ಸೆಕ್ಯೂರಿಟಿಗಾರ್ಡ್‍ಗಳ ಮೇಲೆ ಹಲ್ಲೆಮಾಡಿ ಎಟಿಎಂಗಳನ್ನು ದೋಚುತ್ತಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrested-01

ತುಮಕೂರು,ಏ.17- ಎಟಿಎಂಗಳನ್ನೇ ಟಾರ್ಗೆಟ್ ಮಾಡಿಕೊಂಡು ಸೆಕ್ಯೂರಿಟಿಗಾರ್ಡ್‍ಗಳ ಮೇಲೆ ಹಲ್ಲೆ ನಡೆಸಿ ಹಣ ದೋಚುತ್ತಿದ್ದ ನಾಲ್ವರು ಖತರ್ನಾಕ್ ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಾಬಸ್‍ಪೇಟೆಯ ಮೋಹನ್, ಬೆಂಗಳೂರಿನ ಸೋಲೂರು ನಿವಾಸಿ ಪ್ರವೀಣ, ಹಾಸನ ಸ್ವಾಮಿ, ಹಿರೀಸಾವೆಯ ವೈಭವ್ ಬಂಧಿತ ದರೋಡೆಕೋರರಾಗಿದ್ದು, ಇವರಿಂದ 15 ಲಕ್ಷ ರೂ. ಹಣ, ಇಂಡಿಕಾ ಕಾರು, ಮಾರುತಿ ಓಮ್ನಿ ವಾಹನ ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಮಾರ್ಚ್ 24ರ ಮುಂಜಾನೆ ಗುಬ್ಬಿಗೇಟ್‍ನ ರಿಂಗ್‍ರಸ್ತೆಯಲ್ಲಿರುವ ಕರ್ಣಾಟಕ ಬ್ಯಾಂಕ್‍ಗೆ ಸೇರಿದ ಎಟಿಎಂ ಒಡೆದು 22.5ಲಕ್ಷ ರೂ. ದೋಚಲಾಗಿತ್ತು. ಈ ವೇಳೆ ಹಣ ತುಂಬುವರು ಹಾಗೂ ಮ್ಯಾನೇಜರ್ ಮೇಲೆ ಅನುಮಾನ ವ್ಯಕ್ತವಾಗಿ ತೀವ್ರ ವಿಚಾರಣೆಯೂ ನಡೆದಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಷಾಪಂಥ್ ಅವರು ಡಿಸಿಬಿಯ ಇನ್ಸ್‍ಪೆಕ್ಟ್ ಗೌತಮ್, ತಿಲಕ್‍ಪಾರ್ಕ್ ವೃತ್ತ ನಿರೀಕ್ಷ ರಾಘವೇಂದ್ರ, ನಗರ ವ್ಯಾಪ್ತಿಯ ವೃತ್ತನಿರೀಕ್ಷಕ ಗಂಗಲಿಂಗಯ್ಯ, ಕುಣಿಗಲ್ ವೃತ್ತ ನಿರೀಕ್ಷ ಬಾಳೇಗೌಡ ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.ಈ ತಂಡ ರಾಜ್ಯಾದ್ಯಂತ ತೀವ್ರ ಕಾರ್ಯಾಚರಣೆ ನಡೆಸುತ್ತಿತ್ತು. ಈ ನಡುವೆ ತುರುವೇಕೆರೆ ಬಳಿ ಕಾರನ್ನು ನಿಲ್ಲಿಸಿಕೊಂಡು ನಾಲ್ವರು ಅನುಮಾನಸ್ಪದವಾಗಿ ತಿರುಗಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಇವರನ್ನು ವಿಚಾರಿಸಿದಾಗ ಅನುಚಿತವಾಗಿ ವರ್ತಿಸಿದ್ದಾರೆ.ಈ ಸಂದರ್ಭದಲ್ಲಿ ಕಾನ್‍ಸ್ಟೇಬಲ್ ಠಾಣೆಗೆ ತೆರಳಿ ಇನ್ನು ಹಲವು ಪೊಲೀಸರನ್ನು ಕರೆತಂದು ಇವರನ್ನು ಸುತ್ತುವರೆದು ವಶಕ್ಕೆ ಪಡೆದು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ ಮಾರಕಾಸ್ತ್ರಗಳು, ಮಿಷನರಿ ಯಂತ್ರ ಕತ್ತರಿಸುವ ಕಟ್ಟರ್‍ಗಳು, ವಿವಿಧ ಆಯುಧಗಳು ಇರುವುದು ಕಂಡು ಇವರನ್ನು ತುರುವೇಕೆರೆ ಠಾಣೆಗೆ ಕರೆದೊಯ್ದಿದ್ದಾರೆ.ಇನ್ಸ್‍ಪೆಕ್ಟರ್ ರಾಘವೇಂದ್ರ ಅವರು ಈ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಮಾ.24ರಂದು ಬೆಳಗ್ಗಿನ ಜಾವ ನಾವು ತುಮಕೂರಿನ ಗುಬ್ಬಿಗೇಟ್ ಸಮೀಪದ ರಿಂಗ್ ರಸ್ತೆ ಬಳಿ ಇರುವ ಎಟಿಎಂ ಮಿಷನನ್ನು ಒಡೆಯುತ್ತಿದ್ದಾಗ ಸೀಕ್ರೇಟ್ ಕೋಡ್ ಇಲ್ಲದಿದ್ದಕಾರಣ ಸುಲಭವಾಗಿ ತೆರೆದುಕೊಂಡಿತು. ಆ ವೇಳೆ ಅದರಲ್ಲಿದ್ದ 22 ಲಕ್ಷ ಹಣ ತೆಗೆದುಕೊಂಡು ಹೋಗಿದ್ದಾಗಿ ಬಾಯ್ಬಿಟ್ಟಿದ್ದಾರೆ.

ನಾವು ಮಾಡಿಕೊಂಡಿದ್ದ ಸಾಲ ತೀರಿಸಲು ಹಾಗೂ ಬಡತನ ನೀಗಿಸಲು ಎಟಿಎಂ ದರೋಡೆಗೆ ಇಳಿದಿದ್ದಾಗಿ ಒಪ್ಪಿಕೊಂಡರಲ್ಲದೆ, ತುರುವೇಕೆರೆ ತಾಲ್ಲೂಕಿನ ಹೂಡಿಗೆರೆ, ಎಲೆರಾಂಪುರ, ತುಮಕೂರು ನಗರದ ಹನುಮಂತಪುರದಲ್ಲಿ ಎಟಿಎಂ ದರೋಡೆಗೆ ವಿಫಲಯತ್ನ ನಡೆಸಿದ್ದಾಗಿ ತಿಳಿಸಿದ್ದಾರೆ.ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್‍ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್, ಡಿವೈಎಸ್‍ಪಿ ನಾಗರಾಜ್, ಕುಣಿಗಲ್ ಡಿವೈಎಸ್‍ಪಿ ಅವರ ಮಾರ್ಗದರ್ಶನದಲ್ಲಿ ತನಿಖೆ ಮುಂದುವರೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin