ಸ್ವಾತಂತ್ರ್ಯ ದಿನಾಚರಣೆಗೆ ಭಾರತ ಸಜ್ಜು : ದೇಶಾದ್ಯಂತ ಭಾರೀ ಕಟ್ಟೆಚ್ಚರ

ಈ ಸುದ್ದಿಯನ್ನು ಶೇರ್ ಮಾಡಿ

High-Alert

ನವದೆಹಲಿ/ಬೆಂಗಳೂರು, ಆ.13-ಭಯೋತ್ಪಾದಕರ ದಾಳಿಯ ಆತಂಕದ ಕಾರ್ಮೋಡದ ನಡುವೆ 69ನೆ ಸ್ವಾತಂತ್ರ್ಯ ದಿನಾಚರಣೆಗೆ ಭಾರತ ಸಜ್ಜಾಗಿದ್ದು, ಈ ಹಿನ್ನೆಲೆಯಲ್ಲಿ ರಾಜಧಾನಿ  ನವದೆಹಲಿ ಸೇರಿದಂತೆ ದೇಶಾದ್ಯಂತ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.  ದೇಶವು ಸ್ವಾತಂತ್ರ್ಯ ದಿನಾಚರಣೆಗೆ ಸಕಲ ರೀತಿಯಲ್ಲಿ ಸಜ್ಜಾಗುತ್ತಿರುವಾಗಲೇ ಗಡಿ ಪ್ರದೇಶ ಒಳಗೊಂಡು ಹಲವೆಡೆ ಆತ್ಮಾಹುತಿ ದಾಳಿ ನಡೆಸಲು ಉಗ್ರಗಾಮಿಗಳು ಸಂಚು ರೂಪಿಸಿರುವ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.  ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮಹಾನಗರಗಳೊಂದಿಗೆ ಸೂಕ್ಷ್ಮ ಪ್ರದೇಶಗಳಲ್ಲಿ ಸೇನಾಪಡೆಗಳು ಮತ್ತು ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ಕಾಶ್ಮೀರದಲ್ಲಿ ಒಂದು ತಿಂಗಳಿನಿಂದ ಹಿಂಸಾಚಾರ ಭುಗಿಲೆದ್ದಿದ್ದು, ಅದರ ಪ್ರತಿಧ್ವನಿಯಾಗಿ ವಿವಿಧೆಡೆ ರಕ್ತಪಾತ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಬೆಂಬಲಿತ ಉಗ್ರರು ಸಂಚು ರೂಪಿಸಿರುವ ಬಗ್ಗೆ ಕೇಂದ್ರ ಗುಪ್ತದಳ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ.

ವಾಘಾ ಗಡಿಯಲ್ಲಿ ಸರ್ಪಗಾವಲು:

ಇನ್ನೊಂದೆಡೆ ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗುತ್ತಿರುವ ವೇಳೆ ಉಭಯ ದೇಶಗಳ  ಗಡಿ ಪ್ರದೇಶದಲ್ಲಿ ಹ್ಯೂಮನ್ ಬಾಂಬ್ ದಾಳಿ ನಡೆಸಿ ಶಾಂತಿ ಕದಡುವ ಕುತಂತ್ರವನ್ನು ಆಫ್ಘಾನಿಸ್ತಾನ ಮೂಲದ ತಹ್ರೀಕ್ ಎ ತಾಲಿಬಾನ್ ಸಂಘಟನೆ ರೂಪಿಸಿದೆ.  ಆ.13, 14 ಅಥವಾ 15 ರಂದು ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ವಾಘಾ ಮತ್ತು ಗಂದಾಸಿಂಗ್ ಸ್ಥಗಳಲ್ಲಿ ದಾಳಿ ನಡೆಸಲು ಕುಖ್ಯಾತ ಭಯೋತ್ಪಾದಕ ಫುಜಲ್ಲಾ ನೇತೃತ್ವದ ತಾಲಿಬಾನ್ ಸಂಘಟನೆ ಈಗಾಗಲೇ ಕೆಲವು ಆತ್ಮಾಹುತಿ ದಾಳಿಕೋರರಿಗೆ ತರಬೇತಿ ನೀಡಿ ಗಡಿಪ್ರದೇಶದತ್ತ ರವಾನಿಸಿದೆ.  ಕೇಂದ್ರ ಗೃಹ ಸಚಿವಾಲಯ ಮಾನವ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಭಾರೀ ಕಟ್ಟೆಚ್ಚರ ವಹಿಸುವಂತೆ ಎಲ್ಲೆಡೆ ಎಚ್ಚರಿಕೆ ಸಂದೇಶ ರವಾನಿಸಿದೆ.  2014ರಲ್ಲೇ ವಾಘಾ ಗಡಿಯಲ್ಲಿ ಉಗ್ರನೊಬ್ಬ ನಡೆಸಿದ ಮಾನವ ಬಾಂಬ್ ದಾಳಿಯಲ್ಲಿ 60 ಮಂದಿ ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ರಾಜಧಾನಿಯಲ್ಲಿ ಕಟ್ಟೆಚ್ಚರ:

ಬೆಂಗಳೂರಿನಲ್ಲೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಾನವ ರಹಿತ ವಿಮಾನ, ಡ್ರೋನ್ ಕ್ಯಾಮೆರಾ ಬಳಕೆ, ಬಲೂನ್ ಸೇರಿದಂತೆ ಹಾರುವ ವಸ್ತುಗಳ ಬಳಕೆ ನಿಷೇಧಿಸಲಾಗಿದೆ.   ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳ ಪರೇಡ್ ನಡೆಯುವ ಸ್ಥಳದಲ್ಲಿ ಹದ್ದಿನ ಕಣ್ಣಿನ ನಿಗಾ ಇಡಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin