ಸೆ.2ರಂದು ದೇಶವ್ಯಾಪಿ ಸಾರಿಗೆ ಮುಷ್ಕರ : ಸ್ಥಬ್ಧವಾಗಲಿದೆ ಸಂಚಾರ ವ್ಯವಸ್ಥೆ

ಈ ಸುದ್ದಿಯನ್ನು ಶೇರ್ ಮಾಡಿ

Strike

ಬೆಂಗಳೂರು,ಆ.29- ಪ್ರಮುಖ 17 ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಸಂಘಟನೆಗಳು ಸೆ.2ರಂದು ದೇಶವ್ಯಾಪಿ ಸಾರಿಗೆ ಮುಷ್ಕರ ಹಮ್ಮಿಕೊಂಡಿವೆ. ದೇಶದ ಕಾರ್ಮಿಕರ ಹಕ್ಕುಗಳ ರಕ್ಷಣೆ, ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಪ್ರಮುಖ 17 ಬೇಡಿಕೆ ಮುಂದಿಟ್ಟು ನಡೆಯುವ ಮುಷ್ಕರಕ್ಕೆ ರಾಜ್ಯದಲ್ಲಿ ಎಐಟಿಯುಸಿ, ಸಿಐಟಿಯು ಸಂಯೋಜಿತ ಸಂಘಟನೆಗಳು ಸೇರಿ 10ಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಅಲ್ಲಿಗೆ ಶುಕ್ರವಾರ ಬಹುತೇಕ ವಾಹನಗಳ ಸಂಚಾರ ಸ್ಥಬ್ಧವಾಗಲಿದ್ದು, ಮತ್ತೊಮ್ಮೆ ಜನ ಪರದಾಡುವ ದಿನ ಎದುರಾಗಲಿದೆ.
ದೆಹಲಿಯಲ್ಲಿ ಜುಲೈ 27ರಂದು ನಡೆದಿದ್ದ ಸಭೆಯಲ್ಲಿ ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಸಮನ್ವಯ ಸಮಿತಿ ಸೆ.2ಕ್ಕೆ ದೇಶಾದ್ಯಂತ 24 ಗಂಟೆಗಳ ಬಂದ್ಗೆ ತೀರ್ಮಾನಿಸಿತ್ತು. ರಸ್ತೆ ಸಾರಿಗೆ ನೌಕರರಿಗೆ, ಸರಕು ವಹಿವಾಟಿಗೆ ಅಡ್ಡಿಯಾಗುತ್ತಿರುವ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರಗಳ ನೀತಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ಮುಷ್ಕರ ನಡೆಸಲು ರಾಜ್ಯಗಳ ಕಾರ್ಮಿಕ ಸಂಘಟನೆಗಳಿಗೆ ಕರೆ ನೀಡಿತ್ತು.

ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾದ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಸಭೆ ನಡೆಸಿ, ಎಲ್ಲ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವಂತೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಸ್ಟಾಫ್ ಮತ್ತು ವರ್ಕರ್ಸ್ ಫೆಡರೇಷನ್ ಹಾಗೂ ಸಿಐಟಿಯು ಸಂಯೋಜಿತ ಕೆಎಸ್ಆರ್ಟಿಸಿ ನೌಕರರ ಫೆಡರೇಷನ್ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ವ್ಯವಸ್ಥಾಪಕ ನಿರ್ದೇಶಕರಿಗೂ ಪತ್ರ ಬರೆದು ಸೆ. 2ರಂದು ನಿಗಮದ ಯಾವುದೇ ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ತಿಳಿವಳಿಕೆ ಪತ್ರ ನೀಡಿದೆ.

ರಾಜ್ಯದ ಟೆಂಪೊ, ಟ್ರಕ್ ಹಾಗೂ ಶಾಲಾ ವಾಹನಗಳ ನೌಕರರ ಸಂಘಗಳೂ ಮುಷ್ಕರಕ್ಕೆ ಬೆಂಬಲ ನೀಡಿವೆ. ಮೆಟ್ರೋ ರೈಲು ಓಡಾಟದ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎನ್ನಲಾಗಿದೆ. ಮುಷ್ಕರ ಬೆಳಗ್ಗೆ 6ರಿಂದ ಸ0ಜೆ 6 ಗಂಟೆಯವರೆಗೆ ನಡೆಯಲಿದೆ ಎಂದು ಸಂಘಟನೆಗಳು ತಿಳಿಸಿವೆ. ಪ್ರವಾಸಿ ಕ್ಯಾಬ್ ಅಸೋಸಿಯೇಷನ್ ಮುಷ್ಕರಕ್ಕೆ ಬೆಂಬಲ ನೀಡುವ ಕುರಿತು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಪ್ರಮುಖ ಬೇಡಿಕೆಗಳು:

ಸೆ.2ರಂದು ಕರೆ ಕೊಟ್ಟಿರುವ ಬಂದ್ ವಾಪಸ್ ಪಡೆಯಬೇಕಾದರೆ ತಮ್ಮ ಬೇಡಿಕೆ ಈಡೇರಿಸಬೇಕೆಂದು ಷರತ್ತು ವಿಧಿಸಿರುವ ಸಂಘಟನೆಗಳು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗಳಲ್ಲಿ ಪ್ರಮುಖವಾದವುಗಳು ಇವು.  ರಸ್ತೆ ಸುರಕ್ಷತಾ ಮಸೂದೆ 2016ರನ್ನು ವಾಪಸ್ ತೆಗೆದುಕೊಳ್ಳಬೇಕು, ವಿಮಾ ರಂಗದಲ್ಲಿ ವಿದೇಶಿ ನೇರ ಬ0ಡವಾಳ ಮಿತಿಯನ್ನು ಶೇ. 49ಕ್ಕೆ ಹೆಚ್ಚಿಸುವ ಸುಗ್ರೀವಾe ವಾಪಸ್ ಪಡೆಯಬೇಕು. ರಾಷ್ಟ್ರವ್ಯಾಪಿ 18 ಸಾವಿರ ಸಮಾನ ಕನಿಷ್ಠ ವೇತನ ನಿಗದಿ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ನಿಲ್ಲಿಸಬೇಕು. ಕಾರ್ಮಿಕ ಕಾನೂನು ಜಾರಿಮಾಡಬೇಕು. ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕ ನ್ಯಾಯಾಲಯ ಸ್ಥಾಪನೆಯಾಗಬೇಕು. ಎಲ್ಲ ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ಭವಿಷ್ಯ ನಿಧಿ ನೀಡಬೇಕು ಮತ್ತು ಕರ್ನಾಟಕ ಲೇರ್ಬ ಕೌನ್ಸಿಲ್ ರಚನೆ ಆಗಬೇಕು ಎನ್ನುವುದಾಗಿದೆ.

ಸೆ.2ಕ್ಕೆ ಏನೇನು ಇರಲ್ಲ ?:

ಸೆ.2ರಂದು ಸಾರಿಗೆ ವ್ಯವಸ್ಥೆ ಇರುವುದಿಲ್ಲ, ರೈಲು ಅನುಮಾನ, ಸರ್ಕಾರಿ ಬಸ್ ರಸ್ತೆಗಿಳಿಯುವುದಿಲ್ಲ, ಆಟೋ ನಿಲ್ಲಲಿದೆ. ಮೆಟ್ರೊ ಸೇವೆ ಇನ್ನೂ ನಿರ್ಧಾರವಾಗಿಲ್ಲ. ಆಪ್ ಆಧಾರಿತ ಟ್ಯಾಕ್ಸಿ ಸೇರಿದಂತೆ ಎಲ್ಲಾ ಟ್ಯಾಕ್ಸಿಗಳ ಸಂಚಾರ ಇನ್ನೂ ನಿರ್ಧಾರವಾಗಿಲ್ಲ. ಒಟ್ಟಾರೆ ಖಾಸಗಿ ವಾಹನ ಮಾತ್ರ ಸಂಚರಿಸಲಿದ್ದು, ಅದನ್ನು ಅವಲಂಬಿಸುವುದು ಅನಿವಾರ್ಯ. ರಾಜ್ಯ ಸರ್ಕಾರ ಕೂಡ ಇದುವರೆಗೂ ಯಾವುದೇ ಪರ್ಯಾಯ ಮಾರ್ಗದ ವಿವರ ನೀಡಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin