ಸ್ಟೀಲ್ ಬ್ರಿಡ್ಜ್’ಗೆ ಬ್ರೇಕ್..? ಯೋಜನೆಯನ್ನೇ ರದ್ದುಪಡಿಸುವ ಬಗ್ಗೆ ಚಿಂತನೆ..?

ಈ ಸುದ್ದಿಯನ್ನು ಶೇರ್ ಮಾಡಿ

Steel-Bridge-Bengaluru

ಬೆಂಗಳೂರು,ಫೆ.24-ಸಾರ್ವಜನಿಕರ ವಿರೋಧದ ನಡುವೆಯೂ ನಗರದ ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈಓವರ್‍ವರೆಗೆ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸ್ಟೀಲ್ ಬ್ರಿಡ್ಜ್(ಉಕ್ಕಿನ ಸೇತುವೆ) ನಿರ್ಮಾಣ ಸದ್ಯಕ್ಕೆ ನೆನೆಗುದಿಗೆ ಬೀಳುವ ಸಾಧ್ಯತೆಯಿದೆ.   ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಉಕ್ಕಿನ ಸೇತುವೆ ಬೆಂಬಿಡದ ಭೂತದಂತೆ ಕಾಡುತ್ತಿರುವುದರಿಂದ ಕಾಮಗಾರಿಯನ್ನು ಸದ್ಯಕ್ಕೆ ಕೈಗೊಳ್ಳದಿರಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿದುಬಂದಿದೆ.   ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಅವರ ವರ್ಚಸಿಗೆ ಸ್ಟೀಲ್ ಬ್ರಿಡ್ಜ್ ಅದ್ಯಾಕೊ ಕುಂದು ತರುತ್ತಿದೆ. ಹೀಗಾಗಿ ಯೋಜನೆಯನ್ನೇ ರದ್ದುಪಡಿಸುವ ಬಗ್ಗೆ ಚಿಂತನ ಮಂಥನ ನಡೆದಿದೆ ಎನ್ನಲಾಗಿದೆ.

ಈ ಹಿಂದೆ ಕಾಮಗಾರಿ ನಿರ್ಮಾಣಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧವಾಗಿತ್ತು. ಇದಾದ ಬಳಿಕ ಹಸಿರು ನ್ಯಾಯಪೀಠ ತಡೆ ನೀಡಿತು. 15 ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಕಾಮಗಾರಿಯಲ್ಲಿ 150 ಕೋಟಿ ಕಿಕ್‍ಬ್ಯಾಕ್ ನಡೆದಿದ್ದು ಮುಖ್ಯಮಂತ್ರಿಗೆ 65 ಕೋಟಿ ಸಂದಾಯವಾಗಿದೆ ಎಂದು ದೂರಿದ್ದರು.   ನಿನ್ನೆಯಷ್ಟೇ ಬಹಿರಂಗಗೊಂಡಿರುವ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿಯಲ್ಲಿ ಸ್ಟೀಲ್ ಬ್ರಿಡ್ಜ್ ವಿಷಯ ಪ್ರಸ್ತಾಪವಾಗಿದೆ. ಸುಮಾರು 65 ಕೋಟಿ ಸಂದಾಯವಾಗಿರುವುದನ್ನು ಡೈರಿಯಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.

ಹೀಗೆ ಸರ್ಕಾರ ಮತ್ತು ಪಕ್ಷದ ವರ್ಚಿಸ್ಸಿಗೆ ಕುಂದು ತರುತ್ತಿರುವ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೆಲ ದಿನಗಳವರೆಗೂ ಮುಂದೂಡಲು ತೀರ್ಮಾನಿಸಲಾಗಿದೆ. ಸಾರ್ವಜನಿಕರು, ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಚುನಾವಣಾ ಸಂದರ್ಭದಲ್ಲಿ ಅದೆಲ್ಲವನ್ನೂ ಮೈಮೇಲೆ ಎಳೆದುಕೊಳ್ಳದಿರಲು ಸಿಎಂ ಈ ತಂತ್ರ ರೂಪಿಸಿದ್ದಾರೆ.   ರಾಜಧಾನಿಯಲ್ಲಿ 28 ವಿಧಾನಸಭಾ ಕ್ಷೇತ್ರಗಳಿವೆ. ಯಾವುದೇ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಕನಿಷ್ಠ 15ರಿಂದ 20 ಸ್ಥಾನಗಳನ್ನು ಇಲ್ಲಿ ಗೆಲ್ಲಲೇಬೇಕಾಗುತ್ತದೆ. ಅಲ್ಲದೆ ರಾಜಧಾನಿಯಲ್ಲಿ ಪ್ರತಿಭಟನೆಗಳು ಜೋರಾದರೆ ಸಹಜವಾಗಿ ಪಕ್ಷದ ವರ್ಚಸಿಗೆ ಧಕ್ಕೆಯಾಗುತ್ತವೆ. ಈಗಾಗಲೇ ಪ್ರತಿಪಕ್ಷಗಳು ಇದರಲ್ಲಿ ಭಾರೀ ಮೊತ್ತದ ಭ್ರಷ್ಟಾಚಾರ ನಡೆಸಿವೆ ಎಂದು ಆರೋಪಿಸಿವೆ.

ತಮ್ಮ ಸರ್ಕಾರಕ್ಕೆ ಧಕ್ಕೆ ಉಂಟು ಮಾಡುತ್ತಿರುವ ಉಕ್ಕಿನ ಸೇತುವೆ ಸಹವಾಸವೇ ಬೇಡವೇ ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.   ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿವಾರಿಸಲು ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈಓವರ್‍ವರೆಗೆ ಸುಮಾರು 2 ಸಾವಿರ ಕೋಟಿ ವೆಚ್ಚದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಸರ್ಕಾರ ಮುಂದಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin