ಸ್ವಾತಂತ್ರ್ಯೋತ್ಸವ ಭಾಷಣ ಮಾಡುವಾಗ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

Kagodu-Timmalppa

ಶಿವಮೊಗ್ಗ, ಆ.15-ಸ್ವಾತಂತ್ರ್ಯೋತ್ಸವದ ಸಮಾರಂಭದ ಭಾಷಣ ಮಾಡುವಾಗ ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ನಡೆಯಿತು.  ಇಲ್ಲಿನ ಪೊಲೀಸ್ ಮೈದಾನದಲ್ಲಿ ಏರ್ಪಡಿಸಿದ್ದ 70ನೇ ಸ್ವಾತಂತ್ರ್ಯೋತ್ಸವದಲ್ಲಿ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ಭಾಷಣ ಮಾಡುತ್ತಿದ್ದಾಗ 15 ನಿಮಿಷದ ನಂತರ ಅಸ್ವಸ್ಥರಾಗಿ ಕುಸಿದುಬಿದ್ದರು.  ಕೂಡಲೇ ಅವರನ್ನು ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಅಪಾಯ ಇಲ್ಲ ಎಂದುವೈದ್ಯರು ತಿಳಿಸಿದ್ದಾರೆ. ಇದಕ್ಕೂ ಮುನ್ನ ವೇದಿಕೆಯಲ್ಲಿ ಮಾತನಾಡಿದ ಅವರು, ಬಗರ್ಹುಕುಂ ಸಾಗುವಳಿ ಸಮಿತಿ ಈ ಹಿಂದೆ ವಜಾ ಮಾಡಿದ ಅರ್ಜಿಗಳನ್ನು ಪುನರ್ ಪರಿಶೀಲಿಸಿ ಬಡವರಿಗೆ ನ್ಯಾಯ ಒದಗಿಸುವುದಾಗಿ ಘೋಷಣೆ ಮಾಡಿದರು.

ಯಾವ್ಯಾವುದೋ ಕಾರಣಕ್ಕಾಗಿ ಸಾಗುವಳಿ ಸಮಿತಿ ಅರ್ಜಿಯನ್ನು ವಜಾ ಮಾಡಿದೆ. ಅವುಗಳನ್ನು ಪುನರ್ ಪರಿಶೀಲಿಸಿ ಬಡವರಿಗೆ ಭೂಮಿ ಒದಗಿಸಿ ಕೊಡುವುದಾಗಿ ತಿಳಿಸಿದರು.
ಪಕ್ಕಾ ಪೋಡಿ ಅಧಿಕಾರ ಉಪವಿಭಾಗಾಧಿಕಾರಿಗಳಿಗಿತ್ತು. ಪೋಡಿಯಾಗಲು ಸಾಕಷ್ಟು ಕಾಲಾವಕಾಶ ಬೇಕಾಗಿತ್ತು. ಈಗ ಆ ಅಧಿಕಾರವನ್ನು ತಹಶೀಲ್ದಾರ್ ಅವರಿಗೆ ನೀಡಲಾಗಿದೆ. 15 ಲಕ್ಷ ಪೋಡಿ ಸಂಬಂಧಿತ ಅರ್ಜಿಗಳಿದ್ದು, ಹಂತ ಹಂತವಾಗಿ ಅವುಗಳನ್ನು ಇತ್ಯರ್ಥ ಪಡಿಸಲಾಗುವುದು ಎಂದು ಕಾಗೋಡು ತಿಳಿಸಿದರು.

ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕಂದಾಯ ಜಾಗದಲ್ಲಿ ನಿರ್ಮಿಸಿರುವ ಅಕ್ರಮ ಮನೆಗಳನ್ನು ಮೂರು ತಿಂಗಳೊಳಗಾಗಿ ಸಕ್ರಮಗೊಳಿಸಲಾಗುವುದು ಎಂದು ಹೇಳಿದರು.
2006ರಲ್ಲಿ ಜಾರಿಗೆ ಪಾರಂಪರಿಕ ಅರಣ್ಯ ಹಕ್ಕು ಕಾಯ್ದೆ ಇನ್ನು ಜಾರಿಯಾಗಿಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಈ ಕಾಯ್ದೆ ಜಾರಿ ಮೂಲಕ ಅರಣ್ಯ ವಾಸಿಗರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.  ಸ್ವಾತಂತ್ರ್ಯ ಎಂದರೆ ಸ್ವೇಚ್ಛೆಯಲ್ಲ. ನಮ್ಮ ಹಿರಿಯರು ತ್ಯಾಗ-ಬಲಿದಾನದಿಂದ ಗಳಿಸಿಕೊಟ್ಟ ಈ ಸ್ವಾತಂತ್ರ್ಯ ಸದುಪಯೋಗ ವಾಗಬೇಕೆಂದು ಕಾಗೋಡು ಕರೆ ನೀಡಿದರು.  ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಬಡವರಿಗಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಮುಂತಾದ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳುತ್ತಿದ್ದರು, ಇನ್ನು ಕೆಲಹೊತ್ತು ಭಾಷಣ ಮಾಡಬೇಕಿತ್ತು. ಆ ಸಂದರ್ಭದಲ್ಲೇ ಅವರು ಕುಸಿದು ಕುಳಿತರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin