ಸೊಂಟದ ನೋವಿಗೆ ಕಾರಣಗಳೇನು..? ಆಯುರ್ವೇದದಲ್ಲಿದೆ ಶಾಶ್ವತ ಚಿಕಿತ್ಸೆ

ಈ ಸುದ್ದಿಯನ್ನು ಶೇರ್ ಮಾಡಿ

hip-01

ಸೈಆಟಿಕ (ಲ್ಯಾಟಿನ್ ಪದ) ಇದನ್ನು ಸೊಂಟದ ನರದ ನೋವು ಅಥವಾ ಕಟಿ ನರದ ಬೇನೆ ಅಥವಾ ಕಟಿವಾಯು ಅಥವಾ ಕಟಿ ವಾತ ಎಂದು ಕರೆಯುತ್ತಾರೆ. ಹೆಸರೇ ಹೇಳುವಂತೆ ಇದು ಮುಖ್ಯವಾಗಿ ಸೊಂಟದಲ್ಲಿ ಕಂಡುಬರುವ ಸಮಸ್ಯೆಯಾಗಿದೆ. ಕೆಳ ಸೊಂಟದಿಂದ ಕಾಲಿನವರೆಗೆ ಕಾಣಿಸಿಕೊಳ್ಳುವ ನೋವಿಗೆ ಸೈಆಟಿಕ ಎಂದು ಕರೆಯಲಾಗುತ್ತದೆ. ಈ ನೋವು ಮೊದಲು ಬೆನ್ನಿನಲ್ಲಿ ಗೋಚರಿಸಿ ನಂತರ ಹೊರಭಾಗದಿಂದ ಕಾಲಿನ ತನಕ ಹಬ್ಬುತ್ತದೆ. ಸಾಮಾನ್ಯವಾಗಿ ದೇಹದ ಒಂದು ಭಾಗದಲ್ಲಿ ಮಾತ್ರ ನೋವು ಕಾಣಿಸಿಕೊಳ್ಳುವ ಮುಖ್ಯ ಲಕ್ಷಣ ಇದಾಗಿದೆ. ಆದಾಗ್ಯೂ ಕೆಲವು ಪ್ರಕರಣಗಳಲ್ಲಿ ಎರಡು ಪಾಶ್ರ್ವಗಳಲ್ಲಿ ಯಾತನೆಗೆ ಕಾರಣವಾಗಬಹುದು.

ಕಟಿ ವಾತದ ನೋವು ಸಹಿಸಲಸಾಧ್ಯ. ನಡೆಯುವಾಗ, ನಿಂತಿರುವಾಗ, ಅಥವಾ ಬಾಗುವಾಗ, ವಾಹನ ಚಾಲನೆ ಮಾಡುವಾಗ, ಕಂಪ್ಯೂಟರ್ ಮುಂದೆ ಕೆಲಸ ಮಾಡುವಾಗ, ಮನೆಗೆಲಸ ನಿರ್ವಹಿಸುವಾಗ, ಕೆಮ್ಮುವಾಗ ಅಥವಾ ಸೀನುವಾಗ ಹಾಗೂ ದಿನನಿತ್ಯದ ಅನೇಕ ಇತರ ಚಟುವಟಿಕೆಗಳನ್ನು ನಡೆಸುವಾಗ ಇದು ಹಠಾತ್ ಮತ್ತು ತೀವ್ರ ನೋವು ನೀಡುತ್ತದೆ. ಕಟಿ ವಾಯು ಸಮಸ್ಯೆಯಿಂದ ಬಳಲುತ್ತಿರುವವರು ಅದರಲ್ಲೂ ತೀವ್ರ ಸ್ವರೂಪದ ಯಾತನೆ ಅನುಭವಿಸುವವರಿಗೆ ತಮ್ಮ ಜೀವನದ ಅನೇಕ ಸಂಗತಿಗಳಿಗೆ ಅಡಚಣೆ ಉಂಟು ಮಾಡುವ ಲಕ್ಷಣಗಳು ಕಂಡುಬರುತ್ತವೆ.

+ ಸೊಂಟ ಬೇನೆಗೆ ಕಾರಣಗಳು :

ಸೊಂಟದ ನರದಲ್ಲಿ ಕಂಡುಬರುವ ಉರಿಯೂತದಿಂದ ಕಟಿ ಬೇನೆ ಕಾಣಿಸಿಕೊಳ್ಳುತ್ತದೆ. ಕೆಳ ಸೊಂಟದ ಭಾಗದಲ್ಲಿರುವ ಅನೇಕ ನರಗಳಲ್ಲಿ ಕಟಿ ನರ ಇರುತ್ತದೆ ಹಾಗೂ ಪಿತಾಶಯದ ಮೂಲಕ ಇದು ಪ್ರತಿ ತೊಡೆವರೆಗೂ ಹಬ್ಬಿರುತ್ತದೆ. ಸೈಅಟಿಕಗೆ ಹೆಚ್ಚುವರಿ ಸಾಮಾನ್ಯ ಕಾರಣಗಳೆಂದರೆ : ಕೆಳ ಬೆನ್ನಿನಲ್ಲಿ ಬೆನ್ನುಹುರಿ ನಾಳವು ಕರಿದಾಗುವಿಕೆ (ಲಂಬರ್ ಸ್ಪೈನಲ್ ಸ್ಟೆನೋಸಿಸ್), ಬೆನ್ನುಮೂಳೆ ನಡುವೆ ಕುಷನ್ ರೀತಿ ಕಾರ್ಯನಿರ್ವಹಿಸುವ ಬೆನ್ನಿನ ತಟ್ಟೆಲುಬು (ಡಿಸ್ಕ್) ಮುರಿಯುವಿಕೆ ಅಥವಾ ತಟ್ಟೆಲುಬು ಅವನತಿ ರೋಗ (ಡಿಜನೆರೇಟಿವ್ ಡಿಸ್ಕ್ ಡೀಸಿಸ್). ಒಂದು ಬೆನ್ನುಮೂಳೆಯು ಮುಂದಕ್ಕೆ ಜಾರಿ ಇನ್ನೊಂದರ ಮೇಲೆ ಕೂರುವ ಸಮಸ್ಯೆ ಇದಾಗಿರುತ್ತದೆ. ಇದನ್ನು ಸ್ಪಾಂಡಿಲೊಲಿಸ್‍ಥೆಸಿಸ್ ಎಂದು ಕರೆಯುತ್ತಾರೆ. ಗರ್ಭಿಣಿಯರಲ್ಲಿ ಭ್ರೂಣದ ತೂಕದ ಪರಿಣಾಮವಾಗಿ ಬೆನ್ನು ನರದ ಮೇಲೆ ಒತ್ತಡ ಉಂಟಾಗುವಿಕೆ ಅಥವಾ ಕೆಳ ಬೆನ್ನು ಅಥವಾ ಪೃಷ್ಠ ಭಾಗದಲ್ಲಿನ ಸೆಳೆತದಿಂದಾಗಿ ಕಟಿ ವಾಯು ಕಂಡುಬರುತ್ತದೆ.

ಕೆಲವು ಸಂಶೋಧನೆಗಳು ಹೇಳುವಂತೆ ಅತಿಯಾದ ತೂಕ ಹೊಂದಿರುವವರು, ಸ್ಥೂಲಕಾಯರು, ಅಥವಾ ಧೂಮಪಾನಿಗಳಲ್ಲಿ ಕಟಿ ಬೇನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ತಂಬಾಕು ಬಳಕೆ, ಅಥವಾ ಯಾವುದೇ ರೀತಿಯ ನಿಕೋಟಿನ್ ಸೇವನೆಯಿಂದಾಗಿ ತಟ್ಟೆಲುಬು ಅವನತಿಗೆ ಕಾರಣವಾಗುತ್ತದೆ ಎಂಬುದು ಅಧ್ಯಯನ ಮತ್ತು ಸಂಶೋಧನೆಗಳಿಂದ ದೃಢಪಟ್ಟಿದೆ. ದಿನನಿತ್ಯ ವ್ಯಾಯಾಮ ಮಾಡದವರು, ಅತಿ ಎತ್ತರದ ಹಿಮ್ಮಡಿ ಇರುವ ಪಾದರಕ್ಷೆಗಳನ್ನು ಧರಿಸುವ ಅಥವಾ ತುಂಬಾ ಮೃದುವಾಗಿರುವ ಹಾಸಿಗೆ ಮೇಲೆ ಮಲಗುವ ಮಂದಿಯಲ್ಲಿ ಕಂಡುಬರುವ ಬೆನ್ನುನೋವು ಈ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗುತ್ತದೆ.

+ ಕಟಿ ಬೇನೆ ಲಕ್ಷಣಗಳು ಮತ್ತು ಚಿಹ್ನೆಗಳು

ಕಟಿ ಬೇನೆಯ ಲಕ್ಷಣಗಳು ಮತ್ತು ಚಿಹ್ನೆಗಳು : ಕೆಳಬೆನ್ನು ನೋವು, ಹಿಂಬದಿ ಅಥವಾ ಕಾಲು ನೋವು, ಇದು ಕುಳಿತ್ತಿದ್ದಾಗ ತೀವ್ರ ಯಾತನೆ ನೀಡುತ್ತದೆ. ಪೃಷ್ಠದ ನೋವು, ಕಾಲಿನಲ್ಲಿ ಉರಿ ಅಥವಾ ಜೋಮು ಹಿಡಿದಂತಾಗುವಿಕೆ, ಜುಮ್ಮೆನ್ನುವಿಕೆ, ದುರ್ಬಲತೆ, ನಿತ್ರಾಣ, ಉದಿಕೊಳ್ಳುವಿಕೆ ಅಥವಾ ಕಾಲು ಇಲ್ಲವೆ ಪಾದವನ್ನು ಚಲಿಸಲು ಕಷ್ಟವಾಗುವಿಕೆ.

+ ಕಟಿ ವಾತದ ಬಗ್ಗೆ ಆಯುರ್ವೇದ ದೃಷ್ಟಿಕೋನ

ಆಯುರ್ವೇದದಲ್ಲಿ ಸೈಆಟಿಕ ಅಥವಾ ಕಟಿ ಬೇನೆಯಲ್ಲಿ ಗ್ರಿಧ್ರಾಸಿ ಎಂದು ಕರೆಯುತ್ತಾರೆ. ಗ್ರಿಧ್ರಾ ಎಂದರೆ ಹದ್ದು ಎಂದರ್ಥ. ಈ ಸಮಸ್ಯೆಯಿಂದ ನರಳುತ್ತಿರುವವರು ಹದ್ದು ನಡೆಯುವಂತೆ ನಡೆಯುತ್ತಾರೆ. ವಾತ ದೋಷದಿಂದಾಗಿ ಈ ಸಮಸ್ಯೆ ಕಂಡುಬರುತ್ತದೆ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ. ವಾತ ಮತ್ತು ಕೆಲವೊಮ್ಮೆ ಕಫ ದೋಷದಿಂದಾಗಿ ಕಟಿ ವಾಯು ಗೋಚರಿಸುತ್ತದೆ.

+ ಬೆನ್ನು ನರದ ನೋವು ನಿರ್ವಹಣೆ

ಆಯುರ್ವೇದದಲ್ಲಿ ಈ ಸಮಸ್ಯೆಗೆ ಶಸ್ತ್ರಚಿಕಿತ್ಸಾರಹಿತ ಉಪಶಮನವಿದೆ ಹಾಗೂ ಚಿಕಿತ್ಸೆ ಯಶಸ್ಸಿನ ಅತ್ಯಧಿಕ ಪ್ರಮಾಣದೊಂದಿಗೆ ಚಿಕಿತ್ಸೆ ನೀಡುವಲ್ಲಿ ಪರಿಣಿತಿ ಹೊಂದಿದೆ. ದೇಹದಲ್ಲಿನ ದೋಷಗಳನ್ನು ಸಮತೋಲನ ಮಾಡುವ ಮೂಲಕ ಶರೀರದ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು ಈ ಚಿಕಿತ್ಸೆಯ ಗುರಿಯಾಗಿದೆ. ಈ ಸಮಸ್ಯೆಗೆ ಅನೇಕ ರೀತಿಯ ಚಿಕಿತ್ಸೆಗೆ ಲಭ್ಯವಿದೆ. ಮೌಖಿಕ ಚಿಕಿತ್ಸೆಗಳಿಂದ ಪಂಚಕರ್ಮ ವಿಧಾನಗಳ ತನಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಕಟಿ ವಾತ ಅಥವಾ ಕಟಿ ಬೇನೆಗೆ ಆಯುರ್ವೇದಲ್ಲಿ ಮೂರು ವಿವಿಧ ವಿಧಾನಗಳಿವೆ. ಮೊದಲನೆಯದು ಶೋಧನ, ಅಂದರೆ ದೇಹದಿಂದ ದೋಷಗಳು ಮತ್ತು ವಿಷ ವಸ್ತುಗಳನ್ನು ಹೊರ ಹಾಕುವುದು. ಎರಡನೆಯದು ಶಮನ, ಅಮದರೆ ಅಸಮತೋಲನಗೊಂಡ ದೋಷಗಳು ಅಥವಾ ದೇಹದಲ್ಲಿ ಮಾರ್ಪಾಡು ಕಾರ್ಯಕ್ಕೆ ಕಾರಣವಾದ ಅಂಗಗಳನ್ನು ಸರಿಪಡಿಸುವಿಕೆ, ಹಾಗೂ ಕೊನೆಯದಾಗಿ ರಸಾಯನ, ಅಂದರೆ, ಸ್ವಾಭಾವಿಕ ಮತ್ತು ನೈಸರ್ಗಿಕ ರೀತಿಯಲ್ಲಿ ದೇಹದ ಸ್ಥಿತಿಯ ಮರುಸ್ಥಾಪನೆ ಮತ್ತು ನಿರ್ವಹಣೆಯನ್ನು ಪುನ:ಶ್ಚೇತನಗೊಳಿಸುವಿಕೆ.

ಇದನ್ನು ಬಸ್ತಿ, ಅಭ್ಯಂಗ ರೀತಿಯ ವಿವಿಧ ಚಿಕಿತ್ಸೆಗಳಿಂದ ಸಾಧಿಸಬಹುದಾಗಿದೆ. ಕಟಿಬಸ್ತಿ, ಪರಿಶೇಕ, ಪಿಂಡಸ್ವೇದಾ ಇತ್ಯಾದಿಯಂತ ವಿವಿಧ ಬಗೆಯ ಉಪಚಾರಗಳ ಮೂಲಕ ಉಪಶಮನ ಮಾಡಬಹುದಾಗಿರುತ್ತದೆ. ಈ ಚಿಕಿತ್ಸೆಗಳಿಂದ ದೇಹದಲ್ಲಿ ಮಾರ್ಪಾಡುಗಳು ಆಗುತ್ತವೆ. ದೋಷ, ವಾತ ಮತ್ತು ಪಿತ್ತ ಸಮತೋಲನಕ್ಕೆ ಬರುತ್ತವೆ. ಮಾಂಸಖಂಡಗಳು ಮತ್ತು ಸ್ನಾಯಗಳ ಸೆಳೆತ ದೂರವಾಗುತ್ತದೆ. ನರದ ಮೇಲೆ ಒತ್ತಡ ನಿವಾರಣೆಯಾಗುತ್ತದೆ.

ಆಯುರ್ವೇದ ಚಿಕಿತ್ಸೆಯಿಂದ ಬೆನ್ನುಹುರಿ, ಬೆನ್ನಿನ ತಟ್ಟೆಲುಬು ಮತ್ತು ಇವುಗಳಿಗೆ ಆಧಾರ ನೀಡುವ ಅಂಗಾಂಶಗಳನ್ನು ಬಲಗೊಳಿಸುವ ಮತ್ತು ಪೋಷಿಸುವ ಗುರಿಯನ್ನು ಸಹ ಇವು ಹೊಂದಿರುತ್ತವೆ. ಈ ಚಿಕಿತ್ಸೆಗಳೊಂದಿಗೆ ಸಿರವೈದ್ಯ (ರಕ್ತಸ್ರಾವಣ-ನರವನ್ನು ಚುಚ್ಚುವ ಮೂಲಕ ನಂಜುಯುಕ್ತ ರಕ್ತವನ್ನು ಹೊರ ಹೋಗುವಂತೆ ಮಾಡುವ ಚಿಕಿತ್ಸೆ) ಹಾಗೂ ಅಗ್ನಿ ಕರ್ಮ (ಸುಡಣೆ ಅಥವಾ ಬರೆ ಹಾಕುವಿಕೆ-ದೋಷಪೂರಿತ ಅಂಗಾಂಶದ ಮೇಲ್ಮೈಗೆ ಬಿಸಿ ಮುಟ್ಟಿಸಿ ಸರಿಪಡಿಸುವ ಕ್ರಿಯೆ) ವಿಧಾನವನ್ನೂ ಸಹ ಆಯುರ್ವೇದದಲ್ಲಿ ಪರಿಗಣಿಸಲಾಗಿದೆ.

+ ಮಾಡಬೇಕಾದುದು ಮತ್ತು ಮಾಡಬಾರದುದು

ಆಯುರ್ವೇದದಲ್ಲಿ, ರೋಗಗಳ ನಿರ್ವಹಣೆಯಲ್ಲಿ ಆಹಾರ ಕ್ರಮಗಳು ಮತ್ತು ಪಥ್ಯಾಹಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಸಮಸ್ಯೆಯಿಂದ ನರಳುತ್ತಿರುವವರು ಕಾಳುಗಳು, ಹುರಿದ ಆಹಾರಗಳು ಮತ್ತು ಮೊಸರನ್ನು ಸೇವಿಸಬಾರದು. ಭಾರಿ ತೂಕದ ವಸ್ತುಗಳನ್ನು ಎತ್ತುವುದಾಗಲಿ ಅಥವಾ ಶ್ರಮದಾಯಿಕ ಚಟುವಟಿಕೆಗಳನ್ನಾಗಲಿ, ಅಥವಾ ಬಹುದೂರ ಪ್ರಯಾಣವನ್ನಾಗಲಿ ಮಾಡಬಾರದು ಹಾಗೂ ಶೀತಕ್ಕೆ ಒಡ್ಡಿಕೊಳ್ಳಬಾರದು.

ತುಂಬಾ ಮೃದುವಾದ ಹಾಸಿಗೆ ಬದಲು ದೃಢವಾದ ಹಾಸಿಗೆ ಬಳಸಬೇಕು. ಕೆಲವೊಂದು ಯೋಗಾಸನ ಭಂಗಿಗಳನ್ನು ಅಭ್ಯಾಸ ಮಾಡುವುದರಿಂದ ಕಟಿ ವಾತವನ್ನು ನಿವಾರಣೆ ಮಾಡಬಹುದು. ಭುಜಂಗಾಸನ, ಅರ್ಧಮತ್ಸ್ಯೇಂದ್ರಾಸನ, ಸುಪ್ತಪಾದಂಗುಷ್ಟಾಸನ, ಸುಪ್ತವೀರಾಸನ ಈ ಸಮಸ್ಯೆ ಉಪಶಮನ ಮತ್ತು ತಡೆಗಟ್ಟುವಲ್ಲಿ ನೆರವಾಗುತ್ತದೆ. ಆಯುರ್ವೇದದಲ್ಲಿ ಪ್ರತಿ ರೋಗ ಮೂಲವನ್ನು ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಈ ದೋಷಕ್ಕೂ ಉತ್ತಮ ಉಪಶಮನ ಲಭಿಸುತ್ತದೆ.

ಮತ್ತಷ್ಟು ಆರೋಗ್ಯ ಸಲಹೆಗಳಿಗಾಗಿ : www.myhealthmylifestyle.com

Facebook Comments

Sri Raghav

Admin