ಸೆ.8ರಂದು ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha

ಬೆಂಗಳೂರು, ಸೆ.6- ಪ್ರಸಕ್ತ ರಾಜಕೀಯ ವಿದ್ಯಮಾನಗಳು, ಮುಂಬರುವ ಚುನಾವಣೆಗಳಿಗೆ ಸಿದ್ಧತೆಗಳು, ನಿಗಮ-ಮಂಡಳಿಗಳಿಗೆ ನೇಮಕ, ಸರ್ಕಾರ ಹಾಗೂ ಪಕ್ಷದ ನಡುವೆ ಸಮನ್ವಯ ಸಾಧನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಚರ್ಚೆ ಸಂಬಂಧ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ಸೆ.8ರಂದು ನಡೆಯಲಿದೆ.  ಕಳೆದ ಒಂದೂವರೆ ವರ್ಷದ ಹಿಂದೆ ಸಮನ್ವಯ ಸಮಿತಿ ಎಂಟು ಮುಖಂಡರ ನೇತೃತ್ವದಲ್ಲಿ ರಚನೆಯಾಗಿದ್ದರೂ ಸಭೆ ನಡೆದಿರಲಿಲ್ಲ. ನಂತರ ಈ ಸಮಿತಿಗೆ 28 ಸದಸ್ಯರನ್ನು ನೇಮಿಸಿ 4 ತಿಂಗಳಾದ ಮೇಲೆ ಪ್ರಥಮ ಬಾರಿಗೆ ಸೆ.8ರಂದು ಸಭೆ ನಡೆಯುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ಆಗಸ್ಟ್‍ನಲ್ಲಿ ಸಮನ್ವಯ ಸಮಿತಿ ಸಭೆ ನಡೆಯಬೇಕಿತ್ತು. ಮುಖ್ಯಮಂತ್ರಿ ಪುತ್ರ ರಾಕೇಶ್ ಅವರು ಅನಾರೋಗ್ಯಕ್ಕೀಡಾಗಿ ಬೆಲ್ಜಿಯಂ ಸೇರಿದ್ದರಿಂದ ಅಲ್ಲಿಗೆ ಮುಖ್ಯಮಂತ್ರಿ ತೆರಳಿದ್ದರು ಹಾಗೂ ಪುತ್ರನ ಅಕಾಲಿಕ ನಿಧನದಿಂದ ಮುಖ್ಯಮಂತ್ರಿಗಳು ಅಂತ್ಯ ಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.
ಈಗ ಹೈಕಮಾಂಡ್ ಸಮನ್ವಯ ಸಮಿತಿ ಸಭೆ ನಡೆಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸೆ.8ರಂದು ಸಮನ್ವಯ ಸಮಿತಿ ಸಭೆ ನಡೆಯಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‍ಸಿಂಗ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಎಐಸಿಸಿ ಕಾರ್ಯದರ್ಶಿ ಚೆಲ್ಲಕುಮಾರ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿದಂತೆ 28 ಮಂದಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.  ನಿಗಮ-ಮಂಡಳಿಗಳಿಗೆ ಶಾಸಕರ ನೇಮಕಾತಿ ಬೇಕೆ-ಬೇಡವೇ, ಮೇಲ್ಮನೆಯಲ್ಲಿ ಖಾಲಿ ಇರುವ ನಾಮಕರಣ ಸದಸ್ಯರ ನೇಮಕ, ಬಿಬಿಎಂಪಿ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದು, 2018ರಲ್ಲಿ ಎದುರಾಗುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಸಂಬಂಧ ಈ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

ಸಂಪುಟ ವಂಚಿತ ಶಾಸಕರಿಗೆ ನಿಗಮ-ಮಂಡಳಿಗಳಲ್ಲಿ ಅವಕಾಶ ಕಲ್ಪಿಸಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಸೆಯಾಗಿದ್ದು, ಹೈಕಮಾಂಡ್ ಇದಕ್ಕೆ ಒಪ್ಪಿಲ್ಲ. ಎ.ಕೆ.ಆ್ಯಂಟನಿ ಅವರ ನೇತೃತ್ವದ ಶಿಸ್ತು ಸಮಿತಿಯ ಮಾರ್ಗಸೂಚಿಯಂತೆ ಅಧಿಕಾರ ಹಂಚಿಕೆ ಮಾಡುವಂತೆ ಸೂಚಿಸಿ ನಿಗಮ-ಮಂಡಳಿ ನೇಮಕಾತಿಯನ್ನು ಮುಂದೂಡಿದೆ. ಇನ್ನು 20 ತಿಂಗಳು ಮಾತ್ರ ಆಡಳಿತ ಇದೆ. ಅಷ್ಟರೊಳಗೆ ಸರ್ಕಾರ ಅಧಿಕಾರ ಹಂಚಿಕೆ ಮಾಡಬೇಕು. ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಸಾಧಿಸಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಸರ್ಕಾರದ ಇಮೇಜ್‍ನ್ನು ವೃದ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮನ್ವಯ ಸಮಿತಿಯಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.  ಕಾಂಗ್ರೆಸ್‍ನಲ್ಲಿ ಹಲವು ಮುನಿದ ಮನಸ್ಸುಗಳು ಬಹಳ ದಿನಗಳಿಂದ ತಮ್ಮ ಅತೃಪ್ತಿ ಹೊರಹಾಕುತ್ತಿವೆ. ಸಮನ್ವಯ ಸಮಿತಿ ಸಂದರ್ಭದಲ್ಲಿ ಈ ಅತೃಪ್ತಿ, ಅಸಮಾಧಾನ ಏನಾಗುತ್ತದೆಯೋ ಕಾದು ನೋಡಬೇಕು.

► Follow us on –  Facebook / Twitter  / Google+

Facebook Comments

Sri Raghav

Admin