ಸ್ಮಶಾನವನ್ನೂ ನುಂಗಿದ ನುಂಗಣ್ಣರು : ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

chikkaballapura
ಚಿಕ್ಕಬಳ್ಳಾಪುರ ಅ.14- ಸ್ಮಶಾನಕ್ಕೂ ಜಾಗ ಬಿಡದೆ, ಗುಂಡುತೋಪು ರಾಜಕಾಲುವೆಗಳನ್ನು ನುಂಗಿ ನೀರು ಕುಡಿದಿರುವ ನುಂಗಣ್ಣರಿಂದ ಶವ ಹೂಳಲು ಜಾಗವಿಲ್ಲದೆ ರಸ್ತೆಯಲ್ಲಿ ಶವವಿಟ್ಟು ಪ್ರತಿಭಟಿಸಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕು ಬೆಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಲ್ಲೂಕಿನ ಬೊಮ್ಮೇನಹಳ್ಳಿ ಗ್ರಾಮದ ಚಿಕ್ಕತಿಮ್ಮಯ್ಯ ಎಂಬುವರು ಮೃತಪಟ್ಟಿದ್ದು, ಸ್ಮಶಾನಕ್ಕೆ ಕೊಂಡೊಯ್ಯಲು ರಸ್ತೆ ಸಂಪರ್ಕವಿಲ್ಲವಾಗಿದೆ. ಇದ್ದ ಕಾಲುದಾರಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಮುಚ್ಚಿಹೋಗಿದ್ದು, ರಸ್ತೆ ಸವಕಾಲಾಗಿದೆ ನಡೆದು ಹೋಗಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಮಶಾನ ಜಾಗಕ್ಕೆ ತೆರಳಲು ರಸ್ತೆ ಕಲ್ಪಿಸಿಕೊಡಿ ಎಂದು ಹೋರಾಟ ಮಾಡಿದರೂ ಕವಡೆಕಾಸಿನ ಕಿಮ್ಮತ್ತು ಸಿಗಲಿಲ್ಲ.

ಚಿಕ್ಕತಿಮ್ಮಯ್ಯ ಅವರ ಅಂತ್ಯಕ್ರಿಯೆ ನಡೆಸಲು ಮೃತದೇಹ ಹೊತ್ತೊಯ್ಯಲು ಮಾರ್ಗ ಇಲ್ಲದೆ ರೋಸಿ ಹೋದ ಗ್ರಾಮಸ್ಥರು ಗೌರಿಬಿದನೂರು-ಚಿಕ್ಕಬಳ್ಳಾಪುರ ರಸ್ತೆಯಲ್ಲಿ ಸಂಜೆ 5.30ರ ಸುಮಾರಿಗೆ ಶವ ಇಟ್ಟು ಪ್ರತಿಭಟಿಸಿದ ಕಾರಣ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ದುರ್ಗಪ್ಪ, ಸುಮಾರು ಆರೇಳು ವರ್ಷಗಳಿಂದ ಸ್ಮಶಾನ ಜಾಗಕ್ಕೆ ತೆರಳಲು ಮಾರ್ಗ ಇಲ್ಲವಾಗಿದೆ. ಏನಾದರೂ ಮಾಡಿ ಇಲ್ಲಿಗೆ ರಸ್ತೆ ಸಂಪರ್ಕ ಮಾಡಿಕೊಡಿ ಎಂದು ಶಾಸಕರಾದಿಯಾಗಿ ಗ್ರಾಮ ಪಂಚಾಯ್ತಿಗೂ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ನೋವು ತೋಡಿಕೊಂಡರು. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ರಸ್ತೆ ಕಲ್ಪಿಸಿಕೊಡುವ ಭರವಸೆ ನೀಡಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದ ನಂತರ ಪ್ರತಿಭಟನೆ ಕೈಬಿಟ್ಟು ಅಂತ್ಯಕ್ರಿಯೆ ನಡೆಸಲಾಯಿತು. ಗ್ರಾಮದ ಮುಖಂಡರಾದ ಆನಂದ್, ಗಂಗಾಧರ್, ಯಶವಂತ್ ಮುನಿಯಪ್ಪ ನಾರಾಯಣಸ್ವಾಮಿ ಮತ್ತಿತರರು ಈ ಸಂದರ್ಭದಲ್ಲಿದ್ದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin