ಸ್ವಾತಂತ್ರ್ಯೋತ್ಸವದ ಸಡಗರದ ಮಧ್ಯೆ ಕಾಶ್ಮೀರ ಕಣವೆಯಲ್ಲಿ ಬಂದೂಕಿನ ಸದ್ದು

ಈ ಸುದ್ದಿಯನ್ನು ಶೇರ್ ಮಾಡಿ

CRPF

ಶ್ರೀನಗರ, ಆ.15- ಭಾರತವು 70ನೆ ಸ್ವಾತಂತ್ರ್ಯೋತ್ಸವದ ಸಡಗರ-ಸಂಭ್ರಮದಲ್ಲಿರುವಾಗಲೇ ಹಿಂಸಾಚಾರ ಪೀಡಿತ ಕಾಶ್ಮೀರ ಕಣವೆಯಲ್ಲಿ ಬಂದೂಕಿನ ಸದ್ದು ಮಾಡುತ್ತಾ ಉಗ್ರಗಾಮಿಗಳು ಅಟ್ಟಹಾಸ ಮೆರೆದಿದ್ದಾರೆ.  ರಾಜಧಾನಿಯ ನೌಹಟ್ಟಾ ಪ್ರದೇಶದಲ್ಲಿ ಇಂದು ಬೆಳಗ್ಗೆ ಉಗ್ರಗಾಮಿಗಳು ಗುಂಡು ಹಾರಿಸಿ ಕನಿಷ್ಠ ಐವರು ಸಿಆರ್‍ಪಿಎಫ್ ಯೋಧರನ್ನು ಗಾಯಗೊಳಿಸಿದ್ದಾರೆ. ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಪ್ರಕ್ಷುಬ್ಧ ಪರಿಸ್ಥಿತಿ ನೆಲೆಸಿದೆ.  ಇನ್ನೊಂದೆಡೆ, ಉತ್ತರ ಕಾಶ್ಮೀರ ಉರಿ ವಲಯದಲ್ಲಿ ಒಳನುಸುಳಲು ಯತ್ನಿಸಿದ ಭಯೋತ್ಪಾದಕರ ಯತ್ನವನ್ನು ವಿಫಲಗೊಳಿಸಿದ ಸೇನಾ ಪಡೆ ಇಬ್ಬರು ಉಗ್ರರನ್ನು ಕೊಂದಿದೆ.

ನೌಹಟ್ಟಾ ಪ್ರದೇಶದ ಜಾಮಾ ಮಸೀದಿ ಬಳಿ ಇಂದು ಬೆಳಗ್ಗೆ 8.45ರ ಸಮಯದಲ್ಲಿ ಉಗ್ರಗಾಮಿಗಳ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡಿನ ಮಳೆಗರೆದರು. ಈ ದಾಳಿಯಲ್ಲಿ ಸಿಆರ್‍ರಪಿಎಫ್‍ನ ಐವರು ತೀವ್ರ ಗಾಯಗೊಂಡರು.  ಉಗ್ರರ ಸದ್ದಡಗಿಸಲು ಯೋಧರು ದಿಟ್ಟತನದಿಂದ ಪ್ರತ್ಯುತ್ತರ ನೀಡಿದ್ದು, ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ.  ಉಗ್ರರು ಆಕ್ರಮಣ ಮಾಡಲು ಸಜ್ಜಾಗಿದ್ದಾರೆಂಬ ಮಾಹಿತಿ ಮೇಲೆ ಸಿಆರ್‍ಪಿಎಫ್ ಮತ್ತು ಸ್ಥಳೀಯ ಪೊಲೀಸರು ಈ ಪ್ರದೇಶವನ್ನು ಸುತ್ತುವರೆದಿದ್ದು, ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ದಾಳಿಯಲ್ಲಿ ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಉತ್ತರ ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಉರಿ ವಲಯದಲ್ಲಿ ಅತಿಕ್ರಮಣಕ್ಕೆ ಯತ್ನಿಸಿದ ಇಬ್ಬರು ಉಗ್ರರನ್ನು ಸೇನೆ ಗುಂಡಿಕ್ಕಿ ಕೊಂದಿದೆ. ಗಡಿ ಮೂಲಕ ದೇಶದೊಳಗೆ ನುಸುಳಿ ಸ್ವಾತಂತ್ರ್ಯ ದಿನಾಚರಣೆಯಂದು ವಿಧ್ವಂಸಕ ಕೃತ್ಯಗಳನ್ನು ಎಸಗಲು ಉಗ್ರರು ಪ್ರಯತ್ನಿಸುತ್ತಿದ್ದು, ಕಟ್ಟೆಚ್ಚರ ವಹಿಸಲಾಗಿದೆ.  ಸ್ವಾತಂತ್ರ್ಯೋತ್ಸವದ ಮುನ್ನ ದಿನವಾದ ಭಾನುವಾರ ಕಾಶ್ಮೀರದ ಪೂಂಚ್ ಬಳಿ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನಾ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನಾ ಪಡೆಗಳು ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿತು.

► Follow us on –  Facebook / Twitter  / Google+

Facebook Comments

Sri Raghav

Admin