಿ ಪ್ರಕಟಗೊಂಡಿದೆ.ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕೂಡ ತಮಿಳುನಾಡು ಸರಕಾರ ನಿಯಮದಂತೆ ನೀರು ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಿ ತನ್ನ ಪಾಲಿನ ನೀರನ್ನು ಹಠಮಾರಿತನದಿಂದ ಪಡೆದುಕೊಳ್ಳುತ್ತಾ ರಾಜ್ಯದ ರೈತರು,ಕುಡಿಯುವ ನೀರು ಹಾಗೂ ಇತರೆ ಯೋಜನೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಬಂದ್ ರಾಜ್ಯದಾದ್ಯಂತ ನಡೆದಿದೆ. ಹೀಗಿದ್ದರೂ ಕೂಡ ಕಳೆದ ಐದುದಿನಗಳಿಂದ 7ಟಿಎಂಸಿನಷ್ಟು ನೀರು ತಮಿಳುನಾಡಿಗೆ ಹರಿದಿದೆ. ಇದರಿಂದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿತಗೊಂಡಿದೆ. ಕೂಡಲೇ ನೀರು ನಿಲ್ಲಿಸಲು ಕೇಂದ್ರ ಸರಕಾರ ಒತ್ತಡ ತರಬೇಕೆಂದು ಅವರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಮುಸ್ಲಿಂ ಸಮುದಾಯದ ಯುವ ಮುಖಂಡರಾದ ವಹೀಬ್, ಇರ್ಫಾನ್, ನಕೀಬ್, ಹಾಸಂ, ನಾಜೀಮ್ ಇತರರು ಪಾಲ್ಗೊಂಡಿದ್ದರು.
► Follow us on – Facebook / Twitter / Google+