ಹಕ್ಕುಪತ್ರ ವಿತರಿಸಿದ ಲೋಕಾಯುಕ್ತಕ್ಕೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

pandavapura2
ಪಾಂಡವಪುರ, ಮಾ.4- ನೀರಾವರಿ ಇಲಾಖೆಗೆ ಸೇರಿದ ವಿ.ಸಿ ನಾಲಾ ಏರಿಯನ್ನು ಅಕ್ರಮವಾಗಿ ಕಬಳಿಸಿರುವ ಪುರಸಭೆ ಅದನ್ನು ನಿವೇಶನವಾಗಿ ಪರಿವರ್ತಿಸಿ ಹಂಚಿಕೆ ಮಾಡಿದೆ ಎಂದು ಆರೋಪಿಸಿ ರಾಜ್ಯ ಲೋಕಾಯುಕ್ತಕ್ಕೆ ಜನಪರ ವೇದಿಕೆ ಹಾಗೂ ಸಾರ್ವಜನಿಕರು ನೀಡಿದ ದೂರಿನನ್ವಯ ಉಪ ಲೋಕಾಯುಕ್ತರಾದ ಸುಭಾಷ್ ಬಿ.ಅಡಿ ಹಾಗೂ ಎಸ್.ಆರ್.ಪಾಟೀಲ್ ಅವರು ಪಟ್ಟಣಕ್ಕೆ ಭೇಟಿ ನೀಡಿ ವಿ.ಸಿ ನಾಲಾ ಏರಿ ಪರಿಶೀಲನೆ ನಡೆಸಿದರು.ಪಟ್ಟಣದ ವಿಜಯ ಕಾಲೇಜು ಮುಂಭಾಗ ಹಾದು ಹೋಗಿರುವ ವಿ.ಸಿ ನಾಲೆಯ ಏರಿಗೆ ಸೇರಿದ ಇಕ್ಕೆಲಗಳ ಜಾಗವನ್ನು ಅಕ್ರಮವಾಗಿ ಕಬಳಿಸಲಾಗಿದೆ ಹಾಗೂ ಈ ಜಾಗವನ್ನು ನೀರಾವರಿ ಇಲಾಖೆ ಅನುಮತಿ ಪಡೆಯದೆ ಸ್ಥಳೀಯ ಪುರಸಭೆ ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸಿ ಹಕ್ಕುಪತ್ರ ವಿತರಿಸಿದೆ ಇದು ಸರಿಯಾದ ಕ್ರಮವಲ್ಲ ಎಂದು ದೂರುದಾರರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.

ಪಟ್ಟಣಕ್ಕೆ ಆಗಮಿಸಿದ ಉಪ ಲೋಕಾಯುಕ್ತರಾದ ಸುಭಾಷ್ ಬಿ.ಅಡಿ ಹಾಗೂ ಎಸ್.ಆರ್.ಪಾಟೀಲ್ ಅವರು ಸ್ಥಳ ಪರಿಶೀಲನೆ ನಡೆಸಿದಾಗ ನೀರಾವರಿ ಇಲಾಖೆಯ ಎಇಇ ಉಮೇಶ್, ನಾಲೆ ಏರಿ ಜಾಗ ನೀರಾವರಿ ಇಲಾಖೆಗೆ ಸಂಬಂಧಪಟ್ಟಿದ್ದಾಗಿದೆ ಎಂದು ತಿಳಿಸಿದರು.ಇದರ ಬಗ್ಗೆ ನಕ್ಷೆ ತೋರಿಸಿದರೂ ಅದರಲ್ಲಿ ಸಂಪೂರ್ಣ ವಿವರ ಇರದ ಕಾರಣ ಉಪ ಲೋಕಾಯುಕ್ತರು, ತಹಸೀಲ್ದಾರ್ ಡಿ.ಹನುಮಂತರಾಯಪ್ಪಹಾಗೂ ಪುರಸಭೆ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಅವರಿಗೆ ಇದಕ್ಕೆ ಸಂಬಂಧಿಸಿದಂತೆ ಗ್ರಾಮ ಠಾಣಾ ವ್ಯಾಪ್ತಿಯನ್ನು ಗುರುತಿಸಿ ನಕ್ಷೆ ಸಿದ್ಧಪಡಿಸುವಂತೆ ಸೂಚಿಸಿದರು.ಪುರಸಭೆ ಆಡಳಿತ ಮಂಡಳಿಯು ಕಬಳಿಕೆಯಾಗಿರುವ ಜಾಗದ ಒಡೆತನವನ್ನು ನೀಡುವಂತೆ ನಡಾವಳಿ ರೂಪಿಸಿ ನೀರಾವರಿ ಇಲಾಖೆಗೆ ನೀಡಿ ಆ ಮೂಲಕ ಒಪ್ಪಿಗೆ ಪಡೆಯುವಂತೆಯೂ ಉಪ ಲೋಕಾಯುಕ್ತರು ಸೂಚಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತರು, ಲೋಕಾಯುಕ್ತ ನ್ಯಾಯಾಲಯದಲ್ಲಿ 8000ಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಉಳಿದಿವೆ. ಅವುಗಳನ್ನು ಶೀಘ್ರವೇ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದರು.ಶ್ರೀರಂಗಪಟ್ಟಣ ಡಿವೈಎಸ್ಪಿ ವಿಶ್ವನಾಥ್, ಪಾಂಡವಪುರ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಕೆ.ದೀಪಕ್, ನೀರಾವರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin