ಸುವರ್ಣಸೌಧದಲ್ಲಿ ಪಕ್ಷಾಂತರ ಗುಸುಗುಸು, ಶಾಸಕರ ಗುಪ್ತ್ ಗುಪ್ತ್ ಮಾತುಕತೆ..!

ಈ ಸುದ್ದಿಯನ್ನು ಶೇರ್ ಮಾಡಿ

Suvarna-Soudha--01

– ವೈ.ಎಸ್.ರವೀಂದ್ರ
ಬೆಳಗಾವಿ, ನ.14- ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಪ್ರಚಲಿತ ಸಮಸ್ಯೆಗಳಿಗಿಂತಲೂ ಎಲ್ಲ ಪಕ್ಷಗಳಲ್ಲೂ ಪಕ್ಷಾಂತರ ಪರ್ವದ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಯಾವ ಪಕ್ಷದಿಂದ ಯಾರು, ಎತ್ತ ಕಡೆ ಬೇಲಿ ಹಾರಲಿದ್ದಾರೆ ಎಂಬುದರ ಬಗ್ಗೆ ಉಭಯ ಸದನಗಳಲ್ಲಿ ಗುಸು ಗುಸು ಮಾತುಗಳು ಹರಿದಾಡುತ್ತಿವೆ. ವಿಧಾನಸಭೆ, ವಿಧಾನ ಪರಿಷತ್, ಲಾಂಜ್ ಸೇರಿದಂತೆ ಮತ್ತಿತರೆಡೆ ಗುಂಪು ಗುಂಪಾಗಿ ಶಾಸಕರು ಗುಪ್ತವಾಗಿ ಮಾತನಾಡುತ್ತಿರುವುದು ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಎಂಬಂತಿದೆ.

ಸದನಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗುತ್ತಾರೆ. ಆದರೆ, ಇತ್ತ ಹೊರಗಡೆ ಸೌಹಾರ್ದವಾಗಿ ಒಬ್ಬರ ಹೆಗಲ ಮೇಲೆ ಮತ್ತೊಬ್ಬರು ಕೈ ಹಾಕಿ ಉಭಯ ಕುಶಲೋಪರಿ ನಡೆಸುವುದು ಕಂಡುಬರುತ್ತಿದೆ. ನಿನ್ನೆಯಿಂದ ಆರಂಭವಾಗಿರುವ ಅಧಿವೇಶನದಲ್ಲಿ ಕಾಂಗ್ರೆಸ್‍ನಿಂದ ಎಷ್ಟು ಮಂದಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ, ಬಿಜೆಪಿಯಿಂದ ಕಾಂಗ್ರೆಸ್‍ಗೆ ಯಾರ್ಯಾರು ಹೋಗಲಿದ್ದಾರೆ, ಈ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಪ್ರಾದೇಶಿಕ ಪಕ್ಷವಾದ ಜೆಡಿಎಸ್‍ನತ್ತ ಮತ್ಯಾರು ಮುಖ ಮಾಡಲಿದ್ದಾರೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆ ನಡೆಯುತ್ತಿವೆ.

ಕಾದು ನೋಡುವ ತಂತ್ರ: ಆಡಳಿತ ಪಕ್ಷವಾದ ಕಾಂಗ್ರೆಸ್ ಹಾಗೂ ಬಿಜೆಪಿ ಮತ್ತು ಜೆಡಿಎಸ್‍ನ ಹಲವು ಮಂದಿ ಶಾಸಕರು ಬೇರೆ ಪಕ್ಷಗಳತ್ತ ಮುಖ ಮಾಡಿದ್ದರೂ ತಾಂತ್ರಿಕ ಕಾರಣಗಳಿಂದ ಕೆಲವರು ಬೇರೆ ಪಕ್ಷ ಸೇರಲು ಹಿಂದೇಟು ಹಾಕುತ್ತಿದ್ದಾರೆ.  ಇನ್ನೂ ಕೆಲವರು ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಗುಜರಾತ್‍ನಲ್ಲಿ ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಕಾಂಗ್ರೆಸ್ ಅಧಿಕಾರ ಹಿಡಿದರೆ ಬಿಜೆಪಿಯ ಬಹಳಷ್ಟು ಮಂದಿ ಕೈನತ್ತ ಮುಖ ಮಾಡುವುದು ಬಹುತೇಕ ಖಚಿತ.

ಒಂದು ವೇಳೆ ಚುನಾವಣಾ ಪೂರ್ವ ಸಮೀಕ್ಷೆಗಳಂತೆ ಬಿಜೆಪಿ ಗುಜರಾತ್‍ನಲ್ಲಿ ಮತ್ತೆ ಕಮಲ ಅರಳಿಸಿದರೆ ಕಾಂಗ್ರೆಸ್‍ನ ಕೆಲವು ಶಾಸಕರು, ಸಚಿವರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ ಆಡಳಿತ ವಿರೋಧದ ನಡುವೆಯೂ ಗುಜರಾತ್‍ನಲ್ಲಿ ಬಿಜೆಪಿ ಗೆದ್ದಿದೆ ಎಂಬುದು ಸಾಬೀತಾಗುತ್ತದೆ. ರಾಜ್ಯದಲ್ಲೂ ಮೋದಿ ಅಲೆಯ ಮುಂದೆ ಸೋತು ಬಿಡುವ ಭೀತಿಯಿಂದಾಗಿ ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.  ಒಟ್ಟಿನಲ್ಲಿ ಗುಜರಾತ್ ಫಲಿತಾಂಶದ ನಂತರ ಪಕ್ಷಾಂತರ ಪರ್ವಕ್ಕೆ ಸ್ಪಷ್ಟ ಚಿತ್ರಣ ಸಿಗಲಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸಂಭವವಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin