ಸೋನಿಯಾ ಅನಾರೋಗ್ಯ ಹಿನ್ನೆಲೆ ನಿಗಮ-ಮಂಡಳಿಗಳ ನೇಮಕ ಪ್ರಕ್ರಿಯೆ ವಿಳಂಬ

ಈ ಸುದ್ದಿಯನ್ನು ಶೇರ್ ಮಾಡಿ

Soniayd

ಬೆಂಗಳೂರು, ಆ.28- ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರು ಅನಾರೋಗ್ಯಕ್ಕೀಡಾಗಿರುವ ಹಿನ್ನೆಲೆಯಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಮತ್ತಷ್ಟು ದಿನಗಳ ಕಾಲ ಮುಂದೂಡುವ ಸಾಧ್ಯತೆ ಇದೆ. ನಿಗಮ-ಮಂಡಳಿಗಳ ನೇಮಕಾತಿ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಮಾತುಕತೆ ನಡೆಸಿ ಸಂಭಾವ್ಯ ಪಟ್ಟಿ ಸಿದ್ಧಪಡಿಸಿದ್ದರು.   ಹಜ್ ಭವನ ಉದ್ಘಾಟನೆಗೆಂದು ನಗರಕ್ಕೆ ಆಗಮಿಸಿದ್ದ ದಿಗ್ವಿಜಯ್ಸಿಂಗ್ ಸಿಎಂ ಹಾಗೂ ಪರಂ ಜತೆ ಈ ಬಗ್ಗೆ ಮಾತುಕತೆ ನಡೆಸಿ ಪಟ್ಟಿ ಅಂತಿಮಗೊಳಿಸಬೇಕಿತ್ತು. ಆದರೆ, ಎಐಸಿಸಿ ವರಿಷ್ಠರಾದ ಸೋನಿಯಾಗಾಂಧಿಯವರ ಆರೋಗ್ಯ ಸರಿಯಿಲ್ಲದ ಕಾರಣ ಈ ಬಗ್ಗೆ ಯಾವುದೇ ಮಾತುಕತೆ ನಡೆಸದೆ ತೆರಳಿದ್ದಾರೆ. ಅಲ್ಲದೆ, ಸೆಪ್ಟೆಂಬರ್ ಮೊದಲ ವಾರದಂದು ದೆಹಲಿಗೆ ಬರಲು ಸೂಚಿಸಿದ್ದಾರೆ. ಆ.24ರಂದು ಹಾಲಿ ನಿಗಮ-ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಅವಧಿ ಮುಗಿದಿತ್ತು. ಹಾಗಾಗಿ ತಿಂಗಳ ಅಂತ್ಯದೊಳಗೆ ನಿಗಮಗಳಿಗೆ ಹೊಸಬರನ್ನು ನೇಮಿಸುವ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಈಗ ವಿಳಂಬವಾಗುವ ಸಾಧ್ಯತೆ ಹೆಚ್ಚಾಗಿದೆ.

ಆಕಾಂಕ್ಷಿತರು ಈಗಾಗಲೇ ಲಾಬಿಯನ್ನು ಆರಂಭಿಸಿದ್ದರು. ಸೆಪ್ಟೆಂಬರ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಐಸಿಸಿ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ತೆರಳಲಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಲಾಬಿಗೂ ಕೊಂಚ ತಡೆ ಸಿಕ್ಕಿದೆ.   ನಿಗಮ-ಮಂಡಳಿಗಳ ನೇಮಕಾತಿ ಸಂದರ್ಭದಲ್ಲಿಯೇ ಸಂಪುಟ ವಿಸ್ತರಣೆ ಕೂಡ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಎರಡೂ ಕೆಲಸಗಳನ್ನು ಒಂದೇ ಬಾರಿ ಮಾಡುವುದು ಇವರ ಉದ್ದೇಶವಾಗಿದೆ. ಮೊದಲು ನಿಗಮ-ಮಂಡಳಿಗಳಿಗೆ ನೇಮಿಸಿದರೆ, ಅವಕಾಶ ವಂಚಿತರಿಂದ ಸಂಪುಟದ ಮೇಲೆ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಒಂದೇ ಬಾರಿ ನೇಮಕ ಮಾಡಲು ನಿರ್ಧರಿಸಿದ್ದಾರೆ. ಜಾರ್ಜ್ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಇರಾದೆ ಮುಖ್ಯಮಂತ್ರಿಗಳಿಗೆ ಇರುವ ಹಿನ್ನೆಲೆಯಲ್ಲಿ ಅವರ ಮೇಲೆ ಸಿಐಡಿ ನಡೆಸುತ್ತಿರುವ ತನಿಖೆ ಮುಗಿಯುವವರೆಗೆ ಕಾಯುವ ಸಾಧ್ಯತೆ ಇದೆ.

ಇದಾದ ನಂತರ ಸಂಪುಟಕ್ಕೆ ಇಬ್ಬರು ಹಾಗೂ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ.   ಈ ಬಾರಿ ಪ್ರಮುಖ ನಿಗಮ-ಮಂಡಳಿಗಳನ್ನು 20 ಶಾಸಕರಿಗೆ ನೀಡಲು ನಿರ್ಧರಿಸಲಾಗಿದೆ. ಇನ್ನುಳಿದಂತೆ ಪಕ್ಷದ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ನೀಡಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin