ಸೋಮಾಲಿಯಾದಲ್ಲಿ ಕಾರ್ ಬಾಂಬ್ ಸ್ಪೋಟಕ್ಕೆ 30 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Car-Bomba-01

ಮೊಗದಿಶು, ನ.27-ಜನಸಂದಣಿಯ ಮಾರುಕಟ್ಟೆಯೊಂದರಲ್ಲಿ ನಡೆದ ಭೀಕರ ಕಾರ್‍ಬಾಂಬ್ ಸ್ಫೋಟದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟು, ಅನೇಕರು ಗಂಭೀರ ಗಾಯಗೊಂಡಿರುವ ಘಟನೆ ಸೋಮಾಲಿಯಾ ರಾಜಧಾನಿ ಮೊಗಡಿಶು ನಗರದಲ್ಲಿ ನಡೆದಿದೆ. ದಕ್ಷಿಣ ಮೊಗದಿಶುವಿನ ಅಫಿಸಿಯೋನ್ ಪ್ರದೇಶದಲ್ಲಿ ವಾರಾಂತ್ಯದ ದಿನವಾದ ಶನಿವಾರ ಮಾರುಕಟ್ಟೆಯಲ್ಲಿ ಜನದಟ್ಟಣೆ ಇತ್ತು. ಇದೇ ಸಂದರ್ಭದಲ್ಲಿ ಈ ಪ್ರದೇಶಕ್ಕೆ ನುಗ್ಗಿ ಬಂದ ಕಾರೊಂದು ಸ್ಫೋಟಗೊಂಡಿತು. ಈ ದಾಳಿಯಲ್ಲಿ ಅನೇಕರು ಹತರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಇಬ್ರಾಹಿಂ ಮೊಹಮದ್ ಹೇಳಿದ್ದಾರೆ.
ಈಗಾಗಲೇ 30 ಮಂದಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿರುವ ಅನೇಕರ ಸ್ಥಿತಿ ವಿಷಮವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕವಿದೆ ಎಂದು ಅಮಿನ್ ಅಂಬ್ಯುಲೆನ್ಸ್ ಸರ್ವಿಸ್‍ನ ನಿರ್ದೇಶಕ ಅಬು ಖಾದೀರ್ ಅಬ್ದಿ ರೆಹಮಾನ್ ತಿಳಿಸಿದ್ದಾರೆ.

ಕಾರ್‍ಬಾಂಬ್ ಸ್ಫೋಟದ ನಂತರ ಮಾರುಕಟ್ಟೆಯಲ್ಲಿ ಆತಂಕ ಮತ್ತು ಗೊಂದಲದ ವಾತಾವರಣ ಉಂಟಾಯಿತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲೇ ಅನೇಕ ಮಂದಿ ಹೆಣವಾಗಿದ್ದರು ಎಂದು ಘಟನೆಯ ಪ್ರತ್ಯಕ್ಷದರ್ಶಿ ಅಬ್ದುಲಾಹಿ ಒಸ್ಮಾನ್ ಹೇಳಿದ್ದಾರೆ. ಈ ವಿಧ್ವಂಸಕ ಕೃತ್ಯದ ಹೊಣೆಯನ್ನು ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲವಾದರೂ, ಅಲ್-ಖೈದಾ ಜೊತೆ ಸಂಪರ್ಕ ಹೊಂದಿರುವ ಇಸ್ಲಾಮ್ ಬಣ ಶಾಬಾಬ್ ಕಾರಣವೆಂಬ ಶಂಕೆ ವ್ಯಕ್ತವಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin