ಸುಪ್ರೀಂ ಆದೇಶ ವಿರೋಧಿಸಿ ಸರ್ಕಾರದ ಪ್ರತಿಕೃತಿ ದಹನ
ಕನಕಪುರ, ಸೆ.7- ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರಿಂಕೋರ್ಟ್ ನೀಡಿರುವ ಆದೇಶ ವಿರೋಧಿಸಿ ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಾಜ್ಯ ರೈತ ಸಂಘ, ಕರುನಾಡ ಸೇನೆ ಕಾರ್ಯಕರ್ತ ಮುಖಂಡರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಎಂ.ಜಿ.ರಸ್ತೆಯಲ್ಲಿ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರ ಹಾಗೂ ಜಯಲಲಿತಾ ಪ್ರತಿಕೃತಿಗಳನ್ನು ದಹಿಸಿದರು.ಜಯ ಕರ್ನಾಟಕ ಸಂಘಟನೆ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೋರ್ಟ್ ನೀಡಿರುವ ಆದೇಶ ರಾಜ್ಯಕ್ಕೆ ಮರಣ ಶಾಸನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಂತಹ ಹೋರಾಟವಾದರೂ ಸರಿ ಮೈಸೂರು ಪ್ರಾಂತ್ಯದ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡಬಾರದು. ರಾಜ್ಯದ ಎಲ್ಲಾ ಜಲಾಶಯಗಳು ಬತ್ತಿ ಈ ಭಾಗದ ಜನರಿಗೆ ಕುಡಿಯಲೂ ನೀರಿಲ್ಲದಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿನ ಕಾವೇರಿ ಕೊಳ್ಳದ ಹಾಗೂ ಜಲಾಶಯಗಳ ಬಗ್ಗೆ ಇರುವ ವಾಸ್ತವ ಸ್ಥಿತಿಯನ್ನು ಸುಪ್ರಿಂಕೋರ್ಟ್ಗೆ ಮನವರಿಕೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ರಾಜ್ಯ ರೈತಸಂಘದ ಸಂಪತ್ಕುಮಾರ್, ಬಿಎಸ್ಪಿ ಮುಖಂಡರಾದ ಮಲ್ಲಿಕಾರ್ಜುನ್, ನೀಲಿರಮೇಶ್, ಕರುನಾಡ ಸೇನೆಯ ಭಾಸ್ಕರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ನಾಗರಾಜು, ಜಯಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ರಾಜು, ಕಾರ್ಯಾಧ್ಯಕ್ಷ ಯೋಗೀಶ್, ಉಪಾಧ್ಯಕ್ಷ ತಿಮ್ಮರಾಜು, ಹಿರಿಯ ಮುಖಂಡ ಎ.ಪಿ.ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ವೀರೇಶ್ ಮತ್ತಿತರರು ಭಾಗವಹಿಸಿದ್ದರು.
Follow us on – Facebook / Twitter / Google+