ಸ್ವಾತಂತ್ರ್ಯ ದಿನಾಚರಣೆಗೆ ಬಿಗಿಬಂದೋಬಸ್ತ್ : ಗೃಹ ಸಚಿವ ಜಿ.ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwara

ಬೆಂಗಳೂರು,ಆ.11– ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಅತ್ಯಂತ ಬಿಗಿಬಂದೋಬಸ್ತ್ ಕೈಗೊಳ್ಳಲು ಮತ್ತು ಯಾವುದೇ ರೀತಿಯ ಕಾನೂನು ವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.   ವಿಕಾಸಸೌಧದಲ್ಲಿಂದು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಇತ್ತೀಚೆಗೆ ಮೈಸೂರು ಜಿಲ್ಲೆಯಲ್ಲಿ ನಡೆದ ಬಾಂಬ್ ಸ್ಫೋಟವನ್ನು ಗಂಭೀರವಾಗಿ ಪರಿಗಣಿಸಬೇಕು, ಸ್ವಾತಂತ್ರ್ಯ ದಿನಾಚರಣೆಯನ್ನು ಯಾವುದೇ ಭಯ ಮತ್ತು  ಆತಂಕದ ವಾತಾವರಣ ಇಲ್ಲದಂತೆ ಮುಕ್ತವಾಗಿ ಆಚರಿಸಲು ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ರೈಲ್ವೆ ಸ್ಟೇಷನ್, ಏರ್‍ಪೋರ್ಟ್‍ಗಳ ಮೇಲೆ ಹೆಚ್ಚಿನ ನಿಗಾವಹಿಸಿ ಕೇಂದ್ರ ಗುಪ್ತಚರ ಇಲಾಖೆಯ ಜೊತೆಯಲ್ಲಿ  ನಿರಂತರ ಸಂಪರ್ಕದಲ್ಲಿರಿ. ನೆರೆ ರಾಜ್ಯದಲ್ಲಿರುವ ಭಯೋತ್ಪಾದಕ ನಿಗ್ರಹ ದಳದ ಅಧಿಕಾರಿಗಳ ಜೊತೆಯೂ ಮಾಹಿತಿ ವಿನಿಮಯ ಮಾಡಿಕೊಳ್ಳಿ ಎಂದು ಸೂಚಿಸಿದರು.   ಇವರೆಗೂ ಕರ್ನಾಟಕದಲ್ಲಿ ಶಾಂತಿ ಸುವ್ಯವಸ್ಥೆಗೆ ಯಾವುದೆ ರೀತಿಯ ಧಕ್ಕೆಯಾಗಿಲ್ಲ. ಮುಂದೆಯೂ ಅಂಥ ವಾತಾವರಣ ನಿರ್ಮಾಣವಾಗಬಾರದು. ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅಹಿತಕರ ಘಟನೆಗಳು ನಡೆಸಲು ಸಮಾಜಘಾತುಕ ಶಕ್ತಿಗಳು ಸಂಚು ರೂಪಿಸಿವೆ ಎಂಬ ಮಾಹಿತಿ ಇದೆ.ಇದಕ್ಕೆ ಅವಕಾಶ ನೀಡಬೇಡಿ ಎಂದರು.

ಮಾಣಿಕ್ ಷಾ ಪರೇಡ್ ಗ್ರೌಂಡ್ ಮತ್ತು ಜಿಲ್ಲಾ ಮಟ್ಟದ ನಡೆಯಲ್ಲಿರುವ ಕಾರ್ಯಕ್ರಮಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸೂಚನೆ ನೀಡಿದರು. ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೆಘರಿಕ್, ಕಾನೂನು ಸುವ್ಯವಸ್ಥೆ ಅಧಿಕಾರಿಗಳು, ಗೃಹ ಇಲಾಖೆ ಕಾರ್ಯದರ್ಶಿಗಳು ಸೇರಿದಂತೆ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.   ಪೊಲೀಸ್ ಇಲಾಖೆಯಿಂದ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಚಿವರು ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

► Follow us on –  Facebook / Twitter  / Google+

Facebook Comments

Sri Raghav

Admin