ಸುಪ್ರೀಂ ಕೋರ್ಟ್ ಗೆ ವಾಸ್ತವ ಚಿತ್ರಣ ಮನವರಿಕೆಗೆ ಒಮ್ಮತದ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Cm-1

ಬೆಂ ಗಳೂರು, ಆ.27- ಕಾವೇರಿ ಜಲಾನಯನ ಭಾಗದಲ್ಲಿ ಉಂಟಾಗಿರುವ ಮಳೆಯ ಅಭಾವ ಹಾಗೂ ನೀರಿನ ಕೊರತೆಯ ವಾಸ್ತವ ಚಿತ್ರಣವನ್ನು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.  ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಪರ ವಾದ ಮಂಡಿಸುವ ವಕೀಲರಿಗೂ ನಮ್ಮ ತೀರ್ಮಾನದ ವಿಚಾರವನ್ನು ಗಮನಕ್ಕೆ ತಂದು ಸುಪ್ರೀಂಕೋರ್ಟ್ನಲ್ಲಿ ವಾಸ್ತವ ಸಂಗತಿ ಮನವರಿಕೆ ಮಾಡಲಾಗುವುದು.  ಈ ಬಗ್ಗೆ ಅವರು ವಾದ ಮಂಡಿಸಲಿದ್ದಾರೆ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ತಮಿಳುನಾಡಿಗೆ 50 ಟಿಎಂಸಿ ನೀರು ಬಿಡಲು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಇಂದು ಸಂಸದರು, ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಹಾಗೂ ರಾಜ್ಯ ಸಚಿವರು, ವಿಧಾನ ಸಭೆಯ ವಿರೋಧ ಪಕ್ಷದ ನಾಯಕರು ಒಳಗೊಂಡ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಹಾಜರಿದ್ದ ಎಲ್ಲರೂ ಒಗ್ಗಟ್ಟಿನಿಂದ ವಾಸ್ತವ ಸ್ಥಿತಿಯನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಡಲು ಅಭಿಪ್ರಾಯ ವ್ಯಕ್ತಪಡಿಸಿದರು. ಸುಪ್ರೀಂಕೋರ್ಟ್ನಲ್ಲಿ ತಮಿಳುನಾಡು ಸಲ್ಲಿಸಿರುವ ಅರ್ಜಿ ಹಾಗೂ ರಾಜ್ಯದಲ್ಲಿ ಉಂಟಾಗಿರುವ ನೀರಿನ ಪರಿಸ್ಥಿತಿ ಬಗ್ಗೆ ಸಮಗ್ರ ಚರ್ಚೆ ನಡೆಸಿದ್ದೇವೆ. ತಮಿಳುನಾಡಿಗೆ ನೀರು ಬಿಡುವಂತೆ ರಾಜ್ಯದ ಪರ ವಕೀಲ ನಾರಿಮನ್ ಅವರು ಅನ್ಯಾಯ ಮಾಡಿದ್ದಾರೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಊಹಾಪೋಹದಿಂದ ಕೂಡಿದೆ ಎಂದು ಅವರು ತಳ್ಳಿ ಹಾಕಿದರು. ವಾಸ್ತವಿಕ ಸ್ಥಿತಿ ಆಧರಿಸಿ ತಮ್ಮ ನಿಲುವನ್ನು ಸುಪ್ರೀಂಕೋರ್ಟ್ನಲ್ಲಿ ಮಂಡಿಸಬೇಕೆಂಬ ಅಭಿಪ್ರಾಯವನ್ನು ಎಲ್ಲರೂ ನೀಡಿದ್ದಾರೆ. ಕಾವೇರಿ, ಕೃಷ್ಣಾ ಸೇರಿದಂತೆ ಯಾವುದೇ ನೆಲ, ಜಲ, ಭಾಷೆ ವಿಚಾರದಲ್ಲಿ ರಾಜ್ಯದಲ್ಲಿ ಒಗ್ಗಟ್ಟಿದೆ. ಈಗಲೂ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ತೀವ್ರ ಸಂಕಷ್ಟವಿದೆ. ಕಾವೇರಿ ಕೊಳ್ಳದ ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹಾರಂಗಿ, ಹೇಮಾವತಿ ಜಲಾಶಯಗಳ ಒಟ್ಟು ಸಾಮರ್ಥ್ಯ 114 ಅಡಿ ಟಿಎಂಸಿ ಆದರೆ ಬಳಕೆ ಬರುವುದು 104 ಟಿಎಂಸಿ ಮಾತ್ರ. ಅದು ಕೂಡ ಭರ್ತಿಯಾದಾಗ ದೊರೆಯುವ ಪ್ರಮಾಣ ಇದಾಗಿದೆ ಎಂದರು.

CM2

ಆ.24ಕ್ಕೆ 195.12 ಟಿಎಂಸಿ ಅಡಿ 4 ಜಲಾಶಯಗಳು ಒಳಹರಿವು ಬರಬೇಕಿತ್ತು. 108 ಟಿಎಂಸಿ ನೀರು ಮಾತ್ರ ಬಂದಿದೆ. ಶೇ.45ರಷ್ಟು ಕೊರತೆ ಇದೆ. ಶೇ.55ರಷ್ಟು ಮಾತ್ರ ಜಲಾಶಯಗಳಲ್ಲಿ ನೀರಿದೆ. ಈಗ ನಮ್ಮ ಬಳಿ 51 ಅಡಿ ಟಿಎಂಸಿ ಅಡಿ ಮಾತ್ರ ಇದೆ. ಕಾವೇರಿ ಜಲಾನಯನ ಭಾಗದ ನಗರ ಹಾಗೂ ಪಟ್ಟಣಗಳಿಗೆ 40 ಅಡಿ ಟಿಎಂಸಿ ಬೇಕು. ತಮಿಳುನಾಡು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿ ಜಲಾಶಯದಲ್ಲಿ ನೀರಿನ ಮಟ್ಟ ಆಧಾರದ ಬದಲಿಗೆ ರಾಜ್ಯದಲ್ಲಿ ಬಿದ್ದಿರುವ ಒಟ್ಟಾರೆ ಮಳೆ ಆಧರಿಸಿ ನೀರು ಬಿಡುವಂತೆ ಆದೇಶಿಸಬೇಕು ಎಂದಿದೆ.  ಸಂಕಷ್ಟ ಪರಿಸ್ಥಿತಿಯನ್ನು ಸುಪ್ರೀಂಕೋರ್ಟ್ ಗಮನಕ್ಕೆ ತಂದಿಲ್ಲ. ಸಾಮಾನ್ಯ ವರ್ಷದಲ್ಲಿ ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಬಿಡಬೇಕು ಎಂದು ನಿಗದಿಪಡಿಸಿರುವಂತೆ 50 ಟಿಎಂಸಿ ಅಡಿ ನೀರು ಕೇಳಿದೆ. ಅಷ್ಟು ಪ್ರಮಾಣದ ನೀರು ಕೊಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಅಲ್ಲದೆ ಬೆಳೆದು ನಿಂತಿರುವ ಕಬ್ಬು ಮತ್ತಿತರ ಬೆಳೆಗಳಿಗೂ ನೀರು ಅಗತ್ಯವಾಗಿದ್ದು, ಈ ಎಲ್ಲಾ ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂಕೋರ್ಟ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಸ್ಪಷ್ಟಪಡಿಸಿದರು.  ಕುಮಾರಸ್ವಾಮಿ ಮಾತನಾಡಿ, ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ವಾಸ್ತವಾಂಶಗಳನ್ನು ಸಮರ್ಥವಾಗಿ ಮಂಡಿಸುವ ಮೂಲಕ ರಾಜ್ಯದ ಹಿತ ಕಾಪಾಡಬೇಕು. ಇದರಲ್ಲಿ ಅಪಸ್ವರ ಎತ್ತುವುದು ಸರಿಯಲ್ಲ. ಎಲ್ಲರ ಒಮ್ಮತದ ನಿರ್ಧಾರಕ್ಕೆ ತಮ್ಮ ಬೆಂಬಲವಿದೆ ಎಂದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin