ಸ್ವಾಸ್ಥ್ಯ ಸಮಾಜ ನಿರ್ಮಾಣದಲ್ಲಿ ತಾಯಂದಿರ ಪಾತ್ರ ಮಹತ್ವ

ಈ ಸುದ್ದಿಯನ್ನು ಶೇರ್ ಮಾಡಿ

8

ಮುಧೋಳ,ಮಾ.25- ಹೆಣ್ಣು ಮಗಳಿಗೆ ತೋರುವ ಕಾಳಜಿಯನ್ನು ಗಂಡು ಮಗುವಿಗೂ ತೋರಿಸುವುದರಲ್ಲಿ ತಾಯಂದಿರ ಪಾತ್ರ ಮಹತ್ವದ್ದಾಗಿದ್ದು, ಅದು ಉತ್ತಮ, ಸದೃಢ ಸಮಾಜ ನಿರ್ಮಾಣದ ಅಡಿಗಲ್ಲಾಗುತ್ತದೆ ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ ಹೇಳಿದರು.ನಗರದ ರನ್ನ ಭವನದಲ್ಲಿ ತಾಲೂಕು ಪೊಲೀಸ್ ವೃತ್ತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಜರುಗಿದ ಸ್ವಾಸ್ಥ್ಯ ಸಮಾಜಕ್ಕೆ ಮಹಿಳಾ ಸಂಘಟನೆಗಳ ಪಾತ್ರ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಾತೆಯರು ತಾವು ಕೂಡಿಟ್ಟ ಹಣವನ್ನು ಯಾವುದೇ ದುರಾಸೆಗೆ ಒಳಗಾಗಿ, ಹೆಚ್ಚಿನ ಬಡ್ಡಿಯ ಆಸೆಗೆ ಬಿದ್ದು, ಕಡಿಮೆ ಅವಧಿಯಲ್ಲಿ ದ್ವಿಗುಣಗೊಳಿಸುವ ಯೋಜನೆಗಳಿಗೆ ಕಿವಿಗೊಡದೆ, ಮೋಸ ವಂಚನೆಗೊಳಗಾಗದೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಉಳಿತಾಯ ಹಣವನ್ನು ಕೂಡಿಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಇಂದು ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳು ಸಿಲುಕಿ ಹಾಳಾಗುತ್ತಿದ್ದು, ಮಕ್ಕಳ ಬೆಳವಣಿಗೆಗೆ ಮೊಬೈಲ್ ಫೋನ್ ಗಳು  ಪೂರಕವಾಗಬೇಕೆ ಹೊರತು ಮಾರಕವಾಗಬಾರದು. ಇಂದು ಪಾಲಕರು ಮಕ್ಕಳಿಗೆ ಬೈಕ್, ಕಾರು ಕೊಡಿಸುವ ಖಯಾಲಿ ಹೆಚ್ಚುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಅನವಶ್ಯಕವಾಗಿ ಯುವಕರು ವಾಹನವನ್ನು ಅತಿ ವೇಗದಿಂದ ಚಲಿಸುವ ಮೂಲಕ ಅನೇಕ ಅಪಘಾತಗಳು ಸಹ ಸಂಭವಿಸುತ್ತಿವೆ. ಹೆಲ್ಮೆಟ್ ರಹಿತ ಚಾಲನೆಯು ಸಹ ಅಷ್ಟೇ ಅಪಾಯಕಾರಿಯಾಗಿದೆ. ಈ ಕುರಿತು ಮಹಿಳೆಗೆ ತನ್ನ ಕುಟುಂಬದ ಜವಾಬ್ದಾರಿಯುತ ನಿರ್ವಹಣೆ ಮಾಡುವ ಹೊಣೆಗಾರಿಕೆಯಿದೆ ಎಂದು ಅವರು ನುಡಿದರು.

ನ್ಯಾಯವಾದಿ ಪ್ರಕಾಶ ವಸ್ತ್ರದ ಮಾತನಾಡಿ, ನಗರ ಅತಿ ಸೂಕ್ಷ್ಮ ಪ್ರದೇಶವೆಂದು ಇತ್ತೀಚಿನ ದಿನಗಳಲ್ಲಿ ಘೋಷಿಸುವಂತಾಗಿದೆ. ಕೇವಲ ಬೆರಳೆಣಿಕೆಯಷ್ಟು ಜನರು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ. ಅಂತಹವರನ್ನು ಪೊಲಿಸರು ಮಟ್ಟ ಹಾಕುವ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳಾ ದೌರ್ಜನ್ಯ, ಲೈಂಗಿಕ ಕಿರುಕುಳ, ಮಾನಹಾನಿ ಅಪರಾಧಗಳ ಕುರಿತು ಮಹಿಳೆಯರಿಗೆ ಇರುವ ಕಾನೂನಿನ ಅರಿವು ಹಾಗೂ ನೆರವು ಬಗ್ಗೆ ವಿವರಿಸಿದರು.
ಉಪನ್ಯಾಸಕಿ ಆಶಾರಾಣಿ ಚಿನಗುಂಡಿ ಉಪನ್ಯಾಸ ನೀಡಿದರು. ಡಿವೈಎಸ್‍ಪಿ ರಾಮನಗೌಡ ಹಟ್ಟಿ, ಸಿಪಿಐ ಸಂಜೀವ ಕಾಂಬಳೆ, ಪಿಎಸ್‍ಐ ಸಂತೋಷ ಹಳ್ಳೂರ, ಶಿಶು ಅಭಿವೃದ್ಧಿ ಅಧಿಕಾರಿ ಶಾರದಾ ಬನ್ನಿದಿನ್ನಿ, ಸಮಾಜ ಕಲ್ಯಾಣ ಅಧಿಕಾರಿ ಎಚ್.ಎಂ. ಪಾಟೀಲ, ಸುರೇಶ ತಳಗಡೆ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin