ಸ್ವಾತಂತ್ರ್ಯೋತ್ಸವದ ಮುನ್ನ ಪಾಕ್ ಕಿರಿಕ್ : ಕದನ ವಿರಾಮ ಉಲ್ಲಂಘನೆ

ಈ ಸುದ್ದಿಯನ್ನು ಶೇರ್ ಮಾಡಿ

Firing

ಜಮ್ಮು, ಆ.14- ಕಳೆದ ನಾಲ್ಕು ತಿಂಗಳುಗಳಿಂದ ತೆಪ್ಪಗಿದ್ದ `ಕಲಹಪ್ರಿಯ’ ದೇಶ ಪಾಕಿಸ್ತಾನ ಸ್ವಾತಂತ್ರ್ಯೋತ್ಸವದ ಮುನ್ನ ದಿನವಾದ ಇಂದು ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದಿದೆ. ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನಾಪಡೆ, ಜಮ್ಮು ಮತ್ತು ಕಾಶ್ಮೀರದ ಪೂಂಚ್ ವಲಯದ ಎರಡು ಸ್ಥಳಗಳ ಮೇಲೆ ಗುಂಡಿನ ಸುರಿಮಳೆ ಸುರಿಸಿದ್ದು , ತೋಪುಗಳನ್ನು ಉಡಾಯಿಸಿದೆ.   ಪಾಕ್ ಸೇನೆ ದಾಳಿಗೆ ಸೂಕ್ತ ಪ್ರತ್ಯುತ್ತರ ನೀಡುತ್ತಿರುವ ಭಾರತೀಯ ಸೇನಾಪಡೆ ಯೋಧರು, ಅಪ್ರಚೋದಿತ ಆಕ್ರಮಣದ ಸದ್ದಡಗಿಸಲು ಕಾರ್ಯೋನ್ಮುಖರಾಗಿದ್ದಾರೆ.

ಪೂಂಚ್ ವಲಯದ ಗಡಿ ನಿಯಂತ್ರಣ ರೇಖೆ ಉದ್ದಕ್ಕೂ ಪಾಕಿಸ್ತಾನ ಸೇನೆ ಅಪ್ರಚೋದಿತ ಕದನ ವಿರಾಮ ಉಲ್ಲಂಘಿಸಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಮಾನಿಶ್ ಮೆಹ್ತಾ ಜಮ್ಮುವಿನಲ್ಲಿ ತಿಳಿಸಿದ್ದಾರೆ.   ಇಂದು ಮುಂಜಾನೆ 3 ಗಂಟೆಯಿಂದ ಪೂಂಚ್ ವಲಯದಲ್ಲಿ ಪಾಕ್ ಸೇನೆ ಭಾರೀ ಮೋರ್ಟಾರ್ ಹಾಗೂ ಸ್ವಯಂಚಾಲಿತ ಶಸ್ತ್ರಗಳಿಂದ ದಾಳಿ ನಡೆಸಿದೆ ಎಂದು ಅವರು ಪಾಕಿಸ್ತಾನದ ಕೃತ್ಯವನ್ನು ವಿವರಿಸಿದ್ದಾರೆ.   ನಮ್ಮ ಪಡೆಗಳು ಸಕಾಲದಲ್ಲಿ ಪ್ರತ್ಯುತ್ತರ ನೀಡಿವೆ. ನಮ್ಮ ಪಡೆಗಳ ಕಡೆ ಸಾವು-ನೋವು ಅಥವಾ ಹಾನಿ ಸಂಭವಿಸಿಲ್ಲ. ಗಡಿಯಲ್ಲಿ ಗುಂಡಿನ ಚಕಮಕಿ ಮುಂದುವರೆದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ನಾಲ್ಕು ತಿಂಗಳ ಕಾಲ ಗಡಿಯಲ್ಲಿ ತೆಪ್ಪಗಿದ್ದ ಪಾಕ್ ಮತ್ತೆ ತಂಟೆ ಶುರು ಮಾಡಿದೆ. ಏಪ್ರಿಲ್ 10ರಂದು ಕದನ ವಿರಾಮ ಉಲ್ಲಂಘಿಸಿ ಪಾಕಿಸ್ತಾನಿ ಸೇನಾಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಕಳೆದ 16 ವರ್ಷಗಳಲ್ಲಿ ಪಾಕಿಸ್ತಾನದಿಂದ 405 ಗಡಿಯಾಚಿಗಿನ ದಾಳಿ ಪ್ರಕರಣಗಳಲ್ಲಿ 16 ನಾಗರಿಕರು ಮೃತಪಟ್ಟು  ಇತರ ಗಾಯಗೊಂಡಿದ್ದಾರೆ.   ಅಂತಾರಾಷ್ಟ್ರೀಯ ಗಡಿ(ಐಬಿ) ಉದ್ದಕ್ಕ 253 ಕದನ ವಿರಾಮ ಉಲ್ಲಂಘನೆಗಳಾಗಿದ್ದು , ಗಡಿ ನಿಯಂತ್ರಣ ರೇಖೆಯಲ್ಲಿ(ಎಲ್‍ಒಸಿ) 152 ಪ್ರಕರಣಗಳು ವರದಿಯಾಗಿವೆ.  ಯುದ್ಧ ವಿರಾಮ ಉಲ್ಲಂಘನೆಗಳಿಂದ ಸುಮಾರು 8,000ಕ್ಕೂ ಹೆಚ್ಚು ಮಂದಿ ತಾತ್ಕಾಲಿಕವಾಗಿ ಸಂತ್ರಸ್ತಗೊಂಡಿದ್ದಾರೆ. ಅವರನ್ನು ಸುರಕ್ಷಿತ ವಲಯಗಳಿಗೆ ಸ್ಥಳಾಂತರಿಸಲಾಗಿದೆ.
ಗ್ರೆನೇಡ್ ದಾಳಿ:
ಈ ಮಧ್ಯೆ ಪೂಂಚ್ ವಲಯದ ಮಾರುಕಟ್ಟೆಯಲ್ಲಿ ಶನಿವಾರ ರಾತ್ರಿ ಶಂಕಿತ ಭಯೋತ್ಪಾದಕರು ಎಸೆದ ಗ್ರೆನೇಡ್ ಸ್ಫೋಟಗೊಂಡು ಪೊಲೀಸ್ ಅಧಿಕಾರಿ ಸೇರಿ ಕನಿಷ್ಠ 15 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.   ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಒಂದೆಡೆ ಪಾಕಿಸ್ತಾನ ಸೇನೆ ಮತ್ತು ಇನ್ನೊಂದೆಡೆ ಉಗ್ರರು ದಾಳಿ ನಡೆಸುತ್ತಿದ್ದು , ಕಟ್ಟೆಚ್ಚರ ವಹಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin