ಸೆ.18 ರಂದು ವಿಷ್ಣು ಸ್ಮಾರಕ ಮೈಸೂರಿಗೆ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

Vishnuvardhan

ಬೆಂಗಳೂರು, ಆ.23– ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರ ಮಾಡಲು ಎಲ್ಲಾ ಸಿದ್ಧತೆಗಳು ನಡೆದಿದ್ದು, ಮುಂದಿನ ತಿಂಗಳು 18ರಂದು ವಿಷ್ಣು ಅವರ ಜನ್ಮ ದಿನದಂದು ಸ್ಮಾರಕ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸುವ ಸಾಧ್ಯತೆ ಇದೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಚಲನಚಿತ್ರದ ಪ್ರಮುಖರು, ವಿಷ್ಣು ಸ್ಮಾರಕ ಸ್ಥಳಾಂತರದ ಬಗ್ಗೆ ಪ್ರಸ್ತಾಪ ಮಾಡಿದರು.  ಭಾರತಿ ವಿಷ್ಣುವರ್ಧನ್, ಅವರ ಕುಟುಂಬ ಹಾಗೂ ಚಲನಚಿತ್ರರಂಗದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರೆಲ್ಲರೂ ವಿಷ್ಣು ಸ್ಮಾರಕ ಸ್ಥಳಾಂತರಕ್ಕೆ ಸಹಮತ ವ್ಯಕ್ತಪಡಿಸಿದ್ದೇವೆ ಎಂದು ಮುಖ್ಯಮಂತ್ರಿ ಅವರಿಗೆ ಹೇಳಿದರು. ಸರ್ಕಾರದವತಿಯಿಂದಲೂ ಯಾವ ಆಕ್ಷೇಪ ಇಲ್ಲ ಎಂದು ಸಿಎಂ ತಿಳಿಸಿದರು.

ಹೆಗ್ಗಡದೇವನಕೋಟೆ ರಸ್ತೆಯಲ್ಲಿ ಮೈಸೂರಿನಿಂದ 5 ಕಿ.ಮೀ.ದೂರದಲ್ಲಿ ಸ್ಮಾರಕಕ್ಕೆ 5 ಎಕರೆ ಜಾಗ ಗುರುತಿಸಲಾಗಿದೆ. ಭಾರತಿ ವಿಷ್ಣುವರ್ಧನ್ ಹಾಗೂ ಚಿತ್ರರಂಗದ ಪ್ರಮುಖರು ಸ್ಥಳ ಪರಿಶೀಲನೆ ನಡೆಸಿದ್ದು, ಸಹಮತ ವ್ಯಕ್ತಪಡಿಸಿದ್ದಾರೆ.  ಜಿಲ್ಲಾಧಿಕಾರಿಗಳು ಜಾಗವನ್ನು ಮಂಜೂರು ಮಾಡಿ ಆದೇಶ ಹೊರಡಿಸುವುದಷ್ಟೇ ಬಾಕಿ ಇದೆ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಹೇಳಿದರು.  ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಜಾಗ ಮಂಜೂರಾತಿಗೆ ಪ್ರಯತ್ನಿಸುತ್ತಿದ್ದಾರೆ. ಜಿಲ್ಲಾಧಿಕಾರಿಯವರ ಜತೆಯೂ ಮಾತುಕತೆ ನಡೆಸಿದ್ದಾರೆ ಎಂದು ಭಾರತಿ ವಿಷ್ಣುವರ್ಧನ್ ಹಾಗೂ ಸಾ.ರಾ.ಗೋವಿಂದ್ ಅವರು ಸಿಎಂ ಗಮನ ಸೆಳೆದರು ಮತ್ತು ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆ ಸೆ.18ರಂದು ನಡೆಯಲಿದೆ ಆ. ದಿನವೇ ಸ್ಮಾರಕಕ್ಕೆ ಗುದ್ದಲಿ ಪೂಜೆ ನೆರವೇರಿಸುವುದು ಸೂಕ್ತ ಎಂದು ಭಾರತಿ ವಿಷ್ಣುವರ್ಧನ್ ಹೇಳಿದಾಗ ಮುಖ್ಯಮಂತ್ರಿ ಅವರು ದೂರವಾಣಿ ಮೂಲಕ ಎಚ್.ಸಿ.ಮಹದೇವಪ್ಪ ಅವರ ಜತೆ ಮಾತನಾಡಿ ಶೀಘ್ರವೇ ಜಾಗ ಮಂಜೂರಾತಿ ಮಾಡುವಂತೆ ಸೂಚಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin