ಸೆಲ್ಫೀ ಹುಚ್ಚಾಟಕ್ಕೆ ಪ್ರಾಣ ಕಳೆದುಕೊಂಡ ಮೂವರು ಯುವಕರು..!

ಈ ಸುದ್ದಿಯನ್ನು ಶೇರ್ ಮಾಡಿ

Selfie--02

ಬೆಂಗಳೂರು, ಅ.3- ಹಳಿ ಮೇಲಿನ ಸೆಲ್ಫೀ ಕ್ರೇಜಿಗೆ ನ್ಯಾಷನಲ್ ಕಾಲೇಜಿನ  ಮೂವರು ಅಮಾಯಕ ವಿದ್ಯಾರ್ಥಿಗಳು ಪ್ರಾಣ ಕಳೆದು ಕೊಂಡಿದ್ದಾರೆ. ಹೆಜ್ಜಾಲ-ಬಿಡದಿ ನಡುವಿನ ಮಂಚನಾಯಕನ ಹಳ್ಳಿ ಸೇತುವೆ ಸಮೀಪ ಹಳಿ ಮೇಲೆ ಸೆಲ್ಫೀ ತೆಗೆದುಕೊಳ್ಳುತ್ತಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲು ಹರಿದ ಪರಿಣಾಮ ಎಲ್ಲರ ದೇಹಗಳು ಛಿದ್ರಛಿದ್ರವಾಗಿವೆ.

ಸೆಲ್ಫೀ ಕ್ರೇಜಿಗೆ ಬಲಿಯಾದ ವಿದ್ಯಾರ್ಥಿಗಳನ್ನು ಕೋರಮಂಗಲ ಅಂಬೇಡ್ಕರ್ ನಗರದ ನಿವಾಸಿ ಪ್ರಭು ಆನಂದ್ ಪಿ.(18), ಹುಳಿಮಾವಿನ ರೋಹಿತ್.ಜೆ (16) ಹಾಗೂ ಬನಶಂಕರಿ 2ನೆ ಹಂತದ ನಿವಾಸಿ ಪ್ರತೀಕ್ ರಾಯ್ಕರ್(20) ಎಂದು ಗುರುತಿಸಲಾಗಿದೆ. ಈ ನತದೃಷ್ಟ ವಿದ್ಯಾರ್ಥಿಗಳು ಪ್ರತಿಷ್ಠಿತ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ಇಂದು ವಂಡರ್‍ಲಾ ಹೋಗಿ ಬರುವುದಾಗಿ ಮನೆಯವರಿಗೆ ತಿಳಿಸಿ ಮೂವರು ಎರಡು ಬೈಕ್‍ಗಳಲ್ಲಿ ತೆರಳಿದ್ದರು.

ವಂಡರ್ ಲಾ ಗೇಟ್  ಬಳಿ ಇಂದು ಬೆಳಗ್ಗೆ  ಮಂಚನಾಯಕನಹಳ್ಳಿ ಸೇತುವೆ ಸಮೀಪ ಎರಡು ಹಳಿಗಳು ಹಾದುಹೋಗಿದ್ದು, ಒಂದು ಹಳಿ ಮೇಲೆ ನಿಂತು ಸೆಲ್ಫೀ ತೆಗೆದುಕೊಳ್ಳುತ್ತಿದ್ದಾಗ ಯಮಕಿಂಕರನಂತೆ ಧಾವಿಸಿದ ರೈಲು ಮೂವರ ದೇಹಗಳ ಮೇಲೆ ಹಾದು ಹೋಗಿದೆ. ರೈಲು ಹರಿದ ರಭಸಕ್ಕೆ ಮೂವರ ದೇಹಗಳು ಛಿದ್ರಛಿದ್ರಗೊಂಡಿವೆ.  ಘಟನಾ ಸ್ಥಳಕ್ಕೆ ಧಾವಿಸಿದ ಸಿಟಿ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರ್.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಇಡಲಾಗಿದೆ. ಇತ್ತೀಚೆಗೆ ಕನಕಪುರ ಸಮೀಪ ಸೆಲ್ಫೀ ಹುಚ್ಚಿಗೆ ನೀರಿಗೆ ಬಿದ್ದ ವಿದ್ಯಾರ್ಥಿಯೊಬ್ಬ ಪ್ರಾಣ ಕಳೆದುಕೊಂಡಿದ್ದ. ಮಂಡ್ಯದ ಹುಲಿವಾನ ಸಮೀಪ ಸೆಲ್ಫೀ ಕ್ರೇಜಿಗಾಗಿ ಮೂವರು ವೈದ್ಯಕೀಯ ವಿದ್ಯಾರ್ಥಿಗಳು ಚಾನೆಲ್‍ಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದರು. ಅದೇ ರೀತಿ ಚಾರ್ಮುಡಿಘಾಟ್‍ನ ಕಂದಕದಲ್ಲೂ ಇಬ್ಬರು ಬಿದ್ದು ಸಾವನ್ನಪ್ಪಿದ್ದರೆ, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಸಮುದ್ರ ಸೆಲ್ಫೀ ಕ್ರೇಜಿಗೆ ಬಿದ್ದು ನೀರು ಪಾಲಾಗಿದ್ದಳು.

ಇನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆ ಜೊತೆ ಸೆಲ್ಫೀ ತೆಗೆದುಕೊಳ್ಳಲು ಮುಂದಾದ ವ್ಯಕ್ತಿಯೊಬ್ಬ ಆನೆ ದಾಳಿಗೆ ಅಸುನೀಗಿದ್ದ. ಈ ಸೆಲ್ಫೀ ಹುಚ್ಚಿಗೆ ಅದೆಷ್ಟೋ ಅಮಾಯಕ ಜೀವಗಳು ಬಲಿಯಾಗಿವೆ. ಇನ್ನು ಮುಂದಾದರೂ ಯುವ ಸಮುದಾಯ ಪ್ರಾಣಕಾರಕÀ ಸೆಲ್ಫೀ ಕ್ರೇಜಿನಿಂದ ಹೊರಬರುವುದು ಕ್ಷೇಮ.

Facebook Comments

Sri Raghav

Admin