ಸ್ವಯಂ ಘೋಷಿತ ಆಸ್ತಿ ತೆರಿಗೆ ಕಟ್ಟಲು ಬಿಬಿಎಂಪಿ ನೀಡುತ್ತಿದೆ ಹೊಸ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಡಿ.12- ಸ್ವಯಂಘೋಷಿತ ಆಸ್ತಿ ತೆರಿಗೆಯಡಿ ಸರಿಯಾಗಿ ಆಸ್ತಿ ಘೋಷಣೆ ಮಾಡಿಕೊಳ್ಳದೆ ಇರುವವರಿಗೆ ಬಿಬಿಎಂಪಿ ಒಂದು ತಿಂಗಳ ಕಾಲ ಸುವರ್ಣಾವಕಾಶ ನೀಡಿದ್ದು, ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಆಸ್ತಿ ತೆರಿಗೆ ಘೋಷಣೆ ಮಾಡಿಕೊಂಡು ಪಾವತಿಸಬಹುದಾಗಿದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಇದೇ ಡಿ.14ರಿಂದ ಜ.13ರ ವರೆಗೆ ಒಂದು ತಿಂಗಳ ಕಾಲಾವಕಾಶ ನೀಡಿದ್ದು, ಆಸ್ತಿದಾರರು ಸ್ವಯಂಘೋಷಿತ ಆಸ್ತಿ ತೆರಿಗೆಯಡಿ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸಬಹುದು. ಆನ್‍ಲೈನ್ ಮುಖಾಂತರ ಈಗಾಗಲೇ ಸಲ್ಲಿಸಿರುವ ಎಸ್‍ಎಎಸ್ ವ್ಯವಸ್ಥೆಯಡಿ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಈ ಕಾಲಾವಕಾಶ ನೀಡಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಹೇಳಿದರು.

ಆಸ್ತಿ ಪಿಐಡಿ ಸಂಖ್ಯೆ ಹಾಗೂ ಎಸ್‍ಎಎಸ್‍ನಡಿ ಕಟ್ಟಿರುವ ತೆರಿಗೆ ವಿವರಗಳು ಆನ್‍ಲೈನ್‍ನಲ್ಲಿ ಲಭ್ಯವಾಗುತ್ತವೆ. ಮಾಹಿತಿ ತಪ್ಪು ಇದ್ದರೂ ವಿವರಗಳು ಸಿಗುತ್ತವೆ. ಹಾಗಾಗಿ ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ತೆರಿಗೆ ಪಾವತಿಸಿ. ಅಲ್ಲದೆ ಈಗಾಗಲೇ ಎಸ್‍ಎಎಸ್ ಅಡಿ ಸರಿಯಾಗಿ ತೆರಿಗೆ ಪಾವತಿಸಿರುವವರು ಕೂಡ ಅಪ್‍ಡೇಟ್ ಮಾಡಿಕೊಳ್ಳುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಹೇಳಿದರು. ನಿಗದಿತ ಅವಧಿ ಮುಗಿದ ಮೇಲೆ ಪಾಲಿಕೆ ಅಧಿಕಾರಿಗಳು ಬಂದು ಸರ್ವೆ ಮಾಡಲಿದ್ದಾರೆ. ಆಗ ಅಕ್ರಮಗಳು ಕಂಡುಬಂದರೆ ಕೆಎನ್‍ಸಿ ಕಾಯ್ದೆ-108(ಎ) ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಾಲ್, ಅಪಾರ್ಟ್‍ಮೆಂಟ್, ಬಹುಮಹಡಿ ಕಟ್ಟಡಗಳ ಟೋಟಲ್ ಸ್ಟೇಷನ್ ಸರ್ವೆ ಕಾರ್ಯ ಈಗಾಗಲೇ ಆರಂಭಿಸಿದ್ದೇವೆ. ಮಾಲೀಕರು ಪಾಲಿಕೆ ಜತೆ ಕೈ ಜೋಡಿಸಬೇಕು ಎಂದು ಹೇಳಿದರು. ನಗದು ರಹಿತ ವ್ಯವಹಾರ- ಸಾಧನೆ: ಕ್ಯಾಷ್‍ಲೆಸ್ ವ್ಯವಹಾರದ ಮಾತುಗಳು ಕೇಳಿಬರುತ್ತಿವೆ. ಆದರೆ, ಬಿಬಿಎಂಪಿ ಕಳೆದ ಹಲವು ತಿಂಗಳಿನಿಂದಲೇ ನಗದು ರಹಿತ ವ್ಯವಹಾರ ಮಾಡುತ್ತಿದೆ. ಆಸ್ತಿ ತೆರಿಗೆ ಪಾವತಿ, ಟ್ರೇಡ್ ಲೈಸೆನ್ಸ್ ವಿತರಣೆ, ರೋಡ್ ಕಟಿಂಗ್‍ಗೆ ಅನುಮತಿ, ಗುತ್ತಿಗೆದಾರರಿಗೆ ಆರ್‍ಟಿಜಿಎಸ್ ಮೂಲಕ ಪಾವತಿ ಸೇರಿದಂತೆ ಎಲ್ಲವನ್ನೂ ಆನ್‍ಲೈನ್‍ನಲ್ಲೇ ವ್ಯವಹರಿಸಲಾಗುತ್ತಿದೆ ಎಂದು ಗುಣಶೇಖರ್ ಹೇಳಿದರು.

ನೋಟ್‍ಬ್ಯಾನ್ ಸಂದರ್ಭದಲ್ಲಿ ಆಸ್ತಿ ತೆರಿಗೆಯನ್ನು ಕ್ಯಾಷ್ ಮೂಲಕ ತೆಗೆದುಕೊಂಡರೆ ಸಾಕಷ್ಟು ತೆರಿಗೆ ಬಿಬಿಎಂಪಿಗೆ ಹರಿದು ಬರುತ್ತದೆ ಎಂಬ ಹಲವು ಸಲಹೆಗಳು ನಮಗೆ ಬಂದವಾದರೂ ಇ-ಆಡಳಿತವನ್ನು ಬಲವರ್ಧನೆ ಮಾಡುವ ಉದ್ದೇಶದಿಂದ ನಾವು ನಗದು ಮೂಲಕ ತೆರಿಗೆ ಸ್ವೀಕರಿಸಲಿಲ್ಲ ಎಂದರು.
ಒಂದೇ ತಿಂಗಳಲ್ಲಿ ಪಾಲಿಕೆಗೆ 100 ಕೋಟಿ ರೂ. ತೆರಿಗೆ ಬಂದಿದೆ ಎಂದು ಅವರು ಹೇಳಿದರು.

ಅಕ್ರಮ ಜಾಹೀರಾತು ಪತ್ತೆಗೆ ಜಿಐಎಸ್:

ನಗರದಲ್ಲಿ ತಲೆ ಎತ್ತಿರುವ ಅಕ್ರಮ ಜಾಹೀರಾತು ಪತ್ತೆಗೆ ಜಿಐಎಸ್ ವ್ಯವಸ್ಥೆ ಅಳವಡಿಸಲಾಗಿದೆ. ತೆರಿಗೆ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಹೈಕೋರ್ಟ್ ಬಿಬಿಎಂಪಿ ಪರ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ 2671 ಏಜೆನ್ಸಿಗಳಿಂದ 320 ಕೋಟಿ ರೂ.ಗಳನ್ನು ವಸೂಲಿ ಮಾಡಲು ಕ್ರಮ ಕೈಗೊಂಡಿದ್ದು, ಮುಂದಿನ ಎರಡು ತಿಂಗಳಲ್ಲಿ ವಸೂಲಿ ಮಾಡಲು ಎಆರ್‍ಒಗಳಿಗೆ ಸೂಚಿಸಲಾಗಿದೆ ಎಂದರು.  ನೀರು ಸರಬರಾಜುದಾರರಿಗೆ ಟ್ರೇಡ್‍ಲೈಸೆನ್ಸ್ ಕಡ್ಡಾಯ: ಕ್ಯಾನ್, ವಾಟರ್ ಟ್ಯಾಂಕ್, ಬಾಟಲ್‍ಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡುತ್ತಿರುವವರು ಇನ್ನು ಮುಂದೆ ಕಡ್ಡಾಯವಾಗಿ ಬಿಬಿಎಂಪಿಯಿಂದ ಟ್ರೇಡ್ ಲೈಸೆನ್ಸ್ ಪಡೆಯಬೇಕು. ಸಾಕಷ್ಟು ಜನ ಹೇಗೆ ಬೇಕೋ ಹಾಗೆ ನೀರು ಸರಬರಾಜು ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮತ್ತು ಶುಚಿತ್ವದ ಕಡೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಟ್ರೇಡ್ ಲೈಸೆನ್ಸ್ ನೀಡುವ ಪದ್ಧತಿ ಅಳವಡಿಸಲಾಗಿದೆ.

ನೀರು ಸರಬರಾಜು ಮಾಡುವವರು ಇನ್ನು ಮುಂದೆ ಲೈಸೆನ್ಸ್ ಪಡೆಯಬೇಕು, ಶುಚಿತ್ವದ ಕಡೆ ಗಮನ ನೀಡಬೇಕು. ಇಲ್ಲದಿದ್ದರೆ ನೋಟಿಸ್ ನೀಡಿ ಆರೋಗ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.  ವಸತಿ ಪ್ರದೇಶಗಳಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದ್ದು, ಈ ಸಂಬಂಧ ಹಲವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದರು.  ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ತೆರಿಗೆ ವ್ಯಾಪ್ತಿಯಲ್ಲಿ ಇಲ್ಲ. ಕೋಟ್ಯಂತರ ರೂ.ಗಳ ಡೊನೇಷನ್ ಪಡೆಯುವ ಶಿಕ್ಷಣ ಸಂಸ್ಥೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕೆಂಬ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದ ಅವರು, ಶಿಕ್ಷಣ ಸಂಸ್ಥೆಗಳಡಿ ಬರುವ ವಾಣಿಜ್ಯ ಕಟ್ಟಡಗಳಿಗೆ ತೆರಿಗೆ ವಿಧಿಸಲಾಗುತ್ತಿದೆ ಎಂದು ತಿಳಿಸಿದರು. ಬಿಬಿಎಂಪಿ ಆರ್ಥಿಕ ನಷ್ಟ ತಪ್ಪಿಸಲು, ಆಡಳಿತಾತ್ಮಕ ವೆಚ್ಚ ತಗ್ಗಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಹಲವಾರು ಸಲಹೆಗಳು ಬಂದಿವೆ ಎಂದರು. ನಗರದಲ್ಲಿರುವ ಮೊಬೈಲ್ ಟವರ್‍ಗಳಿಗೂ ತೆರಿಗೆ ವಿಧಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಆರ್ಥಿಕ ಇಲಾಖೆ ವಿಶೇಷ ಆಯುಕ್ತ ಮನೋಜ್ ಈ ಸಂದರ್ಭದಲ್ಲಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin