ಸ್ಟೀಲ್’ಗೆ ಬ್ರಿಡ್ಜ್ ತಡೆ ನೀಡಿರುವ ಹಸಿರು ನ್ಯಾಯಪೀಠದ ಆದೇಶ ಪ್ರಶ್ನಿಸಿ 25ರಂದು ಬಿಡಿಎ ಮೇಲ್ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Steel-Bridge

ಬೆಂಗಳೂರು, ನ.6- ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಉಕ್ಕಿನ ಸೇತುವೆ (ಸ್ಟೀಲ್ ಬ್ರಿಡ್ಜ್) ನಿರ್ಮಾಣಕ್ಕೆ ಚೆನ್ನೈನ ಹಸಿರು ನ್ಯಾಯಪೀಠ ನೀಡಿರುವ ಆದೇಶವನ್ನು ಪ್ರಶ್ನಿಸಿ ಬಿಡಿಎ ಇದೇ 25ರಂದು ಮೇಲ್ಮನವಿ ಸಲ್ಲಿಸಲಿದೆ. ಕಳೆದ 27ರಂದು ಚೆನ್ನೈನ ಹಸಿರು ನ್ಯಾಯಪೀಠದ ನ್ಯಾಯಾಧೀಶರು ಉಕ್ಕಿನ ಸೇತುವೆ ನಿರ್ಮಾಣ ಸಂಬಂಧ ನಾಲ್ಕು ವಾರಗಳ ಕಾಲ ತಡೆಯಾಜ್ಞೆ ನೀಡಿ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದರು. ಇದೀಗ ನ್ಯಾಯಾಲಯದ ನೋಟಿಸ್‍ಗೆ ಉತ್ತರ ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಇದೇ 25ರಂದು ಹಸಿರು ಪೀಠದ ಮುಂದೆ ತಡೆಯಾಜ್ಞೆ ತೆರವುಗೊಳಿಸುವಂತೆ ವಿಶೇಷ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ ಎಂದು ಬಿಡಿಎ ಹಿರಿಯ ಎಂಜಿನಿಯರ್ ಪಿ.ಎನ್.ನಾಯಕ್ ತಿಳಿಸಿದ್ದಾರೆ.

ನಾವು 25ರಂದು ತಡೆಯಾಜ್ಞೆ ತೆರವುಗೊಳಿಸುವಂತೆ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸುವ ಸಂಬಂಧ ಅಡ್ವೊಕೇಟ್ ಜನರಲ್ ಮಧುನಾಯಕ್, ಸಹಾಯಕ ಅಡ್ವೊಕೇಟ್ ಜನರಲ್ ಸಜ್ಜನ್ ಪೂವಯ್ಯ ಮತ್ತು ಕಾನೂನು ತಜ್ಞರ ಸಲಹೆ ಪಡೆದಿದ್ದೇವೆ. ಅವರ ಸಲಹೆಯಂತೆ ಅರ್ಜಿ ಸಲ್ಲಿಸುವುದಾಗಿ ಹೇಳಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಬೆಂಗಳೂರಿನ ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಫ್ಲೈ ಓವರ್‍ಗೆ 6.5ಕಿಮೀ ಉದ್ದದ ಉಕ್ಕಿನ ಸೇತುವೆ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಈ ರಸ್ತೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ.

ಸುಗಮ ಸಂಚಾರಕ್ಕಾಗಿ ಉಕ್ಕಿನ ಸೇತುವೆ ನಿರ್ಮಿಸುವುದು ಅನಿವಾರ್ಯವಾಗಿದೆ. ಈ ಭಾಗದಲ್ಲಿ ಫ್ಲೈ ಓವರ್ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸರ್ಕಾರ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ತೀರ್ಮಾನಿಸಿದೆ. ನ್ಯಾಯಾಲಯ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕೆಂದು ಮನವಿ ಮಾಡುವುದಾಗಿ ನಾಯಕ್ ನುಡಿದಿದ್ದಾರೆ.  ಬೆಳೆಯುತ್ತಿರುವ ಬೆಂಗಳೂರಿಗೆ ಭವಿಷ್ಯದ ಹಿತದೃಷ್ಟಿಯಿಂದ ಇದು ಅತ್ಯಂತ ಅನಿವಾರ್ಯವಾಗಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ವೆಚ್ಚದ ಬಗ್ಗೆ ತಕರಾರು ತೆಗೆದಿವೆ. ಇದು ಸಂಪೂರ್ಣವಾಗಿ ಪಾರದರ್ಶಕತೆಯಿಂದ ಕೂಡಿದ್ದು, ನಿಯಮಗಳಂತೆಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ.

ಈಗಾಗಲೇ ಎಲ್ಲವೂ ನಿಗದಿಯಂತೆ ನಡೆದಿದ್ದರೆ ನ.1ರಂದು ಕಾಮಗಾರಿ ಚಾಲನೆ ನೀಡಬೇಕಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ನೀಡಿರುವುದರಿಂದ ಸಾಧ್ಯವಾಗಿಲ್ಲ. ಸಾರ್ವಜನಿಕರಿಗೆ ಉಂಟಾಗಿರುವ ಗೊಂದಲಗಳ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮುಂದುವರಿದಿದೆ.  ಈ ಹಿನ್ನೆಲೆಯಲ್ಲಿ ತಡೆಯಾಜ್ಞೆಯನ್ನು ತೆರವುಗೊಳಿಸಲು ನಾವು ಹಸಿರು ಪೀಠಕ್ಕೆ ಮನವಿ ಮಾಡಲಿದ್ದೇವೆ. ಬಳಿಕ ಕರ್ನಾಟಕ ಹೈಕೋರ್ಟ್ ನೀಡಿರುವ ನೋಟಿಸ್‍ಗೂ ಉತ್ತರಿಸಲಾಗುವುದು. ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸಲು ಬಿಡಿಎ ಮುಂದಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin