ಸ್ಟೀಲ್ಬ್ರಿಡ್ಜ್ ನಿರ್ಮಾಣದ ಅಗತ್ಯವೇನಿದೆ..?
ಬೆಳಗಾವಿ, ನ. 23- ಬಳ್ಳಾರಿಯ ಗಣಿಧಣಿ, ಗಾಲಿ ಜನಾರ್ದನ ರೆಡ್ಡಿ ತಮ್ಮ ಪುತ್ರಿಯ ಅದ್ಧೂರಿ ವಿವಾಹಕ್ಕೆ 500 ಕೋಟಿ ರೂ.ವೆಚ್ಚ ಮಾಡಿದರೆ ಮುಖ್ಯಮಂತ್ರಿಗಳು ಅದನ್ನು ಅಸಹ್ಯವೆಂದು ವ್ಯಾಖ್ಯಾನಿಸಿದ್ದಾರೆ. ಆದರೆ, ರಾಜ್ಯದಲ್ಲಿ ಭೀಕರ ಬರ ಇರುವ ಸಂದರ್ಭದಲ್ಲಿ ಶ್ರೀಮಂತರಿಗಾಗಿ 1800 ಕೋಟಿ ರೂ.ವೆಚ್ಚದ ಸ್ಟೀಲ್ ಬ್ರಿಡ್ಜ್ ಅಗತ್ಯವೇನಿದೆ ಎಂದು ಜೆಡಿಎಸ್ ಉಪ ನಾಯಕ ವೈ.ಎಸ್.ವಿ.ದತ್ತ ಪ್ರಶ್ನಿಸಿದ್ದಾರೆ. ಬುಧವಾರ ವಿಧಾನಸಭೆಯಲ್ಲಿ ಬರ ಪರಿಸ್ಥಿತಿಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಅದ್ಧೂರಿ ಮದುವೆ ಅಸಹ್ಯವಾದರೆ, ದುಬಾರಿ ವೆಚ್ಚದಲ್ಲಿ ಒಂದು ವರ್ಗಕ್ಕೆ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಅಸಹ್ಯ ಆಗುವುದಿಲ್ಲವೇಕೆ ಎಂದು ರಾಜ್ಯ ಸರ್ಕಾರವನ್ನು ಚುಚ್ಚಿದರು.
ಪರಿಹಾರಕ್ಕೆ ಹಣವಿಲ್ಲವೇ..ರಾಜ್ಯದಲ್ಲಿನ ಬರ ಪೀಡಿತ ಪ್ರದೇಶಗಳಿಗೆ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವು ಒದಗಿಸಲು ಹಣವಿಲ್ಲವೇ ಎಂದ ಅವರು, ತಾನು ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿಗೆ ಹಣ ಕೇಳಿದರೆ ಕೇವಲ 46 ಲಕ್ಷ ರೂ.ಗಳನ್ನು ನೀಡಿದ್ದಾರೆ. ಮೇವು ಖರೀದಿಗೆ 25 ಲಕ್ಷ ರೂ.ಬೇಕು. ಆದರೆ, ಜಿಲ್ಲಾಧಿಕಾರಿಗಳ ಬಲಿ 2ಲಕ್ಷ ರೂ.ಗಳನ್ನಷ್ಟೆ ಇದೆ ಎಂದು ಹೇಳಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿನ ಬರ ಪೀಡಿತ 139 ತಾಲೂಕುಗಳಿಗೆ ತಲಾ 5 ಕೋಟಿ ರೂ.ಬಿಡುಗಡೆಗೆ ಸದಸ್ಯರು ಆಗ್ರಹಿಸುತ್ತಿದ್ದಾರೆ. ಆದರೆ, ಹಣವೇ ಇಲ್ಲದಿದ್ದರೆ ಕುಡಿಯುವ ನೀರು ಮತ್ತು ಮೇವು ಸೇರಿದಂತೆ ಪರಿಹಾರ ಕಾಮಗಾರಿ ಕೈಗೆತ್ತಿಕೊಳ್ಳಲು ಹೇಗೆ ಸಾಧ್ಯ ಎಂದ ಅವರು, ರಾಜ್ಯ ಸರ್ಕಾರದ ಎಲ್ಲ ಯೋಜನೆಗಳ ಕಾಗದದ ಮೇಲಷ್ಟೇ ಉಳಿದಿವೆ ಎಂದು ದೂರಿದರು.
ಮೇಷ್ಟ್ರೆ ಹೀಗೆ.. ಜಿಲ್ಲಾಧಿಕಾರಿಗಳು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ಬರ ಸಂಬಂಧಿ ಸಭೆಗೆ ಮಾಹಿತಿಯಿಲ್ಲದೆ ಬರುತ್ತಿದ್ದಾರೆಂದರೆ, ಈ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ಎಷ್ಟು ಹಿಡಿತವಿದೆ ಎಂಬುದಕ್ಕೆ ಸುತ್ತೋಲೆ ಸಾಕ್ಷಿಯಾಗಿದೆ. ಒಂದು ರೀತಿಯಲ್ಲಿ ಮೇಷ್ಟ್ರೆ ನಿಂತುಕೊಂಡು ಮೂತ್ರ ಮಾಡಿದರೆ, ವಿದ್ಯಾರ್ಥಿಗಳು ಓಡಾಡಿಕೊಂಡು ಮೂತ್ರ ಮಾಡುತ್ತಾರೆ ಎಂಬ ಮಾತಿನಂತಾಗಿದೆ ಈ ಸರ್ಕಾರದ ಸ್ಥಿತಿ ಎಂದು ಟೀಕಿಸಿದರು.
ಜಟಾಪಟಿ:
ಕೊಬ್ಬರಿಗೆ ಬೆಂಬಲ ಬೆಲೆ ನಿಗದಿ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಪೂರ್ಣ ನಿರ್ಲಕ್ಷ್ಯ ವಹಿಸಿವೆ. ಹೊರ ದೇಶಗಳಿಂದ ಪಾಮಾಯಿಲ್ ಆಮದು ಮಾಡಿಕೊಳ್ಳುತ್ತಿರುವುದರಿಂದ ಕೊಬ್ಬರಿ ಬೆಲೆ ಕುಸಿದಿದೆ. ಅಲ್ಲದೆ, ಪಾಮಾಯಿಲ್ ಮೇಲಿನ ತೆರಿಗೆಯನ್ನು ಕೇಂದ್ರ ಸರಕಾರ ಬಾರೀ ಪ್ರಮಾಣದಲ್ಲಿ ಇಳಿಕೆ ಮಾಡಿದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಇದರಿಂದ ಕೆಲಕಾಲ ಪರಸ್ಪರ ಗದ್ದಲ ನಡೆಯಿತು.