ಸ್ಕ್ಯಾನಿಂಗ್ ಯಂತ್ರದಲ್ಲೂ ಪತ್ತೆಯಾಗದಂತೆ ಹಣ ಪ್ಯಾಕ್ ಮಾಡಿದ್ದರು ಈ ಖದೀಮರು..!

ಈ ಸುದ್ದಿಯನ್ನು ಶೇರ್ ಮಾಡಿ

Scanning-01

ನವದೆಹಲಿ, ಡಿ.14-ಕಾಳಧನದ ವಿರುದ್ಧ ದೇಶಾದ್ಯಂತ ಸಮರ ಸಾರಿರುವ ಆದಾಯ ತೆರಿಗೆ ಮತ್ತು ಇಡಿ ಅಧಿಕಾರಿಗಳು ಕೂಡ ದೆಹಲಿ, ಹರ್ಯಾಣ, ಬೆಂಗಳೂರು ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ನಗದು ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ದೆಹಲಿಯ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ 150 ಕೋಟಿ ರೂ.ಗಳ ಶಂಕಾಸ್ಪದ ನಗದು ಠೇವಣಿ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಕರೋಲ್‍ಬಾಗ್‍ನ ಹೋಟೆಲ್‍ವೊಂದರ ಮೇಲೆ ನಿನ್ನೆ ತಡ ರಾತ್ರಿ ದಾಳಿ ನಡೆಸಿ ದಾಖಲೆಗಳಿಲ್ಲದ 3.25 ಕೋಟಿ ರೂ.ಗಳನ್ನು ವಶಪಡಿಸಿಕೊಂಡು ಐವರನ್ನು ಬಂಧಿಸಲಾಗಿದೆ. ರಹಸ್ಯ ಮಾಹಿತಿ ಮೇರೆಗೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಮತ್ತು ಆದಾಯ ತೆರಿಗೆ ಹೋಟೆಲ್ ಮೇಲೆ ದಾಳಿ ನಡೆಸಿದರು.

ಎರಡು ಕೊಠಡಿಗಳಲ್ಲಿದ್ದ ಐವರನ್ನು ಬಂಧಿಸಿ 3.25 ಕೋಟಿ ರೂ.ಗಳ ಹಳೆ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಜಾಧವ್ ತಿಳಿಸಿದ್ದಾರೆ. ಆರೋಪಿಗಳು ಸೂಟ್‍ಕೇಸ್ ಮತ್ತು ಕಾರ್ಡ್‍ಬೋರ್ಡ್ ಬಾಕ್ಸ್‍ನಲ್ಲಿ ಈ ಹಣವನ್ನು ಇಟ್ಟಿದ್ದರು. ಇವರನ್ನು ವಿಚಾರಣೆಗೆ ಒಳಪಡಿಸಿದಾಗ ಇದು ಮುಂಬೈನ ಹವಾಲ ಆಪರೇಟರ್‍ಗಳಿಗೆ ಸೇರಿದ ಹಣ ಎಂಬುದನ್ನು ಬಾಯ್ಬಿಟ್ಟಿದ್ದಾರೆ.  ಏರ್‍ಪೋರ್ಟ್ ಸ್ಕ್ಯಾನಿಂಗ್ ಯಂತ್ರಗಳಲ್ಲೂ ಪತ್ತೆಯಾಗದ ರೀತಿಯಲ್ಲಿ ಈ ನೋಟುಗಳನ್ನು ಪ್ಯಾಕ್ ಮಾಡಲು ಪ್ಯಾಕೇಜಿಂಗ್ ಪರಿಣಿತರನ್ನು ಬಳಸಿಕೊಳ್ಳಲಾಗಿತ್ತು. ಎಕ್ಸ್-ರೇ ಮೂಲಕ ಹಾದು ಹೋಗುವಾಗ ಒಳಗಿರುವ ವಸ್ತುಗಳು ಕಾಣದ ರೀತಿಯಲ್ಲಿ ಟೇಪ್‍ಗಳು ಮತ್ತು ವಯರ್‍ಗಳನ್ನು ಪ್ಯಾಕೇಜಿಂಗ್ ಪರಿಣಿತರ ಬಳಸಿದ್ದರು ಎಂದು ರವೀಂದ್ರ ಜಾಧವ್ ಹೇಳಿದ್ದಾರೆ. ಬಂಧಿತರ ಮೊಬೈಲ್ ಫೋನ್‍ಗಳಲ್ಲಿರುವ ನಂಬರ್‍ಗಳನ್ನು ಪತ್ತೆ ಮಾಡಿ ಇನ್ನಷ್ಟು ಹವಾಲ ಜಾಲವನ್ನು ಪೊಲೀಸರು ಭೇದಿಸಲು ಕಾರ್ಯೋನ್ಮುಖರಾಗಿದ್ದಾರೆ.

ಇದೇ ವೇಳೆ ಕರೋಲ್‍ಬಾಗ್ ಎಚ್‍ಡಿಎಫ್‍ಸಿ ಬ್ಯಾಂಕ್ ಶಾಖೆಯಲ್ಲಿರುವ ಸುಮಾರು 150 ಕೋಟಿ ರೂ.ಗಳ ಶಂಕಾಸ್ಪದ ನಗದು ಠೇವಣಿಗಳ ಸಂಗ್ರಹದ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತೀವ್ರ ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ, ದಾಖಲೆ ಪತ್ರಗಳನ್ನು ಪರಿಶೀಲಿಸಲಾಗುತ್ತಿದೆ.

ಏರ್‍ಪೋರ್ಟ್‍ನಲ್ಲಿ 33 ಲಕ್ಷ ರೂ. ವಶ:

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಆಫ್ಘಾನಿಸ್ತಾನ ಪ್ರಜೆಗಳನ್ನು ಬಂಧಿಸಿರುವ ಸೀಮಾ ಸುಂಕ ಅಧಿಕಾರಿಗಳು 33 ಲಕ್ಷ ರೂ. ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆ ಒಳಪಡಿಸಲಾಗಿದೆ.

ಹರ್ಯಾಣದ ವಿವಿಧೆಡೆ ದಾಳಿ:

ಇದೇ ವೇಳೆ ನಿನ್ನೆ ರಾತ್ರಿಯಿಂದ ಹರಿಯಾಣದ ವಿವಿಧೆಡೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ದಾಖಲೆ ಇಲ್ಲದ 2.8 ಕೋಟಿ ರೂ. ಕಾಳಧನವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗ ಒಳಪಡಿಸಲಾಗಿದೆ.  ಚಂಡೀಗಢದಲ್ಲಿ ದ್ವಿಚಕ್ರ ವಾಹನವೊಂದರಲ್ಲಿ ಕೊಂಡೊಯ್ಯಲಾಗುತ್ತಿದ್ದ 2 ಕೋಟಿ ರೂ.ಗಳನ್ನು ಸಹ ಆದಾಯ ತೆರಿಗೆ ಇಲಾಖೆಗಳು ವಶಪಡಿಸಿಕೊಂಡಿದ್ದಾರೆ. ಕರಾವಳಿ ರಾಜ್ಯ ಗೋವಾದಲ್ಲಿ 67 ಲಕ್ಷ ರೂ.ಗಳನ್ನು ಐಟಿ ಸಿಬ್ಬಂದಿ ಜಫ್ತಿ ಮಾಡಿದ್ದಾರೆ.  ಬೆಂಗಳೂರಿನಲ್ಲೂ 2 ಕೋಟಿ ರೂ. ಕಾಳಧನ ಜಪ್ತಿ ಮಾಡಲಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin