ಸೆ.10ಕ್ಕೆ ಪದ್ಮಾವತಿ ಅವರ ಅವಧಿ ಮುಕ್ತಾಯ, ಯಾರಿಗೆ ಬಿಬಿಎಂಪಿ ಮೇಯರ್ ಪಟ್ಟ…?

ಈ ಸುದ್ದಿಯನ್ನು ಶೇರ್ ಮಾಡಿ

BBMP-01

– ರಮೇಶ್‍ಪಾಳ್ಯ
ಬೆಂಗಳೂರು, ಜು.12-ಮೇಯರ್ ಜಿ.ಪದ್ಮಾವತಿ ಅವರ ಅವಧಿ ಸೆಪ್ಟೆಂಬರ್ 10ಕ್ಕೆ ಕೊನೆಗೊಳ್ಳಲಿದ್ದು, ಅವರ ಉತ್ತರಾಧಿಕಾರಿ ಆಯ್ಕೆ ಪ್ರಕ್ರಿಯೆ ಚುರುಕುಗೊಂಡಿದ್ದು, ಮುಂದಿನ ಮಹಾಪೌರರು ಯಾರಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಮುಂದಿನ ಪ್ರಥಮ ಪ್ರಜೆ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಆ ಜನಾಂಗದ ಕಾಂಗ್ರೆಸ್ ಸದಸ್ಯರು ಈಗಾಗಲೇ ಮೇಯರ್‍ಗಾದಿಗೆ ಲಾಬಿ ಆರಂಭಿಸಿದ್ದಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‍ನಲ್ಲಿ ಥಣಿಸಂದ್ರ ವಾರ್ಡ್‍ನ ಕೆ.ಎಂ.ಮಮತಾ, ಲಕ್ಷ್ಮಿದೇವಿನಗರದ ವೇಲುನಾಯ್ಕರ್, ಬಸವನಪುರದ ಬಿ.ಎನ್.ಜಯಪ್ರಕಾಶ್, ಹೂಡಿಯ ಹರಿಪ್ರಸಾದ್, ಎ.ನಾರಾಯಣಪುರದ ವಿ.ಸುರೇಶ್, ಕಾಡುಗೋಡಿಯ ಎಸ್.ಮುನಿಸ್ವಾಮಿ, ಎಚ್‍ಎಎಲ್‍ನ ಎನ್.ಮಂಜುನಾಥ್, ನೀಲಸಂದ್ರದ ಜಿ.ಬಾಲಕೃಷ್ಣನ್, ಆಡುಗೋಡಿಯ ಮಂಜುಳಾ, ಈಜಿಪುರದ ರಾಮಚಂದ್ರ, ಬೇಗೂರಿನ ಎಂ.ಆಂಜನಪ್ಪ, ಡಿ.ಜೆ.ಹಳ್ಳಿಯ ಸಂಪತ್‍ರಾಜ್, ಸುಭಾಷ್‍ನಗರದ ಎಲ್.ಗೋವಿಂದರಾಜು ಪರಿಶಿಷ್ಟ ಜಾತಿಯ ಪ್ರತಿನಿಧಿಗಳಾಗಿದ್ದಾರೆ.

ಡಿ.ಜೆ.ಹಳ್ಳಿಯಿಂದ ಸತತವಾಗಿ ಎರಡು ಬಾರಿ ಆರಿಸಿ ಬಂದಿರುವ ಬಿಬಿಎಂಪಿ ಸದಸ್ಯ ಆರ್.ಸಂಪತ್‍ರಾಜು, ಎಲ್.ಗೋವಿಂದರಾಜು ಹೊರತುಪಡಿಸಿದರೆ ಉಳಿದವರು ಮೊದಲ ಬಾರಿ ಸದಸ್ಯರಾಗಿ ಆಯ್ಕೆಯಾಗಿರುವುದರಿಂದ ಇವರಿಬ್ಬರಲ್ಲಿ ಒಬ್ಬರಿಗೆ ಮೇಯರ್ ಸ್ಥಾನ ಸಿಗುವ ಸಾಧ್ಯತೆಗಳಿವೆ.   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪುಲಕೇಶಿನಗರದ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣರಾದರು ಎಂಬ ಅಪವಾದ ಹೊರತುಪಡಿಸಿದರೆ ಸಂಪತ್‍ರಾಜ್ ಅವರಿಗೆ ಕಾಂಗ್ರೆಸ್ ಹೈಕಮಾಂಡ್‍ನ ಬೆಂಬಲವಿದೆ.   ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಅವರ ಕೃಪಾಕಟಾಕ್ಷವೂ ಇದೆ. ಆದರೆ ಈಗಾಗಲೇ ಡಿಕೆಶಿ ಬೆಂಬಲಿಗರಾಗಿದ್ದ ಪದ್ಮಾವತಿ ಅವರಿಗೆ ಮೇಯರ್ ಪಟ್ಟ ದೊರಕಿರುವುದರಿಂದ ಮತ್ತೆ ಡಿಕೆಶಿ ಬೆಂಬಲಿತ ಅಭ್ಯರ್ಥಿಗೆ ಹೈಕಮಾಂಡ್ ಮೇಯರ್ ಸ್ಥಾನ ಬಿಟ್ಟುಕೊಡುವುದೇ ಎಂಬ ಯಕ್ಷ ಪ್ರಶ್ನೆ ಎದುರಾಗಿದೆ.

ಸಚಿವ ಸ್ಥಾನ ತೊರೆದ ನಂತರ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಉತ್ತಮ ಕಾರ್ಯನಿರ್ವಹಿಸುತ್ತಿರುವ ದಿನೇಶ್‍ಗುಂಡೂರಾವ್ ಅವರು ಮುಂದಿನ ಮೇಯರ್ ಸ್ಥಾನ ನನ್ನ ಕ್ಷೇತ್ರಕ್ಕೇ ಬಿಟ್ಟುಕೊಡಬೇಕು ಎಂದು ಪಟ್ಟು ಹಿಡಿದರೆ, ಸುಭಾಷ್‍ನಗರ ವಾರ್ಡ್‍ನ ಗೋವಿಂದರಾಜು ಅವರಿಗೆ ಅದೃಷ್ಟ ಕುಲಾಯಿಸುವ ಸಾಧ್ಯತೆ ಇದೆ. ಆದರೆ ಗೋವಿಂದರಾಜು ಅವರು ಮೊದಲ ಬಾರಿ ಜೆಡಿಎಸ್ ಸದಸ್ಯರಾಗಿ ಆಯ್ಕೆಯಾಗಿದ್ದು, 2010ರ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲನ್ನನುಭವಿಸಿದ್ದರು. ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಒಂದು ಬಾರಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಅವರಿಗೆ ಮುಳುವಾದರೆ ಯಾವುದೇ ಅಚ್ಚರಿ ಪಡುವಂತಿಲ್ಲ. 2010ರ ಚುನಾವಣೆಯಲ್ಲಿ ಸುಭಾಷ್‍ನಗರ ವಾರ್ಡ್‍ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರಿಸಿ ಬಂದಿದ್ದ ಟಿ.ಮಲ್ಲೇಶ್ ಅವರು, ದಿನೇಶ್‍ಗುಂಡೂರಾವ್ ಅವರೊಂದಿಗಿನ ವೈಮನಸ್ಯದಿಂದ ಕಳೆದ ಬಾರಿ ಕಾಂಗ್ರೆಸ್ ತೊರೆದು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನನುಭವಿಸಿದ್ದರು.   ಮಲ್ಲೇಶ್ ಅವರು ಪಕ್ಷ ತೊರೆಯದೆ ಮತ್ತೆ ಕಾಂಗ್ರೆಸ್‍ನಿಂದ ಗೆಲುವು ಸಾಧಿಸಿದ್ದರೆ ಅವರಿಗೆ ನಿರಾಯಾಸವಾಗಿ ಮೇಯರ್ ಪಟ್ಟ ಹುಡುಕಿಕೊಂಡು ಬರುತ್ತಿತ್ತು. ಆದರೆ ಅವರ ತಪ್ಪು ನಿರ್ಧಾರವೇ ಅವರಿಗೆ ಮಹಾಪೌರರ ಸ್ಥಾನ ಕೈತಪ್ಪಿದೆ.

ಕೇವಲ 76 ಸದಸ್ಯ ಬಲ ಹೊಂದಿರುವ ಕಾಂಗ್ರೆಸ್‍ಗೆ ಜೆಡಿಎಸ್ ಮತ್ತು ಪಕ್ಷೇತರರು ಬೆಂಬಲ ನೀಡಿದ ಕಾರಣ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಆಡಳಿತವಿದೆ. ಬೆಂಬಲ ನೀಡಿದ ಎರಡೇ ವರ್ಷಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಬಿರುಕು ಮೂಡಿರುವುದು ಮುಂದಿನ ಮೇಯರ್ ಆಯ್ಕೆ ಸಂದರ್ಭದಲ್ಲಿ ತೊಡರುಗಾಲಾಗುವ ಸಾಧ್ಯತೆಗಳಿವೆ.

ಬಿಜೆಪಿಗೆ ದಕ್ಕುವುದೇ ಮೇಯರ್ ಪಟ್ಟ..?

ಕಾಂಗ್ರೆಸ್ ಪಕ್ಷ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಆರೋಪಿಸುತ್ತಲೇ ಬಂದಿರುವ ಜೆಡಿಎಸ್‍ನವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದರೆ ಆ ಪಕ್ಷದಲ್ಲಿರುವ ಎಚ್‍ಬಿಆರ್ ಬಡಾವಣೆಯ ಆನಂದ್.ಪಿ, ಹೊರಮಾವಿನ ರಾಧಮ್ಮ ವೆಂಕಟೇಶ್, ಕಮ್ಮನಹಳ್ಳಿಯ ಮುನಿಲಕ್ಷ್ಮಮ್ಮ, ಜ್ಞಾನಭಾರತಿ ವಾರ್ಡ್‍ನ ತೇಜಸ್ವಿನಿ ಸೀತಾರಾಮಯ್ಯ, ಉಲ್ಲಾಳು ವಾರ್ಡ್‍ನ ಶಾರದಾ, ವರ್ತೂರಿನ ಪುಷ್ಪಾ, ಬೆಳ್ಳಂದೂರಿನ ಆಶಾಸುರೇಶ್, ಸಿಂಗಸಂದ್ರದ ಶಾಂತಾಬಾಬು, ಗೊಟ್ಟಿಗೆರೆಯ ಲಲಿತಾ ಬಿ.ನಾರಾಯಣ್ ಅವರಲ್ಲಿ ಒಬ್ಬರಿಗೆ ಮೇಯರ್ ಪಟ್ಟ ದಕ್ಕುವ ಸಾಧ್ಯತೆಗಳಿವೆ.

ಮೇಯರ್ ಸ್ಥಾನ ತಮ್ಮ ಪಕ್ಷಕ್ಕೆ ದೊರೆತರೆ ಸರ್ಕಾರ ಉದ್ದೇಶಪೂರ್ವಕವಾಗಿ ಮತ್ತೆ ಕಸದ ಸಮಸ್ಯೆಗೆ ಜೀವ ನೀಡಿ ಬಿಜೆಪಿಗೆ ಕೆಟ್ಟ ಹೆಸರು ತಂದರೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ವಿಷನ್-150 ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂಬ ಸಂಶಯದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಜೆಡಿಎಸ್ ಬೆಂಬಲ ಪಡೆಯದಿರಲು ತೀರ್ಮಾನಿಸಿದರೂ ಆಶ್ಚರ್ಯವಿಲ್ಲ. ಒಂದು ವೇಳೆ ಜೆಡಿಎಸ್ ಪಕ್ಷ ಕಾಂಗ್ರೆಸ್‍ಗೆ ಬೆಂಬಲ ನೀಡದಿರಲು ತೀರ್ಮಾನಿಸಿ ತಟಸ್ಥವಾಗಿ ಉಳಿಯಲು ತೀರ್ಮಾನಿಸಿದರೆ ಮೇಯರ್ ಪಟ್ಟ ಅನಾಯಾಸವಾಗಿ ಬಿಜೆಪಿಗೆ ಒಲಿದು ಬರಲಿದೆ.

ರೆಡ್ಡಿ ಭಯ:

ಕಳೆದ ಎರಡು ಮೇಯರ್ ಚುನಾವಣೆಗಳಲ್ಲಿ ಕಾಂಗ್ರೆಸ್‍ನ ಹಲವಾರು ವಿಧಾನಪರಿಷತ್ ಸದಸ್ಯರು ಮತ ಚಲಾಯಿಸಿದ್ದರು. ಆದರೆ ಮತ ಚಲಾವಣೆ ನಂತರ ಸ್ವಂತ ಊರಿನ ವಿಳಾಸ ನೀಡಿ ಟಿಎ-ಡಿಎ ಪಡೆದು ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪಕ್ಕೆ ಗುರಿಯಾಗಿದ್ದರು.  ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ವಿಧಾನಪರಿಷತ್ ಸದಸ್ಯರ ಈ ಅಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದು, ಸಭಾಪತಿಗಳಿಗೂ ದೂರು ನೀಡಿದ್ದಾರೆ. ಹೀಗಾಗಿ ಆರೋಪಕ್ಕೆ ಗುರಿಯಾಗಿರುವ ವಿಧಾನಪರಿಷತ್ ಸದಸ್ಯರ ನೆತ್ತಿ ಮೇಲೆ ತೂಗುಗತ್ತಿ ನೇತಾಡುತ್ತಿರುವುದರಿಂದ ಯಾರಿಗೆ ಬೇಕು ಈ ಉಸಾಬರಿ ಎಂದು ಮುಂದಿನ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸಲು ಆರೋಪಕ್ಕೆ ಗುರಿಯಾಗಿರುವ ಸದಸ್ಯರು ಬಾರದಿರಲು ತೀರ್ಮಾನಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.

ಚುನಾವಣೆಗೆ ವಿಧಾನಪರಿಷತ್ ಸದಸ್ಯರು ಗೈರು ಹಾಜರಾದರೆ ಅದರ ಲಾಭ ಬಿಜೆಪಿಗೆ ದೊರಕಲಿದೆ. ಈಗಾಗಲೇ 101 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಮೂರ್ನಾಲ್ಕು ಪಕ್ಷೇತರರು ಬೆಂಬಲ ನೀಡಿದರೆ ಸಾಕಾಗುತ್ತದೆ.  ಬಿಬಿಎಂಪಿ ಮೇಯರ್ ಯಾವ ಪಕ್ಷದವರು ಆಗಬೇಕು ಎಂಬುದನ್ನು ನಿರ್ಧರಿಸುವ ತಾಕತ್ತು ಜೆಡಿಎಸ್‍ಗಿದೆ. ಜೆಡಿಎಸ್ ಯಾವುದೇ ಪಕ್ಷಕ್ಕೂ ಬೆಂಬಲ ನೀಡಿದರೂ ಉಪಮೇಯರ್ ಸ್ಥಾನ ಆ ಪಕ್ಷಕ್ಕೆ ದೊರೆಯಲಿದೆ. ಮುಂಬರುವ ಉಪಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿರುವುದರಿಂದ ಈ ಬಾರಿ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ನೇತ್ರಾ ನಾರಾಯಣ್ ಅವರಿಗೆ ಒಲಿಯುವುದು ಖಚಿತ ಎನ್ನುತ್ತವೆ ಜೆಡಿಎಸ್ ಮೂಲಗಳು.

ಜೆಡಿಎಸ್‍ಗೆ ಕುಲಾಯಿಸುವುದೇ ಅದೃಷ್ಟ:

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಯಾವುದೇ ಕಾರಣಕ್ಕೂ ಬಿಬಿಎಂಪಿ ಆಡಳಿತವನ್ನು ಬಿಜೆಪಿಗೆ ಬಿಟ್ಟು ಕೊಡಬಾರದು ಎಂದು ಕಾಂಗ್ರೆಸ್ ಪಟ್ಟು ಹಿಡಿದು ಮುನಿಸಿಕೊಂಡಿರುವ ಜೆಡಿಎಸ್‍ಗೆ ಮೇಯರ್ ಪಟ್ಟ ಬಿಟ್ಟು ಕೊಡುವ ಮನಸ್ಸು ಮಾಡಿದರೆ ಆ ಪಕ್ಷದ ಮಾರಪ್ಪನ ಪಾಳ್ಯ ವಾರ್ಡ್‍ನ ಎಂ.ಮಹದೇವ ಅಥವಾ ಶಕ್ತಿಗಣಪತಿ ನಗರದ ಗಂಗಮ್ಮ ಅವರಿಗೆ ಮಹಾಪೌರರ ಸ್ಥಾನ ಬಳುವಳಿಯಾಗಿ ದೊರೆತರೂ ಅಚ್ಚರಿಪಡುವಂತಿಲ್ಲ.   ಒಟ್ಟಾರೆ ಹಾಲಿ ಮೇಯರ್ ಜಿ.ಪದ್ಮಾವತಿ ಅವರ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಈಗಾಗಲೇ ಬಿಬಿಎಂಪಿ ವಲಯದಲ್ಲಿ ಗುಸುಗುಸು ಆರಂಭವಾಗಿದೆ.ಯಾರು ಬೆಂಗಳೂರಿನ ಮೇಯರ್ ಆಗಲಿದ್ದಾರೆ ಎಂಬುದನ್ನು ಸೆಪ್ಟೆಂಬರ್ 10ರವರೆಗೂ ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin