ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಡ್ರೋಣ್ ನಿಷೇಧ

ಈ ಸುದ್ದಿಯನ್ನು ಶೇರ್ ಮಾಡಿ

Drone

ಬೆಂಗಳೂರು, ಆ.12- ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭದ್ರತೆಗಾಗಿ ತೀವ್ರ ನಿಗಾವಹಿಸಿರುವ ಪೊಲೀಸರು, ಹಾರಾಡುವ ಡ್ರೋಣ್ ಕ್ಯಾಮೆರಾಗಳನ್ನು ನಿಷೇಧಿಸಿದ್ದಾರೆ.  ಇತ್ತೀಚೆಗೆ ಮೈಸೂರಿನ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಬಾಂಬ್‍ಸ್ಫೋಟವಾದ ಹಿನ್ನೆಲೆಯಲ್ಲಿ ಭದ್ರತೆಗೆ ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ರಾಜ್ಯ ಹಾಗೂ ಇತರೆ ಭಾಗಗಳಲ್ಲಿ ಅಡಗಿದ್ದ ಮತ್ತು ಸಕ್ರಿಯರಾಗಿದ್ದ ಶಂಕಿತ ಭಯೋತ್ಪಾದಕರು ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕವು ಭಯೋತ್ಪಾದಕರ ಗುರಿಯಾಗಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಡ್ರೋಣ್ ಕ್ಯಾಮೆರಾಗಳನ್ನು ಎಲ್ಲೆಂದರಲ್ಲಿ ಸುಲಭವಾಗಿ ಹಾರಾಡಿಸಬಹುದು ಮತ್ತು ಇವುಗಳನ್ನು ಬಳಸಿಕೊಂಡು ವಿದ್ವಂಸಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆಯಾಗಿ ಕೇಂದ್ರ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ರಾಜ್ಯ ಗೃಹ ಇಲಾಖೆ ಸ್ವಾತಂತ್ರ್ಯ ದಿನಾಚರಣೆಯಂದು ಡ್ರೋಣ್ ಕ್ಯಾಮೆರಾಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಖಾಸಗಿ ಅಥವಾ ಸರ್ಕಾರಿ ಸೇರಿದಂತೆ ಯಾವುದೇ ಕಾರ್ಯಕ್ರಮಗಳ ಚಿತ್ರೀಕರಣಕ್ಕೆ ಡ್ರೋಣ್ ಕ್ಯಾಮೆರಗಳನ್ನು ಬಳಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದ್ದು, ಡ್ರೋಣ್ ಕ್ಯಾಮೆರ ಹೊಂದಿರುವವರಿಗೆ ಈ ಬಗ್ಗೆ ತಿಳುವಳಿಕೆ ನೀಡಲಾಗಿದೆ.  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರುವ ಮೈದಾನಗಳನ್ನು ಇಂದಿನಿಂದಲೇ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಮೈದಾನಗಳ ಸುತ್ತಮುತ್ತ ಹದ್ದಿನ ಕಣ್ಣಿನ ನಿಗಾ ಇಡಲಾಗಿದ್ದು, ಶ್ವಾನದಳಗಳ ಹಾಗೂ ಬಾಂಬ್ ತಪಾಸಣಾ ದಳದಿಂದ ಪರಿಶೀಲನೆ ನಡೆಸಲಾಗಿದೆ. ಅನಧಿಕೃತವಾಗಿ ಮೈದಾನಗಳಲ್ಲಿ ಓಡಾಡುವುದನ್ನು ನಿರ್ಬಂಧಿಸಲಾಗಿದೆ.   ಸಾರ್ವಜನಿಕ ಸ್ಥಳಗಳಲ್ಲಿ ಅನಾಮಧೇಯ ವಸ್ತುಗಳು ಮತ್ತು ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಸಹಕಾರ ನೀಡುವಂತೆ ಕೋರಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin