ಸೇವಾ ತೆರಿಗೆ ಪಾವತಿಸದ ಸಾನಿಯಾ ಮಿರ್ಜಾಗೆ ನೋಟಿಸ್
ಹೈದರಾಬಾದ್. ಫೆ.9: ಸೇವಾ ತೆರಿಗೆ ಪಾವತಿಸದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರಿಗೆ ತೆರಿಗೆ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಸೇವಾ ತೆರಿಗೆ ಇಲಾಖೆ ನೋಟಿಸ್ ಜಾರಿಗೊಳಿಸಿದೆ. ಸೇವಾ ತೆರಿಗೆ ಇಲಾಖೆ ಪ್ರಧಾನ ಆಯುಕ್ತ ಸಾನಿಯಾ ಅವರಿಗೆ ಕಳೆದ ಫೆ. 6ನೇ ರಂದು ಸಮನ್ಸ್ ಜಾರಿ ಮಾಡಿದ್ದು ಫೆಬ್ರವರಿ 16ರೊಳಗೆ ಖುದ್ದಾಗಿ ಅಥವಾ ಸಂಬಂಧಪಟ್ಟ ಏಜೆಂಟರ್ ಇಲಾಖೆಯ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ. ಸೇವಾ ತೆರಿಗೆಗೆ ಅನ್ವಯವಾಗುವ ಹಣಕಾಸು ಕಾಯ್ದೆ 1994ರಡಿ ಮತ್ತು ಕೇಂದ್ರ ತೆರಿಗೆ ಕಾಯ್ದೆ 1944ರಡಿ ನೀವು ಖುದ್ದಾಗಿ ಇಲ್ಲವೇ ನಿಮ್ಮ ಏಜೆಂಟರ ಮೂಲಕ ಫೆಬ್ರವರಿ 16ರೊಳಗೆ ವಿಚಾರಣೆಗೆ ಕಚೇರಿಗೆ ಹಾಜರಾಗಬೇಕು. ಸಂಬಂಧಪಟ್ಟ ದಾಖಲೆಗಳನ್ನು ಕೂಡ ಸಲ್ಲಿಸಬೇಕು ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸೂಕ್ತ ಕಾರಣಗಳಿಲ್ಲದೆ ಕಚೇರಿಗೆ ಹಾಜರಾಗಲು ವಿಫಲವಾದಲ್ಲಿ ಮತ್ತು ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ತೋರಿಸದಿದ್ದಲ್ಲಿ ಐಪಿಸಿ ಸೆಕ್ಷನ್ ಅನ್ವಯ ಶಿಕ್ಷೆಗೊಳಪಡುತ್ತೀರಿ ಎಂದು ಕೂಡ ನೊಟೀಸ್ ನಲ್ಲಿ ವಿವರಿಸಲಾಗಿದೆ. 1994ರ ಹಣಕಾಸು ಕಾಯ್ದೆ ನಿಬಂಧನೆಯನ್ನು ಉಲ್ಲಂಘಿಸಿದವರು, ಸೇವಾ ತೆರಿಗೆ ಕಟ್ಟದೆ ವಂಚಿಸಿದವರನ್ನು ವಿಚಾರಣೆಗೊಳಪಡಿಸಲಾಗುತ್ತದೆ. ಸಾನಿಯಾ 20 ಲಕ್ಷ ರೂ.ಗಳ ತೆರಿಗೆ ಪಾವತಿಸದೇ ವಿಳಂಬ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತೆರಿಗೆ ವಂಚನೆ ಪ್ರಕರಣದ ಸಂಬಂಧ ಅವರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS