ಸೌರ ವಿದ್ಯುತ್ ಉತ್ಪಾದನೆ ಕುರಿತ ಖಾಸಗಿ ಕಂಪೆನಿಗಳೊಂದಿಗೆ ಕಾನೂನು ಬಾಹೀರ ಒಪ್ಪಂದ : 47 ಅಧಿಕಾರಿಗಳ ಅಮಾನತು

ಈ ಸುದ್ದಿಯನ್ನು ಶೇರ್ ಮಾಡಿ

Dk-Shivakumar-Session

ಬೆಳಗಾವಿ, ನ.29 – ಸೌರ ವಿದ್ಯುತ್ ಉತ್ಪಾದನೆ ಸಂಬಂಧ ಖಾಸಗಿ ವ್ಯಕ್ತಿಗಳೊಂದಿಗೆ ಮಾಡಿಕೊಂಡ ಒಪ್ಪಂದಗಳು ಕಾನೂನು ಬಾಹೀರವಾಗಿದ್ದರಿಂದ ಒಟ್ಟು 47 ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಪಡಿಸಿರುವುದಾಗಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿಧಾನಪರಿಷತ್‍ನಲ್ಲಿ ಹೇಳಿದರು. ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯೆ ತಾರಾ ಅನುರಾಧ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮೇಲ್ಛಾವಣಿ ಸೌರ ವಿದ್ಯುತ್ ಉತ್ಪಾದನೆ ಸಂಬಂಧ ವಿದ್ಯುತ್ ಸರಬರಾಜು ಕಂಪೆನಿಗಳು ಖಾಸಗಿ ಕಂಪೆನಿಗಳೊಂದಿಗೆ ಒಟ್ಟು 565 ಒಪ್ಪಂದಗಳನ್ನು ಮಾಡಿ ಕೊಂಡಿದ್ದರು.

ಈ ಒಪ್ಪಂದಗಳು ಮಾರ್ಗಸೂಚಿಗೆ ವಿರುದ್ಧವಾಗಿದ್ದರಿಂದ ಬೆಸ್ಕಾಂನಲ್ಲಿ 24, ಚೆಸ್ಕಾಂನಲ್ಲಿ 3, ಎಸ್ಕಾಂ 16 ಹಾಗೂ ಜೆಸ್ಕಾಂನಲ್ಲಿ 4 ಸೇರಿದಂತೆ 47ಅಧಿಕಾರಿಗಳನ್ನು ಈಗಾಗಲೇ ಸೇವೆಯಿಂದ ಅಮಾನತು ಪಡಿಸಲಾಗಿದೆ. ಇದಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 26 ಅಧಿಕಾರಿ ಹಾಗೂ ನೌಕರರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸಂಬಂಧ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವೇಳೆ ಎಷ್ಟೇ ಪ್ರಭಾವಿಗಳು ಇದರಲ್ಲಿ ಶಾಮೀಲಾಗಿದ್ದರೂ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಸೌರ ವಿದ್ಯುತ್ ಉತ್ಪಾದನೆಗೆ ಮಾರ್ಗಸೂಚಿಯಂತೆ ಕಟ್ಟಡ ಮತ್ತು ಮೇಲ್ಛಾವಣಿ ಇರಬೇಕು. ಆದರೆ, ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಕೆಲವರಿಗೆ ಅನುಮತಿ ನೀಡಿದ್ದರು. ಇದರ ಬಗ್ಗೆ ಸಮಿತಿಯನ್ನು ರಚಿಸಿ ಜಿಪಿಎಸ್ ಮತ್ತು ವೀಡಿಯೋ ನಡೆಸಲಾಯಿತು.  ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜತೆ ಶಾಮೀಲಾಗಿರುವುದು ಸ್ಪಷ್ಟವಾಗಿದ್ದರಿಂದ ಒಂದೇ ದಿನದಲ್ಲಿ 47 ಅಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದ್ದೇನೆ. ನನಗೆ ಅನೇಕರಿಂದ ಒತ್ತಡ ಬಂದಿದ್ದು, ಆದರೆ, ಇಲಾಖೆಯನ್ನು ಸರಿದಾರಿಗೆ ತರಬೇಕು ಎಂಬ ಕಾರಣಕ್ಕಾಗಿ ಈ ಕ್ರಮ ಅನಿವಾರ್ಯವಾಗಿತ್ತೆಂದು ಸಚಿವರು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡರು.

ತುರ್ತುಕ್ರಮ:

ಕಾಂಗ್ರೆಸ್‍ನ ಹಿರಿಯ ಸದಸ್ಯ ಎನ್.ಎಸ್.ಬೋಸರಾಜ್ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಯಚೂರು ಜಿಲ್ಲೆಯ ಆರ್‍ಟಿಪಿಎಸ್ ಮತ್ತು ವೈಟಿಪಿಎಸ್ ಘಟಕಗಳಲ್ಲಿ ಉಷ್ಣಾಂಶ ಕಡಿಮೆ ಮಾಡಲು ಸ್ಥಾವರದ ಸುತ್ತಮುತ್ತ ಹಸಿರು ಗಿಡ, ಮರ ಬೆಳೆಸಲು ಕ್ರಮ ಕೈಗೊಂಡಿರುವುದಾಗಿ ವಿವರಿಸಿದರು.
ಉಷ್ಣಾಂಶ ಕಡಿಮೆ ಮಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಅದರ ಅನುಸಾರ ಈಗಾಗಲೇ ಮರಗಿಡ ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.  ವಿದ್ಯುತ್ ಸ್ಥಾವರ ಸ್ಥಾಪನೆಗೆ ಜಮೀನು ನೀಡಿದವರಿಗೆ ಮಾನವೀಯತೆ ದೃಷ್ಟಿಯಿಂದ ಉದ್ಯೋಗ ನೀಡುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಭರವಸೆ ಕೊಟ್ಟರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download

Facebook Comments

Sri Raghav

Admin