ಸೇನಾ ವಾಹನದ ಮೇಲೆ ಉಗ್ರರ ದಾಳಿ : ಮೂವರು ಯೋಧರು ಗಂಭೀರ
ಶ್ರೀನಗರ, ಸೆ.7- ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಸೇನಾ ವಾಹನವೊಂದರ ಮೇಲೆ ಉಗ್ರರು ಹಠಾತ್ ದಾಳಿ ನಡೆಸಿದಾಗ ಗಡಿ ಭದ್ರತಾ ಪಡೆ (ಬಿಎಸ್ಎಫ್)ಯ ಮೂವರು ಯೋಧರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಗಾಯಾಳುಗಳನ್ನು ಸೇನಾ ಹೆಲಿಕಾಪ್ಟರ್ನಲ್ಲಿ ಶ್ರೀನಗರದ ಮಿಲಿಟರಿ ಆಸ್ಪತ್ರೆಗೆ ಕರೆದೊಯ್ದಿದ್ದು, ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ. ಜಿಲ್ಲೆಯ ಹಂದ್ವಾರಾ ಪಟ್ಟಣದ ಕ್ರಾಲ್ಗುಂಡ್ ಬಳಿ ಉಗ್ರರು ಇಂದು ಮುಂಜಾನೆ ಸೇನಾ ವಾಹನದ ಮೇಲೆ ದಾಳಿ ಮಾಡಿದರು. ಈ ಸಂದರ್ಭ ಬಿಎಸ್ಎಫ್ ಪಡೆ ಉಗ್ರರ ಮೇಲೆ ಪ್ರತಿಯಾಗಿ ಗುಂಡು ಹಾರಿಸಿ ಬೆನ್ನಟ್ಟಿದ್ದರು. ಆದರೆ ಉಗ್ರರು ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾದರು ಎಂದು ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.
ಪ್ರದೇಶವನ್ನು ಸುತ್ತುವರೆದಿರುವ ಬಿಎಸ್ಎಫ್ ಪಡೆ ಉಗ್ರರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದೆ. ಜು.8ರಂದು ಹಿಜ್ಬುಲ್ ಮತ್ತು ಬುರ್ಹಾನ್ ವಾನಿಯ ಹತ್ಯೆ ನಂತರ ಸೇನಾ ವಾಹನದ ಮೇಲೆ ನಡೆದ ಎರಡನೆ ಮಾರಕ ದಾಳಿ ಇದಾಗಿದೆ. ವಾನಿ ಹತ್ಯೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಹಿಂಸಾಚಾರ ನಡೆದಿದ್ದು, ಇದುವರೆಗೆ ಸುಮಾರು 70ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ. ಕಳೆದ ತಿಂಗಳು ಬಾರಾಮುಲ್ಲಾ ಜಿಲ್ಲೆಯ ಶ್ರೀನಗರ -ಬಾರಾಮುಲ್ಲಾ ಹೆದ್ದಾರಿಯಲ್ಲಿ ನಡೆದಿದ್ದ ಸೇನಾ ವಾಹನದ ಮೇಲಿನ ಉಗ್ರ ದಾಳಿಯಲ್ಲಿ ಇಬ್ಬರು ಯೋಧರು, ಒಬ್ಬರು ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದರು.
► Follow us on – Facebook / Twitter / Google+