ಸೌಂದರ್ಯ ವರ್ಧಕ ಮತ್ತು ಕೂದಲೆ ಕಸಿ ಚಿಕಿತ್ಸೆ ನೀಡುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕು

ಈ ಸುದ್ದಿಯನ್ನು ಶೇರ್ ಮಾಡಿ

Ramesh-Kumar

ಬೆಳಗಾವಿ, ನ.24- ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಚರ್ಚೆಗಾಗಿ ಸೌಂದರ್ಯ ವರ್ಧಕ ಮತ್ತು ಕೂದಲೆ ಕಸಿ ಚಿಕಿತ್ಸೆ ನೀಡುವವರು ಕೆಪಿಎಂಇ ಕಾಯ್ದೆಯಡಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇ ಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ರಮೇಶ್‍ಕುಮಾರ್ ಸೂಚನೆ ನೀಡಿದರು. ರಾಜ್ಯದಲ್ಲಿ ಖಾಸಗಿ ವ್ಯಕ್ತಿಗಳು ಕ್ಲಿನಿಕ್ ಪ್ರಾರಂಭಿಸಿ ಕೂದಲು ಕಸಿ ಮಾಡುತ್ತಿರುವ ಬಗ್ಗೆ ಚರ್ಮರೋಗ, ಕುಷ್ಠರೋಗ ತಜ್ಞರು ಹಾಗೂ ಗುಪ್ತ ರೋಗಗಳ ತಜ್ಞರ ಸಂಘದವರು ದೂರು ನೀಡಿದ್ದಾರೆ. ಅಧಿಕೃತ ಮತ್ತು ಅನರ್ಹರು ಚಿಕಿತ್ಸೆ ನೀಡುವುದನ್ನು ತಡೆಹಿಡಿಯಲು ಕೆಪಿಎಂಇ ಕಾಯ್ದೆಯಡಿ ನೋಂದಣಿ ಕಡ್ಡಾಯ ಎಂದು ಕಳೆದ ಜೂ.17ರಂದು ಸುತ್ತೋಲೆ ಹೊರಡಿಸಲಾಗಿದೆ.

ಇದನ್ನು ಆಧರಿಸಿ ಮಂಗಳೂರಿನಲ್ಲಿ ಎರಡು, ಬೆಂಗಳೂರಿನಲ್ಲಿ 14 ಕ್ಲಿನಿಕ್‍ಮತ್ತು ಸಂಸ್ಥೆಗಳು ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿವೆ. ಅವುಗಳ ಪೈಕಿ 7 ಅರ್ಜಿಗಳನ್ನು ಪರಿಗಣಿಸಿ ನೋಂದಣಿ ಪ್ರಮಾಣ ಪತ್ರ ನೀಡಲಾಗಿದೆ. 9 ಸಂಸ್ಥೆಗಳು ಅಗತ್ಯ ದಾಖಲಾತಿಗಳನ್ನು ಸಲ್ಲಿಸದೇ ಇರುವುದರಿಂದ ಅನುಮತಿ ನೀಡಿಲ್ಲ. ಈಗಾಗಲೇ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಗಳು ಮೂರು ತಿಂಗಳ ಒಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಮತ್ತು ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್‍ಮೆಂಟ್ ಕಾಯ್ದೆಯಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಶ್ನೆ ಕೇಳಿದ ಚಿಂತಾಮಣಿ ಶಾಸಕ ಎಂ.ಕೃಷ್ಣರೆಡ್ಡಿ, ನಮ್ಮ ಕ್ಷೇತ್ರದಲ್ಲಿ ಅನಧಿಕೃತ ವ್ಯಕ್ತಿಗಳು ಚಿಕಿತ್ಸೆ ನೀಡಿ ತೊಂದರೆಯಾಗಿರುವುದನ್ನು ಸದನದ ಗಮನಕ್ಕೆ ತಂದರು. ಅಂತಹವರ ವಿರುದ್ಧ ನಿರ್ದಿಷ್ಟ ದೂರು ನೀಡುವಂತೆ ಸಚಿವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಶಾಸಕ ಸಿ.ಟಿ.ರವಿ, ನಿಮಗೆ ಕೂದಲಿಲ್ಲ. ಹಾಗಾಗಿ ನಿಮಗೆ ಚಿಂತೆಯಿಲ್ಲ, ಕೂದಲು ಇರುವವರಿಗೆ ಅದರ ಚಿಂತೆ ಎಂದು ಲೇವಡಿ ಮಾಡಿದರು. ಅಷ್ಟೇ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ಸಚಿವ ರಮೇಶ್‍ಕುಮಾರ್, ನನಗೆ ಇಲ್ಲದ ಕೂದಲನ್ನು ನಿಮ್ಮ ಗಡ್ಡದಲ್ಲಿ ಅಂಟಿಸಲಾಗಿದೆ ಎಂದು ತಿರುಗೇಟು ನೀಡಿದರು. ಇದರಿಂದ ಸದನದಲ್ಲಿ ನಗೆಗಡಲಿನ ವಾತಾವರಣ ನಿರ್ಮಾಣವಾಯಿತು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin